ಉಪಸಮರ: ಅತಿಯಾದ ವಿಶ್ವಾಸ ಬೇಡ, 7-8 ಸೀಟು ಗೆಲ್ಲಲೇಬೇಕು- ಸಚಿವರಿಗೆ ಸಿಎಂ 

15 ಕ್ಷೇತ್ರಗಳ ಉಪಚುನಾವಣೆ ಸರ್ಕಾರದ ಅಳಿವು, ಉಳಿವನ್ನು ನಿರ್ಧರಿಸಲಿದ್ದು, ಇದರಲ್ಲಿ ನಮ್ಮೆಲ್ಲರ ಭವಿಷ್ಯ ಅಡಗಿದೆ. ಹೀಗಾಗಿ ಯಾರೊಬ್ಬರೂ ನಿರ್ಲಕ್ಷ್ಯ ವಹಿಸದೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯನಿರ್ವಹಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಸೂಚನೆ ನೀಡಿದ್ದಾರೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: 15 ಕ್ಷೇತ್ರಗಳ ಉಪಚುನಾವಣೆ ಸರ್ಕಾರದ ಅಳಿವು, ಉಳಿವನ್ನು ನಿರ್ಧರಿಸಲಿದ್ದು, ಇದರಲ್ಲಿ ನಮ್ಮೆಲ್ಲರ ಭವಿಷ್ಯ ಅಡಗಿದೆ. ಹೀಗಾಗಿ ಯಾರೊಬ್ಬರೂ ನಿರ್ಲಕ್ಷ್ಯ ವಹಿಸದೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯನಿರ್ವಹಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಸೂಚನೆ ನೀಡಿದ್ದಾರೆ.
 
ವಿಧಾನಸೌಧದಲ್ಲಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯ ಬಳಿಕ ಅನೌಪಚಾರಿಕವಾಗಿ ಮಾತನಾಡುವ ವೇಳೆ ಯಡಿಯೂರಪ್ಪ ಅವರು ಉಪಚುನಾವಣೆ ಬಗ್ಗೆ ಪ್ರಸ್ತಾಪಿಸಿದರು ಎಂದು ವರದಿಗಳು ತಿಳಿಸಿವೆ. 

ನಂತರ ಪಕ್ಷದ ಕಚೇರಿಯಲ್ಲಿ ನಡೆದ ಎಲ್ಲಾ ಕ್ಷೇತ್ರಗಳ ಉಸ್ತುವಾರಿಗಳ ಸಭೆಯಲ್ಲೂ ಯಡಿಯೂರಪ್ಪ ಅವರು ಮಾತನಾಡಿ ಇದೇ ವಿಷಯವನ್ನು ಪುನರುಚ್ಚರಿಸಿದರು ಎಂದು ಹೇಳಲಾಗುತ್ತಿದೆ. 

ಪ್ರತಿಯೊಬ್ಬ ಸಚಿವರಿಗೂ ಒಂದೊಂದು ಕ್ಷೇತ್ರದ ಉಸ್ತುವಾರಿ ವಹಿಸಲಾಗಿದೆ. ಅಲ್ಲಿನ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ, ಅಧಿಕಾರವಿದೆ ಎಂಬ ವಿಶ್ವಾಸದಿಂದ ಪ್ರತಿಪಕ್ಷಗಳನ್ನು ಕಡೆಗಣಿಸುವುದು ಬೇಡ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಮೂಲಕ ಮತದಾರರ ಒಲವು ಗಳಿಸಿ ಎಂದು ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ. 

ಅನ್ನು ಅನರ್ಹ ಶಾಸಕರನ್ನು ಸೋಲಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಶ್ರಮವಹಿಸುತ್ತಿದ್ದಾರೆ. ಮೈತ್ರಿ ಸರ್ಕಾರವನ್ನು ಪತನಗೊಳಿಸಿರುವುದಕ್ಕೆ ಸೇಡು ತೀರಿಸಿಕೊಳ್ಳಲು ಎರಡು ಪಕ್ಷಗಳು ತಂತ್ರಗಾರಿಕೆ ರೂಪಿಸುತ್ತಿವೆ. ಹೀಗಾಗಿ ಪಕ್ಷದ ನಾಯಕರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗಿದೆ. ಉಪಚುನಾವಣೆಯಲ್ಲಿ ಕನಿಷ್ಠ 7-8 ಸ್ಥಾನದಲ್ಲಾದರೂ ಪಕ್ಷದ ಅಭ್ಯರ್ಥಿಗಳು ಗೆಲ್ಲಿಸಬೇಕು. ಇಲ್ಲದಿದ್ದರೆ ಸರ್ಕಾರ ಭವಿಷ್ಯಕ್ಕೆ ಪೆಟ್ಟು ಬೀಳಲಿದೆ ಎಂದು ಹೇಳಿದರು ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com