ಬಾಗಲಕೋಟೆ: ಜಾರಿಗೆ ಬಾರದ ಮುಖ್ಯಮಂತ್ರಿ ಬಿಎಸ್‌ವೈ ಆದೇಶಗಳು! 

ಕೇಸರಿ ಪಡೆಯ ಅಬೇಧ್ಯ ಕೋಟೆ ಬಾಗಲಕೋಟೆ ಜಿಲ್ಲೆ. ಈ ಕೋಟೆಯಲ್ಲಿನ ಯಾವ ಸಮಸ್ಯೆಗಳಿಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಸಾಧ್ಯವಾಗುತ್ತಿಲ್ಲ ಎನ್ನುವುದು ದುರದೃಷ್ಟಕರ ಸಂಗತಿ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಬಾಗಲಕೋಟೆ: ಕೇಸರಿ ಪಡೆಯ ಅಬೇಧ್ಯ ಕೋಟೆ ಬಾಗಲಕೋಟೆ ಜಿಲ್ಲೆ. ಈ ಕೋಟೆಯಲ್ಲಿನ ಯಾವ ಸಮಸ್ಯೆಗಳಿಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಸಾಧ್ಯವಾಗುತ್ತಿಲ್ಲ ಎನ್ನುವುದು ದುರದೃಷ್ಟಕರ ಸಂಗತಿ.
ಹಾಗಾದರೆ ಬಿ.ಎಸ್. ಯಡಿಯೂರಪ್ಪ “ನಾಮ ಕಾ ವಾಸ್ತೆ ಮುಖ್ಯಮಂತ್ರಿ”ಗಳಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.
 
ಸತತ ಮಳೆ ಮತ್ತು ನೆರೆಯಿಂದ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ನದಿ ತೀರದ ಜನತೆ ಮನೆ, ಆಸ್ತಿಪಾಸ್ತಿ ಕಳೆದುಕೊಂಡು ಬೀದಿ ಪಾಲಾಗಿದ್ದರೂ ಅವರನ್ನು ಸಮಸ್ಯೆಗಳಿಂದ ಪಾರು ಮಾಡುವ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ನೆರೆ ಸಂತ್ರಸ್ತರಿಗೆ ತಕ್ಷಣದ ಪರಿಹಾರವಾಗಿ ೧೦ ಸಾವಿರ ರೂ. ನೀಡಬೇಕು ಎನ್ನುವ ಸಿಎಂ ಆದೇಶ ಜಾರಿಗೆ ಬಂದಿದ್ದರೂ ನಿಜವಾದ ಬಹುತೇಕ ಸಂತ್ರಸ್ತರಿಗೆ ಪರಿಹಾರ ಧನ ಸಿಗಲೇ ಇಲ್ಲ. ಇದಕ್ಕಾಗಿ ಅನೇಕ ಗ್ರಾಮಗಳ ಪರಿಹಾರ ವಂಚಿತರು ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಲಿಲ್ಲ.

ನೆರೆಯಿಂದ ಉದ್ಯೋಗವನ್ನೇ ಕಳೆದುಕೊಂಡ ನೇಕಾರರ ಪ್ರತಿ ಮಗ್ಗಕ್ಕೆ ೨೫ ಸಾವಿರ ರೂ. ನೀಡಬೇಕು ಎನ್ನುವ ಸಿಎಂ ಆದೇಶಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ತಿದ್ದುಪಡಿ ತಂದು ಪ್ರತಿ ಮಗ್ಗದ ಬದಲಿಗೆ ಪ್ರತಿ ಕುಟುಂಬಕ್ಕೆ ೨೫ ಸಾವಿರ ರೂ. ಪರಿಹಾರ ನೀಡುತ್ತಿದೆ. ಈ ಕುರಿತು ವ್ಯಾಪಕ ಪ್ರತಿಭಟನೆ ನಡೆದವು. ನೇಕಾರರ ಮುಖಂಡರು ನಿಯೋಗದಲ್ಲಿ ಭೇಟಿ ಆದರೂ ಸಿಎಂ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಿಲ್ಲೆಯ ನೆರೆ ಪ್ರದೇಶ ಕಮತಗಿಗೆ ಭೇಟಿ ನೀಡಿದ್ದ ವೇಳೆ ನೆರೆ ಹಾನಿ ಅನುಭವಿಸುತ್ತಿರುವ ಸಣ್ಣಪುಟ್ಟ ವ್ಯಾಪಾರಸ್ಥರಿಗೂ ೧೦ ಸಾವಿರ ಪರಿಹಾರ ನೀಡುವಂತೆ ಆದೇಶಿಸಿದ್ದರು. ಆ ಆದೇಶದ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ಸರ್ವೇ ಕಾರ್ಯ ನಡೆಯಿತೇ ವಿನಃ ಪರಿಹಾರ ಹಂಚಿಕೆ ಮಾತ್ರ ಮರಿಚಿಕೆಯಾಗಿಯೇ ಉಳಿದಿದೆ. 

ಏತನ್ಮಧ್ಯೆ ನೆರೆ ಸಂತ್ರಸ್ತರಿಗಾಗಿನ ತಾತ್ಕಾಲಿಕ ಶೆಡ್‌ಗಳ ನಿರ್ಮಾಣದಲ್ಲೂ ಅಕ್ರಮಗಳು ನಡೆದಿರುವ ಕುರಿತು ವ್ಯಾಪಕ ಆರೋಪಗಳು ಕೇಳಿ ಬರುತ್ತಿವೆ. ಅದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರ ಮುಧೋಳ ಕ್ಷೇತ್ರ, ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಬಾದಾಮಿ ಕ್ಷೇತ್ರದಲ್ಲಿನ ತಾತ್ಕಾಲಿಕ ಶೆಡ್‌ಗಳ ನಿರ್ಮಾಣದಲ್ಲಿ ಪ್ರಭಾವಿಗಳ ಕೈ ಚಳಕದಿಂದ ಭಾರಿ ಅಕ್ರಮಗಳು ನಡೆದಿವೆ. ಆ ಬಗ್ಗೆ ಕೇಳುವವರೇ ಇಲ್ಲವಾಗಿದೆ. ಹೀಗೆ ನೆರೆ ಪರಿಹಾರದ ಪ್ರತಿ ಹಂತದಲ್ಲೂ ಮುಖ್ಯಮಂತ್ರಿಗಳ ಆದೇಶಗಳಿಗೆ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿಲ್ಲ.

ಇದೀಗ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳವಾಗುವುದರಿಂದ ನಡುಗಡ್ಡೆ ಪ್ರದೇಶವಾಗಲಿರುವ ಬಾಗಲಕೋಟೆಯ ಕಿಲ್ಲಾ ಪ್ರದೇಶ ಸ್ಥಳಾಂತರಕ್ಕೆ ಹಣಕಾಸು ಇಲಾಖೆ ಕೊಕ್ಕೆ ಹಾಕಿದೆ. ಜಲಾಶಯದ ಹಿನ್ನೀರಿನಿಂದ ನಡುಗಡ್ಡೆ ಆಗಲಿರುವ ಕಿಲ್ಲಾ ಪ್ರದೇಶವನ್ನು ಸ್ಥಳಾಂತರಿಸಬೇಕು ಎನ್ನುವ ಬೇಡಿಕೆಗೆ ಸ್ಪಂದಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ಸ್ಥಳಾಂತರಕ್ಕೆ ಸೂಕ್ತ ಕ್ರಮ ಜರುಗಿಸುವಂತೆ ಆದೇಶಿಸಿದ್ದರು. ಆ ಆದೇಶಕ್ಕೆ ಹಣಕಾಸು ಇಲಾಖೆ ತಣ್ಣೀರು ಎರಚಿದೆ.

ಹಣಕಾಸು ಇಲಾಖೆಯ ಈ ಆದೇಶದ ವಿರುದ್ದ ನಗರದಲ್ಲಿ ಪ್ರತಿಭಟನೆಗಳು ಆರಂಭಗೊಂಡರೂ ಅಚ್ಚರಿ ಪಡಬೇಕಿಲ್ಲ. ಆದೇಶದ ವಿರುದ್ಧ, ನಡುಗಡ್ಡೆ ಆಗಲಿರುವ ಜನತೆಯ ಪರವಾಗಿ ಯಾರು ಎಷ್ಟರ ಮಟ್ಟಿಗೆ ನಿಂತುಕೊಳ್ಳಲಿದ್ದಾರೆ ಎನ್ನುವುದು ಕುತೂಹಲಕರ ಸಂಗತಿಯಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆದೇಶಗಳಿಗೆ ಕಂದಾಯ ಇಲಾಖೆಯಾಗಲಿ, ಹಣಕಾಸು ಇಲಾಖೆ ಆಗಲಿ, ಜಲಸಂಪನ್ಮೂಲ ಇಲಾಖೆಯಾಗಲಿ ಯಾವುದೇ ಕಿಮ್ಮತ್ತು ನೀಡದೇ ಇರುವುದು ಹತ್ತಾರು ಅನುಮಾನಗಳ ಹುಟ್ಟಿಗೆ ಕಾರಣವಾಗಿದೆ.

ಮುಖ್ಯಮಂತ್ರಿಗಳ ಯಾವ ಆದೇಶಕ್ಕೂ ಸರ್ಕಾರದಲ್ಲಿ ಮಾನ್ಯತೆ ಸಿಗದೇ ಇರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಹಾಗಾದರೆ ಬಿ.ಎಸ್. ಯಡಿಯೂರಪ್ಪ “ನಾಮ್ ಕಾ ವಾಸ್ತೆ” ಮುಖ್ಯಮಂತ್ರಿನಾ ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡಲಾರಂಭಿಸಿದೆ. ಬಿಜೆಪಿಯ ಭದ್ರಕೋಟೆಯಲ್ಲಿನ ಸ್ಥಿತಿಯೇ ಹೀಗಾದಲ್ಲಿ ಉಳಿದ ಕಡೆಗಳಿ ಹೇಗೆ ಎನ್ನುವಂತಾಗಿದೆ. ಜಿಲ್ಲೆಯ   ಜನಪ್ರತಿನಿಧಿಗಳು ಈ ಬಗ್ಗೆ ಆದ್ಯ ಗಮನ ನೀಡಬೇಕಿದೆ. ಸರ್ಕಾರದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವವ ಇಲ್ಲಿದ್ದರೂ ಪ್ರಯೋಜನವಿಲ್ಲ ಎನ್ನುವಂತಾಗಿದೆ.

ನೆರೆ ಪರಿಹಾರ, ಸಂತ್ರಸ್ತರ ಸ್ಥಳಾಂತರ ಸಣ್ಣ ವಿಷಯಗಳೆನಲ್ಲ. ಇವು ಅತ್ಯಂತ ಸೂಕ್ಷö್ಮ ವಿಷಯಗಳಾಗಿದ್ದರೂ ಈ ವಿಷಯದಲ್ಲಿ ಸಿಎಂ ಆದೇಶಗಳಿಗೆ ಸಂಬಂಧಿಸಿದ ಇಲಾಖೆಗಳು ಅಸ್ತು ಎನ್ನದೇ ನಿರಾಕರಿಸುತ್ತಿರುವುದು ಸಾಕಷ್ಟು ಸಂಶಯಗಳಿಗೆ ಎಡೆ ಮಾಡಿಕೊಡುತ್ತಿವೆ.

ಸಿಎಂ ಆದೇಶಗಳಿಗೆ ಸರ್ಕಾರದಲ್ಲಿ ಆದ್ಯತೆ ಸಿಗದೇ ಇರುವಾಗ ನೆರೆ ಸಂತ್ರಸ್ತರ ಸಮಸೆಗಳಿಗಾಗಲಿ, ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ನಡುಗಡ್ಡೆ ಆಗಲಿರುವ ಜನತೆಯ ಆರ್ತ ನಾದ ಕೇಳುವವರು ಯಾರು ಎನ್ನುವುದೇ ಜನಸಾಮಾನ್ಯರ ಪಾಲಿಗೆ ಯಕ್ಷಪ್ರಶ್ನೆಯಾಗಿದೆ.

ವಿಠ್ಠಲ ಆರ್. ಬಲಕುಂದಿ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com