ಸಿಎಂ ಪರಿಸ್ಥಿತಿ ನೋಡಿ ಅಯ್ಯೋ ಎನಿಸುತ್ತಿದೆ: ತಂತಿ ಮೇಲಿನ ನಡಿಗೆ ಹೇಳಿಕೆ ಕುರಿತು ಶಿವರಾಜ್ ತಂಗಡಗಿ ವ್ಯಂಗ್ಯ

ಅನರ್ಹ ಶಾಸಕರ ಬೆನ್ನಿಗೆ ನಿಂತ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪರಿಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತಿದೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ವ್ಯಂಗ್ಯ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊಪ್ಪಳ: ಅನರ್ಹ ಶಾಸಕರ ಬೆನ್ನಿಗೆ ನಿಂತ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪರಿಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತಿದೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ವ್ಯಂಗ್ಯ ಮಾಡಿದ್ದಾರೆ.

ಸಿಎಂ ಯಡಿಯೂರಪ್ಪ ಅವರ ತಂತಿಮೇಲಿನ ನಡಿಗೆ ಹೇಳಿಕೆ ಕುರಿತಂತೆ ಕೊಪ್ಪಳದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, 'ಈಗಿನ ಬಿ.ಎಸ್ ಯಡಿಯೂರಪ್ಪ ಪರಿಸ್ಥಿತಿ ನೋಡಿದರೆ ಅಯ್ಯೋ ಅನಿಸುತ್ತಿದೆ. ಯಡಿಯೂರಪ್ಪ ಅವರಿಗೆ ಇಷ್ಟು ಬೇಗನೆ, ಅವರ ಪಕ್ಷದವರಿಂದಲೇ ಇಂಥ ಪರಿಸ್ಥಿತಿ ಬಂದಿರುವುದು ಕೆಟ್ಟದ್ದು ಎನಿಸುತ್ತದೆ. ಯಡಿಯೂರಪ್ಪ ಅವರೇ ಈಗಲೂ ಕಾಲ ಮಿಂಚಿಲ್ಲ. ಬಿಜೆಪಿಯಿಂದ ಹೊರಬಂದು ಪಕ್ಷ ಕಟ್ಟಿ, ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ.

17 ಶಾಸಕರು ರಾಜೀನಾಮೆ ಸಲ್ಲಿಸುವ ವೇಳೆಯಲ್ಲಿ ಯಡಿಯೂರಪ್ಪಗೆ ಇದ್ದ ಶಕ್ತಿ ಈಗ ಇಲ್ಲ. ಯಡಿಯೂರಪ್ಪನವರ ಶಕ್ತಿ ಕುಗ್ಗಿಸುವ ಕೆಲಸ‌ ನಡೆಯುತ್ತಿದೆ. ರಾಜ್ಯದ ಮುಖ್ಯಮಂತ್ರಿಗೆ ತಂತಿಯ ಮೇಲೆ ನಡೆಯುವ ಪರಿಸ್ಥಿತಿ ಬರಬಾರದಿತ್ತು. ಅವರು ತಂತಿಯ ಮೇಲೆ ನಡೆಯುವಂಥಾ ಪರಿಸ್ಥಿಗೆ ಬರಲು ಯಾರು ಕಾರಣ ಎನ್ನುವುದನ್ನು ಯಡಿಯೂರಪ್ಪನವರೇ ಬಹಿರಂಗಗೊಳಿಸಬೇಕು ಎಂದು ತಂಗಡಗಿ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಹಿರಿಯ ರಾಜಕಾರಣಿಯಾಗಿದ್ದು, ಅವರಿಗೆ ಈ ಪರಿಸ್ಥಿತಿ ಬರಬಾರದಾಗಿತ್ತು ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ. 

ಅಂತೆಯೇ 'ಕೇಂದ್ರ ಸರ್ಕಾರ ದಿಂದ ರಾಜ್ಯಕ್ಕೆ ಇದುವರೆಗೂ ನೆರೆ ಪರಿಹಾರ ಸೇರಿದಂತೆ ಯಾವುದೇ ಕೆಲಸಕ್ಕೆ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂದು ಆರೋಪಿಸಿದ ಅವರು, ಕೇಂದ್ರ ಸರ್ಕಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡುತ್ತಿದೆ. ಮೋದಿ-ಅಮಿತ್ ಷಾ ಜಗಳದಲ್ಲಿ ನೆರೆ ಸಂತ್ರಸ್ತರು ಬಡವಾದ ಕೂಸಿನ ಸ್ಥಿತಿ ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಭಿಕ್ಷುಕರಿಗೆ ಕೊಟ್ಟಂತೆ ಹತ್ತು ಸಾವಿರ ಕೊಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಕಾಂಗ್ರೆಸ್‌ ನಲ್ಲಿ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ ಶಿವರಾಜ್ ತಂಗಡಗಿ, ನಮ್ಮ ಪಕ್ಷ ಸಾಮೂಹಿಕ ನಾಯಕತ್ವವನ್ನು ನಂಬುತ್ತದೆ ಎಂದಿದ್ದಾರೆ. ಅಧಿವೇಶನ ಆರಂಭಕ್ಕೆ ಮುನ್ನವೇ ಸಿದ್ದರಾಮಯ್ಯ ಅವರು ಪ್ರತಿಪಕ್ಷ‌ನಾಯಕರಾಗಿ ಆಯ್ಕೆಯಾಗಲಿದ್ದಾರೆ ಎಂದು ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com