ಡಿ. 9ರ ನಂತರ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ: ಸಿದ್ದರಾಮಯ್ಯ ವಿಶ್ವಾಸ

ಡಿಸೆಂಬರ್ 5 ರಂದು ನಡೆಯಲಿರುವ 15 ಕ್ಷೇತ್ರಗಳ ವಿಧಾನಸಭೆ ಉಪ ಚುನಾವಣೆ ನಂತರ ರಾಜ್ಯ ರಾಜಕೀಯ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಯಾಗಲಿದ್ದು, ಡಿಸೆಂಬರ್ 9ರ ಫಲಿತಾಂಶದ ನಂತರ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಳಗಾವಿ: ಡಿಸೆಂಬರ್ 5 ರಂದು ನಡೆಯಲಿರುವ 15 ಕ್ಷೇತ್ರಗಳ ವಿಧಾನಸಭೆ ಉಪ ಚುನಾವಣೆ ನಂತರ ರಾಜ್ಯ ರಾಜಕೀಯ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಯಾಗಲಿದ್ದು, ಡಿಸೆಂಬರ್ 9ರ ಫಲಿತಾಂಶದ ನಂತರ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ಬೆಳಗಾವಿಯ ಅಥಣಿ ಕ್ಷೇತ್ರದ ತೇಲಸಂಗ್ ಗ್ರಾಮದಲ್ಲಿ ಅನರ್ಹ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಡಿಸೆಂಬರ 9 ರ ನಂತರ ಕರ್ನಾಟಕದಲ್ಲಿ ಮತ್ತೆ ನಮ್ಮ ಸರ್ಕಾರ ಬರಲಿದೆ. ಚುನಾವಣೆ ಫಲಿತಾಂಶ ಸಾಕಷ್ಟು ಬದಲಾವಣೆಗಳಿಗೆ ನಾಂದಿಯಾಗಲಿದೆ ಎಂದರು.

ಅನರ್ಹರು ಕ್ಷೇತ್ರದ ಅಭಿವೃದ್ಧಿಯನ್ನು ನೆಪ ಮಾಡಿಕೊಂಡು ಬಿಜೆಪಿ ಸೇರಿರುವುದಾಗಿ ಹಸಿ ಸುಳ್ಳು ಹೇಳುತ್ತಿದ್ದಾರೆ. ಸಂತೆಯಲ್ಲಿ ದನಕರುಗಳು ಮಾರಾಟ ಆಗುವ ರೀತಿಯಲ್ಲಿ ಶಾಸಕರು ಮಾರಾಟವಾಗಿದ್ದಾರೆ. ಅವರಿಗೆ ನಾಚಿಕೆ ಆಗಬೇಕು ಎಂದು ಟೀಕಿಸಿದರು.

ಮಹೇಶ್ ಕುಮಟ್ಟಳ್ಳಿ ಸ್ವಂತ ಸ್ವಾರ್ಥ ಮತ್ತು ಅಧಿಕಾರದ ಲಾಲಸೆಯಿಂದ ಬಿಜೆಪಿಗೆ ಸೇರಿ ಮತದಾರರಿಗೆ ಅವಮಾನ ಮಾಡಿದ್ದಾರೆ. ನಿಮ್ಮನ್ನು ಕೇಳದೆ ಹೋರಟು ಹೋದವರಿಗೆ ಆಶೀರ್ವಾದ ಮಾಡುತ್ತೀರಾ ಎಂದ ಮತದಾರರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.

ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ವಿಚಾರಣೆ ನಡೆಸಿ ಹದಿನೇಳು ಶಾಸಕರು ಅನರ್ಹರು ಎಂದು ಆದೇಶ ನೀಡಿದರು. ಆದರೆ ಅನರ್ಹರಾದವರು ಎಂಎಲ್‌ಎ ಆಗಲು ನಾಲಾಯಕ್ ಎಂದು ಅರ್ಥ. ಇಂತಹ ನಾಲಾಯಕ್ ಗಳನ್ನು ನೀವು ಗೆಲ್ಲಿಸುತ್ತೀರಾ ಎಂದು ಕೇಳಿದರು.

ಈ ನಾಲಾಯಕ್ ಆದ ಮನಷ್ಯರು ಪುನಃ ನಮ್ಮನ್ನು ಲಾಯಕ್ ಮಾಡುವಂತೆ ನಿಮ್ಮಲ್ಲಿಗೆ ಬರುತ್ತಿದ್ದಾರೆ. ಸುಪ್ರೀಂ ಕೋರ್ಟ್ ಸಹ ಇವರು ಅನರ್ಹರು ಎಂದು ಹೇಳಿದೆ. ಇಂತಹ ನಾಲಾಯಕ್ ಗಳನ್ನು ಮನೆಗೆ ಕಳುಹಿಸಿ. ನಿಮ್ಮ ಕಷ್ಟ ಕೇಳಲು ಆಗದ ಇವರು ತಮ್ಮ‌ ಸ್ವಾರ್ಥಕ್ಕಾಗಿ ಮುಂಬೈನಲ್ಲಿದ್ದರು. ಇಂಥವರು ಮತ್ತೆ ಶಾಸಕರಾಗಬೇಕೆ?. ಇಂತವರಿಗೆ ತಕ್ಕ ಪಾಠ ಕಲಿಸಬೇಕು ಎಂದರು

ಬಿ.ಸಿ ಪಾಟೀಲ್ ಅವರನ್ನು ಮನೆಗೆ ಕಳುಹಿಸುವುದಾಗಿ ಹಿರೇಕೆರೂರ್ ನಲ್ಲಿ ಜನ ಹೇಳುತ್ತಿದ್ದಾರೆ. ಅಥಣಿ ಕ್ಷೇತ್ರದಲ್ಲೂ ಅದೇ ರೀತಿ ಆಗಬೇಕು. ಇವರು ಕಾಂಗ್ರೆಸ್ ಗೆ ದ್ರೋಹ ಮಾಡಿ ಬಿಜೆಪಿಗೆ ಹೋಗಿದ್ದಾರೆ. ಇವರಿಗೆ ಮನಷ್ಯತ್ವ ಇಲ್ಲ. ಇವರು ಮನುಷ್ಯರೇ ಅಲ್ಲಾ. ಅಭಿವೃದ್ಧಿ ಮಾಡಲು ಇವರು ಹೋಗಿಲ್ಲ. ಬದಲಿಗೆ ತಮ್ಮ ಅಭಿವೃದ್ಧಿ ಮಾಡಿಕೊಳ್ಳಲು ಹೋಗಿದ್ದಾರೆ ಎಂದರು.

ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಯಬೇಕು. ರಾಜ್ಯದಲ್ಲಿ ಬಿಜೆಪಿ ಸೋಲಲಿದೆ. ಬಿಜೆಪಿ ನಾಯಕರು ಎಷ್ಟೇ ದುಡ್ಡು ಖರ್ಚು‌ ಮಾಡಲಿ, ಯಡಿಯೂರಪ್ಪ ಎಷ್ಟೇ ಸುತ್ತಾಡಲಿ. ಕಾಂಗ್ರೆಸ್ ಅಧಿಕ ಸ್ಥಾನಗಳಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com