ಎಂಟಿಬಿ ನಾಗರಾಜ್ ಗೆ ಅಕ್ರಮ ದುಡ್ಡಿನ ಹೆದರಿಕೆ ಇದೆಯೇ?: ಸಿದ್ದರಾಮಯ್ಯ ಪ್ರಶ್ನೆ

ಈ ಉಪಚುನಾವಣೆ ಹೊಸ ಕೋಟೆಯ ಜನತೆಯ ಸ್ವಾಭಿಮಾನ ಮತ್ತು ನಂಬಿಕೆ ದ್ರೋಹದ ನಡುವಿನ ಚುನಾವಣೆಯಾಗಿದೆ. ಕ್ಷೇತ್ರವನ್ನು ಪ್ರತಿನಿಧಿಸಲು ಯಾರು ಅರ್ಹರು ಎಂದು ಮತದಾರರೇ ತೀರ್ಮಾನಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಹೊಸಕೋಟೆ: ಈ ಉಪಚುನಾವಣೆ ಹೊಸ ಕೋಟೆಯ ಜನತೆಯ ಸ್ವಾಭಿಮಾನ ಮತ್ತು ನಂಬಿಕೆ ದ್ರೋಹದ ನಡುವಿನ ಚುನಾವಣೆಯಾಗಿದೆ. ಕ್ಷೇತ್ರವನ್ನು ಪ್ರತಿನಿಧಿಸಲು ಯಾರು ಅರ್ಹರು ಎಂದು ಮತದಾರರೇ ತೀರ್ಮಾನಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದ್ದಾರೆ.

ಹೊಸಕೋಟೆಯಲ್ಲಿಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾ ಡಿದ ಅವರು, ಹೊಸಕೋಟೆಯಲ್ಲಿ ನಡೆಯುತ್ತಿರುವ ಉಪಚುನಾವಣೆಯನ್ನು ಇಲ್ಲಿನ ಯಾವೊಬ್ಬ ವ್ಯಕ್ತಿಯೂ ಬಯಸಿರಲಿಲ್ಲ. ಇಲ್ಲಿನ ಶಾಸಕರಾಗಿದ್ದ ಎಂಟಿಬಿ ನಾಗರಾಜ್ ಅವರು ನಮ್ಮ ಪಕ್ಷಕ್ಕೆ ದ್ರೋಹಮಾಡಿ, ಬಿಜೆಪಿ ಸೇರಿದ್ದರ ಫಲವಾಗಿ ಕ್ಷೇತ್ರದಲ್ಲಿ ಮತ್ತೊಂದು ಚುನಾವಣೆ ಎದುರಿಸುವಂತಾಗಿದೆ ಎಂದು ಆರೋಪಿಸಿದರು.

ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿಗೆ 4 ಬಾರಿ ಪಕ್ಷ ಟಿಕೆಟ್ ನೀಡಿತ್ತು. ನಾನು ಮುಖ್ಯಮಂತ್ರಿಯಾಗಿದ್ದಾಗ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದೆ. ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಮಾಡಿದ್ದೆವು. ಇದರ ನಂತರವೂ ಪಕ್ಷ ಬಿಡಲು ಕಾರಣವೇನು? ಅವರಿಗೆ ಅಕ್ರಮ ದುಡ್ಡಿನ ಹೆದರಿಕೆ ಇದೆಯಾ? ಈ ಬಗ್ಗೆ ಮತದಾರರು ಅವರನ್ನು ಪ್ರಶ್ನಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಪಕ್ಷ ಬಿಡುವ ಮೊದಲು ಎಂಟಿಬಿ ನಾಗರಾಜ್ ನಮ್ಮನೆಗೆ ಬಂದಿದ್ದರು. ಯಾಕೆ ಪಕ್ಷ ಬಿಡ್ತೀಯಪ್ಪ? ಎಂದು ಕೇಳಿದ್ದೆ. ಅದಕ್ಕೆ ಪಕ್ಷ ಬಿಟ್ಟು ನಿಮ್ಮ ಜೊತೆ ಬರುತ್ತೇನೆ ಎಂದು ನಾನು ಶಾಸಕ ಸುಧಾಕರ್ ಅವರಿಗೆ ಮಾತುಕೊಟ್ಟಿದ್ದೇನೆ ಎಂದಿದ್ದರು. ಕಾಂಗ್ರೆಸ್ ಬಿಡುವ ಮುನ್ನ ಜನರನ್ನು ಕೇಳಿದ್ದರೋ? ಇವರನ್ನು ಗೆಲ್ಲಿಸಿದ್ದು ಸುಧಾಕರ್ ಅವರೋ ಅಥವಾ ಹೊಸಕೋಟೆ ಜನತೆಯೋ ಎಂದು ಪ್ರಶ್ನಿಸಿದರು.

ನಮ್ಮದು ಸಹೋದರತ್ವ, ಸಹಬಾಳ್ವೆಯ ಸಿದ್ಧಾಂತವನ್ನು ನಂಬಿರುವ ಪಕ್ಷ. ಎಂಟಿಬಿ ನಾಗರಾಜ್ ಸೇರಿರುವುದು ಸಮಾಜ ಒಡೆಯುವ ಕೋಮುವಾದಿ ಪಕ್ಷವನ್ನು. ಸಮಾಜ ಕಟ್ಟುವ ಕೈ ಬೆಂಬಲಿಸಬೇಕೋ ಅಥವಾ ಸಮಾಜ ಒಡೆಯುವ ಕೈ ಬೆಂಬಲಿಸಬೇಕೋ ಎಂದು ಯೋಚಿಸಿ ಮತ ನೀಡಿ. ಅನರ್ಹರನ್ನು ಸೋಲಿಸಿ, ಅರ್ಹರನ್ನು ಗೆಲ್ಲಿಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಮತದಾರರಿಗೆ ಸಿದ್ದರಾಮಯ್ಯ ಮನವಿ ಮಾಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com