ಸಿದ್ದರಾಮಯ್ಯ ಭ್ರಷ್ಟಾಚಾರಿಯಲ್ಲ, ಒಳ್ಳೆಯ ಆಡಳಿತಗಾರ: ಎಚ್.ವಿಶ್ವನಾಥ್ ಅಚ್ಚರಿಯ ಹೇಳಿಕೆ

ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭ್ರಷ್ಟಾಚಾರಿಯಲ್ಲ, ಅವರೊಬ್ಬ ಒಳ್ಳೆಯ ಆಡಳಿತಗಾರ. ಆ ಕಾರಣದಿಂದಲೇ ಅಧಿಕಾರದಲ್ಲಿ ಇಲ್ಲದಿದ್ದರೂ ರಾಜ್ಯದ ಜನತೆ ಸಿದ್ದರಾಮಯ್ಯರನ್ನು ಪ್ರೀತಿಸುತ್ತಾರೆ.
ಎಚ್ ವಿಶ್ವನಾಥ್
ಎಚ್ ವಿಶ್ವನಾಥ್

ಹುಣಸೂರು: ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭ್ರಷ್ಟಾಚಾರಿಯಲ್ಲ, ಅವರೊಬ್ಬ ಒಳ್ಳೆಯ ಆಡಳಿತಗಾರ. ಆ ಕಾರಣದಿಂದಲೇ ಅಧಿಕಾರದಲ್ಲಿ ಇಲ್ಲದಿದ್ದರೂ ರಾಜ್ಯದ ಜನತೆ ಸಿದ್ದರಾಮಯ್ಯರನ್ನು ಪ್ರೀತಿಸುತ್ತಾರೆ. ವಿಪಕ್ಷದವರೂ ಅವರನ್ನು ಇಷ್ಟಪಡುತ್ತಾರೆ. ನಾನೂ ಸಿದ್ದರಾಮಯ್ಯ ಅವರನ್ನು ಇಷ್ಟಪಡುತ್ತೇನೆ ಎಂದು ಹೇಳುವ ಮೂಲಕ ಹುಣಸೂರು ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಅಚ್ಚರಿ ಮೂಡಿಸಿದ್ದಾರೆ.

ಕ್ಷೇತ್ರದಲ್ಲಿಂದು ಪ್ರಚಾರದ ಸಭೆಯಲ್ಲಿ ಮಾತನಾಡಿದ ಅವರು, ನಾನು ದೇವೇಗೌಡರ ಫೋಟೋವನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತೇನೆ. ಜೀವ ಇರೋವರೆಗೂ ದೇವೇಗೌಡರಿಗೆ ಪೂಜೆ ಮಾಡುತ್ತೇನೆ. ನನಗೆ ರಾಜಕೀಯ ಸ್ಥೈರ್ಯ ಕೊಟ್ಟಿದ್ದೇ ದೇವೇಗೌಡರು ಎಂದು ಮಾಜಿ ಪ್ರಧಾನಿಯ ಬಗ್ಗೆ ಗುಣಗಾನ ಮಾಡಿದರು.

ಇದೇ ಮೊದಲ ಬಾರಿಗೆ ಟೀಕೆ ಬಿಟ್ಟು ಎದುರಾಳಿಗಳನ್ನು ಹೊಗಳಿರುವ ಎಚ್. ವಿಶ್ವನಾಥ್ ಅವರು ಪ್ರಚಾರದ ವೇಳೆ ಭಾವುಕರಾಗಿದ್ದಾರೆ. ನಾನು ಸ್ವಾಭಿಮಾನಕ್ಕಾಗಿ ರಾಜೀನಾಮೆ ನೀಡಿದ್ದೇನೆ. ಈ ಕುರುಬನನ್ನು ಗೆಲ್ಲಿಸಿದ್ದು ನಾವು ಎಂದು ಹಂಗಿಸುತ್ತಿದ್ದರು. ನಿಮ್ಮ ಜಾತಿಯವರು ನನ್ನನ್ನು ಮತ ಹಾಕಿ ಗೆಲ್ಲಿಸಿಲ್ಲ ಎಂದು ಹೀಯಾಳಿಸುತ್ತಿದ್ದರು. ಅದಕ್ಕಾಗಿ ನೋವಾಗಿ ಪಕ್ಷ ಬಿಟ್ಟೆ ಎಂದು ಹೇಳಿದ್ದಾರೆ.

ನಾನು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ನೋಡಲು ಸ್ಟಾರ್ ಹೋಟೆಲ್ ಬಳಿ ಹೋಗಬೇಕಿತ್ತು. ನನ್ನನ್ನು ಹೋಟೆಲ್ ಗೇಟ್​ನಲ್ಲಿ ನಿಲ್ಲಿಸುತ್ತಿದ್ದರು. ಇದನ್ನು ಸಹಿಸಲಾರದೆ ಪಕ್ಷ ಬಿಟ್ಟೆ. ಸಿದ್ದರಾಮಯ್ಯ ಜೆಡಿಎಸ್ ಬಿಟ್ಟ ರೀತಿಯಲ್ಲೇ ಸ್ವಾಭಿಮಾನಕ್ಕಾಗಿ ನಾನು ಪಕ್ಷ ಬಿಟ್ಟೆ ಎಂದು ಹುಣಸೂರಿನಲ್ಲಿ ಅನರ್ಹ ಶಾಸಕ ಎಚ್. ವಿಶ್ವನಾಥ್ ತಾವು ಜೆಡಿಎಸ್​ಗೆ ರಾಜೀನಾಮೆ ನೀಡಿದ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com