ಬಿಜೆಪಿ ಒತ್ತಡದಿಂದ ಇಬ್ಬರು ಜೆಡಿಎಸ್ ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ-ಹೆಚ್ .ಡಿ. ದೇವೇಗೌಡ

ಬಿಜೆಪಿಯ ಒತ್ತಡದಿಂದಾಗಿ ಅಥಣಿ, ಹಿರೆಕೆರೂರು ಉಪಚುನಾವಣಾ ಕಣದಲ್ಲಿ ಸ್ಪರ್ಧಿಸಿದ್ದ ಪಕ್ಷದ ಅಭ್ಯರ್ಥಿಗಳು ಚುನಾವಣಾ ಕಣದಿಂದ ಹಿಂದೆ ಸರಿದು ನಾಮಪತ್ರ ಹಿಂಪಡೆದಿದ್ದಾರೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.
ಹೆಚ್. ಡಿ. ದೇವೇಗೌಡ
ಹೆಚ್. ಡಿ. ದೇವೇಗೌಡ

ಬೆಂಗಳೂರು: ಬಿಜೆಪಿಯ ಒತ್ತಡದಿಂದಾಗಿ ಅಥಣಿ, ಹಿರೆಕೆರೂರು ಉಪಚುನಾವಣಾ ಕಣದಲ್ಲಿ ಸ್ಪರ್ಧಿಸಿದ್ದ ಪಕ್ಷದ ಅಭ್ಯರ್ಥಿಗಳು ಚುನಾವಣಾ ಕಣದಿಂದ ಹಿಂದೆ ಸರಿದು ನಾಮಪತ್ರ ಹಿಂಪಡೆದಿದ್ದಾರೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.

ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರೆಕೆರೂರಿನಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ  ಸ್ವಾಮೀಜಿ ಅವರನ್ನು ರಾಜಕೀಯಕ್ಕೆ ತರುವ ಉದ್ದೇಶವಿರಲಿಲ್ಲ. ಅವರು ತಾವಾಗಿಯೇ ಸ್ಪರ್ಧಿಸಲು ಆಸಕ್ತಿ ತೋರಿದ್ದರಿಂದ  ಜೆಡಿಎಸ್ ಅವರಿಗೆ ಬಿ.ಫಾರಂ ನೀಡಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ನೇತೃತ್ವದಲ್ಲಿ ಸ್ವಾಮೀಜಿ ಮೇಲೆ ಮಾನಸಿಕ ಒತ್ತಡ ತಂದು ಅವರು ನಾಮಪತ್ರ ವಾಪಸ್ ಪಡೆಯುವಂತೆ ಮಾಡಿದ್ದಾರೆ ಎಂದು ದೂರಿದರು.

ಈ ಹಿಂದೆ ಹಲವು ಸ್ವಾಮೀಜಿಗಳು ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ಅಧಿಕಾರ ಅನುಭವಿಸಿದ್ದಾರೆ.ಈಗ ಉತ್ತರಪ್ರದೇಶದಲ್ಲಿಯೇ ಸ್ವಾಮೀಜಿ ಮುಖ್ಯಮಂತ್ರಿ ಆಗಲ್ಲವೇ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು. ಬಿಜೆಪಿ ನಾಯಕರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದ್ದಾರೆ. ಅಥಣಿಯ ಜೆಡಿಎಸ್ ಪಕ್ಷದ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದಿದ್ದಾರೆ. ರಾಜಕೀಯದಲ್ಲಿಂದು ಹೆಚ್ಚು ಬಲಪ್ರಯೋಗಗಳು ನಡೆಯುತ್ತಿವೆ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಪಕ್ಷ ಬೆಂಬಲಿಸಿದ್ದು, ಹನ್ನೆರಡು ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸುತ್ತಿದೆ. ಮಹಾಲಕ್ಷ್ಮಿ ಲೇಔಟ್ ಅಭ್ಯರ್ಥಿ ಬಗ್ಗೆ ಸುಳ್ಳು ಅಪವಾದಗಳನ್ನು ಅಪಪ್ರಚಾರ ಮಾಡಲಾಗುತ್ತಿದೆ. ಗೋಪಾಲಯ್ಯ ಗೆದ್ದಿದ್ದು ಯಾವ ಪಕ್ಷದಿಂದ? ಸಾಕಷ್ಟು ವಿರೋಧದ ನಡುವೆಯೂ ಅವರ ಪತ್ನಿಯನ್ನೂ ಉಪ ಮೇಯರ್ ಮಾಡಿದ್ದು ಯಾರು? ಎಂಬುದನ್ನು ಮರೆತಿದ್ದಾರೆ. ಕುಮಾರಸ್ವಾಮಿ ಅವರನ್ನು ಒಪ್ಪಿಸಿ ನಾನೇ ಉಪ ಮೇಯರ್ ಮಾಡಿಸಿದ್ದೆ. ಈಗ ಪಕ್ಷಕ್ಕೆ ದ್ರೋಹವೆಸಗಿ ಹೋಗಿದ್ದಾರೆ ಎಂದು ಕಿಡಿಕಾರಿದ ಗೌಡರು, ಮಹಾಲಕ್ಷ್ಮಿ ಲೇಔಟ್ ನಲ್ಲಿ ಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ನೊಡೋಣ ಎಂದರು

ಶಿವಾಜಿನಗರದಲ್ಲಿ ತನ್ವೀರ್ ಅವರನ್ನು ಜೆಡಿಎಸ್ ಕಣಕ್ಕಿಳಿಸಿದ್ದು, ಜಾತ್ಯಾತೀತ ನಿಲುವಿನಡಿ ಹೋರಾಟ ಮಾಡಲಾಗುವುದು ಹದಿನೈದು ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗೆ ಎಲ್ಲ ಬಲಗಳೂ ಇವೆ. ದೌರ್ಜನ್ಯವೆಸಗಿದರೂ ಅವರಿಗೆ ಸರ್ಕಾರ ರಕ್ಷಣೆ ನೀಡುತ್ತದೆ. ನಮ್ಮ ಸದಸ್ಯರ ಕಾಲನ್ನೇ ಕತ್ತರಿಸಿಹಾಕಿದ್ದಾರೆ. ಕೆ.ಆರ್.ಪೇಟೆಯಲ್ಲಿ ಚಪ್ಪಲಿ ತೂರಲಾಗಿದೆ ಎಂದು ಸುಳ್ಳು ಹೇಳಿದ್ದಾರೆ. ಇಪ್ಪತ್ತೈದು ಸಾವಿರಕ್ಕೂ ಹೆಚ್ಚು  ಕಾರ್ಯಕರ್ತರು ಸೇರಿದ್ದು ಬಿಜೆಪಿಯವರಿಗೆ ಸಹಿಸಲಾಗಲಿಲ್ಲಹೀಗಾಗಿ ನಮ್ಮ ಕಾರ್ಯಕರ್ತರನ್ನೂ ಕೆಟ್ಟದಾಗಿ ಬೈಯ್ದಿದ್ದಾರೆ ಎಂದರು.

ಕೆ.ಆರ್.ಪೇಟೆ ನಮ್ಮ ಮನೆಯಿದ್ದಂತೆ ಎಂದು ಅನರ್ಹ ಶಾಸಕ ಬಿಜೆಪಿಯ ನಾರಾಯಣಗೌಡ ವಿರುದ್ಧ ಪರೋಕ್ಷ ಹರಿಹಾಯ್ದ ದೇವೇಗೌಡರು, ಹನ್ನೆರಡು ಕ್ಷೇತ್ರಗಳಲ್ಲಿ ಜೆಡಿಎಸ್  ಪ್ರಬಲ ಪೈಪೋಟಿ ನೀಡುತ್ತದೆ. ಬಿಜೆಪಿ,ಕಾಂಗ್ರೆಸ್ ವಿರುದ್ಧ ನೇರ ಪೈಪೋಟಿ ಇರಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com