ಡಿ. 9ರ ಬಳಿಕ ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವವಿರಲ್ಲ-ಎಚ್.ಡಿ. ಕುಮಾರಸ್ವಾಮಿ ಭವಿಷ್ಯ 

ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಮುಂದಿನ ಡಿ.9ರಂದು ಹೊರಬೀಳಲಿರುವ ಉಪಚುನಾವಣೆಯ ಫಲಿತಾಂಶದ ಬಳಿಕ ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವವಿರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಎಚ್. ಡಿ. ಕುಮಾರಸ್ವಾಮಿ
ಎಚ್. ಡಿ. ಕುಮಾರಸ್ವಾಮಿ

ಚಿಕ್ಕಬಳ್ಳಾಪುರ:  ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಮುಂದಿನ ಡಿ.9ರಂದು ಹೊರಬೀಳಲಿರುವ ಉಪಚುನಾವಣೆಯ ಫಲಿತಾಂಶದ ಬಳಿಕ ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವವಿರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಸೋಮವಾರ ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಪರ ಪ್ರಚಾರ ನಡೆಸಿದ ಅವರು, ಮುಸ್ಲಿಂರ  ವಿರುದ್ಧ ದಂಗೆ ಎದ್ದಂತಹ ಶಿವ ಸೇನೆಯ ಜೊತೆ ಕೈ ಜೋಡಿಸಿದಂತಹ ಕಾಂಗ್ರೆಸ್ ಕೋಮುವಾದಿಗಳೋ ಅಥವಾ ನಾವು ಕೋಮುವಾದಿಗಳೋ ಎಂಬುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ತಿಳಿಸಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ನಾಯಕರು ನಮ್ಮನ್ನು ಕೋಮುವಾದಿಗಳು ಹಾಗೂ ಬಿಜೆಪಿಯ ಬಿ ಟೀಂ ಎಂದು ಕರೆಯುತ್ತಾರೆ. ಆದರೆ ಇವತ್ತು ಮಹಾರಾಷ್ಟ್ರದಲ್ಲಿ ಏನಾಗಿದೆ. ಶಿವಸೇನೆಯ ನಾಯಕರು ಮುಸಲ್ಮಾನರನ್ನು ಈ ದೇಶದಿಂದ ಹೊರಗಟ್ಟಬೇಕು ಎಂದು ಭಾಷಣ ಮಾಡಿದ್ದರು. ಅದೇ ಶಿವಸೇನೆಯೊಂದಿಗೆ ಕಾಂಗ್ರೆಸ್ ಕೈ ಜೋಡಿಸುತ್ತಿದೆಯೆಂದು ಟೀಕಿಸಿದರು.

ಈ ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಆರ್ಥಿಕ ಪರಿಸ್ಥಿತಿಗಳು ಏನಾಗಿವೆ ?. ಹಲವಾರು ಕಾರ್ಖಾನೆಗಳು ಮುಚ್ಚಿ ಹೋಗುತ್ತಿವೆ. ನಿರುದ್ಯೋಗ ಸಂಖ್ಯೆ ಹೆಚ್ಚಾಗುತ್ತಿದೆ ಹಾಗೂ 13 ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಜನ ಬೀದಿಗೆ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂತ್ರಸ್ತರ ನೆರವಿಗೆ ಬರಲಿಲ್ಲ. ಕೇಂದ್ರದಿಂದ ನೆರೆ ಪರಿಹಾರಕ್ಕೆ ಹಣ ತರದೇ ಬಿಜೆಪಿ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ನಿರೀಕ್ಷಿಸುವುದು ಹೇಗೆ ಎಂದು ಪ್ರಶ್ನಿಸಿದರು

ಕಾಂಗ್ರೆಸ್ , ಜೆಡಿಸ್ ಮೈತ್ರಿ ಸರ್ಕಾರ ಕೆಟ್ಟ ಸರ್ಕಾರ. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರೇ ಮುಖ್ಯ ಮಂತ್ರಿಯಾಗಬೇಕಿತ್ತು. ಸಿದ್ದರಾಮಯ್ಯನಂತಹ ಮುಖ್ಯಮಂತ್ರಿಯನ್ನು ನಾವು ಕಾಣಲು ಸಾಧ್ಯವಿಲ್ಲ ಎಂದಂತಹ ಈ ಅನರ್ಹ ಶಾಸಕ ಸುಧಾಕರ್, ಕೊನೆಗೆ ನನಗಿರಲಿ ಸಿದ್ದರಾಮಯ್ಯಅವರಿಗೆ ಟೋಪಿ ಹಾಕಿದ್ದಾರೆ ಎಂದು ಕುಟುಕಿದರು. 

ನಾನು ಮುಖ್ಯ ಮಂತ್ರಿಯಾಗಿದ್ದಾಗ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ, ಕಾಂಗ್ರೆಸ್ ಆಡಳಿತದಲ್ಲಿ ನನಗೆ ಹಲವಾರು ರೀತಿಯ ಅವಮಾನ ಹಾಗೂ ಕಿರುಕುಳ ಕೊಟ್ಟಿದ್ದಾರೆ. ಅದು ಯಾವುದೂ ನನ್ನ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಬಡವರಿಗೆ ಮತ್ತು ರೈತರಿಗೆ 25 ಸಾವಿರ ಕೋಟಿ  ಸಾಲವನ್ನು ಮನ್ನಾ ಮಾಡಿದ್ದೇನೆ ಎಂದು ತಿಳಿಸಿದರು

ಅಂಬೇಡ್ಕರ್ ರಚನೆ ಮಾಡಿದ ಸಂವಿಧಾನವನ್ನು ಬದಲಾಯಿಸಿ ಬಿಜೆಪಿ ಸರ್ಕಾರ ಮಕ್ಕಳಿಗೆ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿಲ್ಲ ಎಂದು ಬೋಧನೆ ಮಾಡಲು ಹೊರಟಿದೆ. ಇದು ಸಮಾಜಕ್ಕೆ ಮಾಡುವ ಅವಮಾನ. ಪ್ರಧಾನಿ ನರೇಂದ್ರ ಮೋದಿಯಿಂದ ಈ ದೇಶ ಮಾರಾಟವಾಗುತ್ತಿದೆ. ಈ ದೇಶದಲ್ಲಿ ಬಿಜೆಪಿ ಸರ್ಕಾರದಿಂದ ರೈತರಿಗೆ ಉಳಿಗಾಳವಿಲ್ಲ. ರೈತರ ಮತ್ತು ಯುವಕರ ಕಷ್ಟಗಳ ನೆರವಿಗೆ ಬಾರದ ಪ್ರಧಾನಿ ನರೇಂದ್ರ ಮೋದಿ ವಿದೇಶಗಳನ್ನು ಸುತ್ತಿಕೊಂಡು ಅಲ್ಲಿ ಕೈ ಕುಲುಕುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com