ಬಿಹಾರ ಪ್ರವಾಹಕ್ಕೆ ಮಿಡಿದ ಪ್ರಧಾನಿ ಹೃದಯ, ಕರುನಾಡಿಗಾಗಿ ಏಕೆ ಮಿಡಿಯುತ್ತಿಲ್ಲ?: ಕಾಂಗ್ರೆಸ್ ಆಕ್ರೋಶ

ಪ್ರವಾಹ ಸಂತ್ರಸ್ತ ಬಿಹಾರ ರಾಜ್ಯದ ಸಮಸ್ಯೆಗೆ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಷಪಾತ ಮತ್ತು ಮಲತಾಯಿ ಧೋರಣೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಪ್ರವಾಹ ಸಂತ್ರಸ್ತ ಬಿಹಾರ ರಾಜ್ಯದ ಸಮಸ್ಯೆಗೆ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಷಪಾತ ಮತ್ತು ಮಲತಾಯಿ ಧೋರಣೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ, "ಬಿಹಾರದಲ್ಲಿ ಪ್ರವಾಹ ಪರಿಸ್ಥಿಗೆ ಮಾತ್ರ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ತಾರತಮ್ಯ ನೀತಿ ಖಂಡನೀಯ. ಬಿಹಾರದ ಜನತೆಗೆ ಮಿಡಿದಿರುವ ಪ್ರಧಾನಿ ಅವರ 52 ಇಂಚಿನ ಎದೆ ಕರುನಾಡಿನ ಜನರಿಗಾಗಿ ಮಾತ್ರ ಮಿಡಿದಿಲ್ಲ ಏಕೆ ?" ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

"ರಾಜ್ಯದಲ್ಲಿ ಪ್ರವಾಹದಿಂದ ಬೃಹತ್ ಪ್ರಮಾಣದಲ್ಲಿ ನಷ್ಟವುಂಟಾಗಿದ್ದು, ನೆರೆ ಸಂತ್ರಸ್ತರ ಬದುಕು ದುಸ್ತರವಾಗಿದೆ. ಸಂತ್ರಸ್ತರ ನೋವು ಕಣ್ಣೀರನ್ನು ಕಂಡು ಮೋದಿ ಅವರ 52 ಇಂಚಿನ ಎದೆ ಕಲ್ಲುಬಂಡೆಯಾಗಿದೆ" ಎಂದು ಲೇವಡಿ ಮಾಡಿದ್ದಾರೆ.

"ಇವರ ಎದೆ ಕಲ್ಲುಬಂಡೆಯಾಗಿರುವುದು ಕರ್ನಾಟಕದ 25 ಸಂಸದರಿಗಾಗಿಯೋ ಅಥವಾ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಇರುವ ತಾತ್ಸಾರಕ್ಕಾಗಿಯೋ " ಎಂದು ಸಿದ್ದರಾಮಯ್ಯ ಮೋದಿಯನ್ನು ಪ್ರಶ್ನಿಸಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, " ಬಿಹಾರದಲ್ಲಿನ ನೆರೆ ಪರಿಸ್ಥಿತಿಗೆ ಅನುಕಂಪ ವ್ಯಕ್ತಪಡಿಸಿರುವ ಪ್ರಧಾನಿ ಕರ್ನಾಟಕಕ್ಕೂ ಅನುಕಂಪ ತೋರಲಿ " ಎಂದಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕರ್ನಾಟಕದಲ್ಲಿ ನೆರೆ ಪರಿಸ್ಥಿತಿ ಉಂಟಾಗಿ ಇಷ್ಟು ದಿನ ಕಳೆದಿದೆ. ಆದರೆ ಸಣ್ಣ ಪ್ರಮಾಣದ ಪರಿಹಾರ ಮೊತ್ತವನ್ನೂ ಕೇಂದ್ರ ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದುವರೆಗೂ ರಾಜ್ಯದಿಂದ ನಿಯೋಗ ಕರೆದುಕೊಂಡು ಹೋಗುವ ಧೈರ್ಯ ಮಾಡಿಲ್ಲ. ಪ್ರಧಾನ ಮಂತ್ರಿ, ಕೇಂದ್ರ ಗೃಹ ಮಂತ್ರಿಗಳು ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಬೇರೆ ರಾಜ್ಯಕ್ಕೆ ತೋರಿದ ಅನುಕಂಪ ನಮಗೂ ತೋರಿಸಿ. ಯಡಿಯೂರಪ್ಪ ಆಶಾವಾದಿ. ಕೇಂದ್ರದಿಂದ ಹಣ ಬಿಡುಗಡೆಯಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಹಣ ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಎಡವುತ್ತಿದ್ದಾರೆ" ಎಂದು ಟೀಕಿಸಿದರು.

"ಪರಿಹಾರವಿರಲಿ ಕರ್ನಾಟಕದ ಮುಖ್ಯಮಂತ್ರಿ ಎಂಬ ಗೌರವ ಕೂಡ ಯಡಿಯೂರಪ್ಪ ಅವರಿಗೇ ಸಿಕ್ಕಿಲ್ಲ. ಇನ್ನು ರಾಜ್ಯಕ್ಕೆ ಪರಿಹಾರ ಹೇಗೆ ತರುತ್ತಾರೋ ಗೊತ್ತಿಲ್ಲ " ಎಂದರು.

ಯಡಿಯೂರಪ್ಪ ಅವರ ತಂತಿ ಮೇಲೆ ನಡೆಯುತ್ತಿರುವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಂತಿ ಮೇಲೆ ನಡೆದರೆ ಯಾವ ಕಡೆಯಲ್ಲಾದರೂ ಬೀಳಬಹುದು ಎಂದು ವ್ಯಂಗ್ಯವಾಡಿದರು. ಅವರ ಈ ಹೇಳಿಕೆ ಸರಕಾರ ಯಾವ ವೇಳೆಯಲ್ಲಾದರೂ ಬೀಳಬಹುದು ಎಂಬುದನ್ನು ಸ್ವತಂ ಮುಖ್ಯಮಂತ್ರಿಗಳೇ ಒಪ್ಪಿದಂತಿದೆ. ಒಟ್ಟಿನಲ್ಲಿ ಸರಕಾರದಲ್ಲಿ ಸ್ಥಿರತೆ ಕಾಣುತ್ತಿಲ್ಲ. ಈ ಸರಕಾರದ ಮೇಲೆ ಜನರಿಗೆ ಭರವಸೆ ಇಲ್ಲ ಎಂದು ಹೇಳಿದರು.

ಪ್ರತ್ಯೇಕ ಜಿಲ್ಲೆ ಅನಿವಾರ್ಯ: ಆಡಳಿತಾತ್ಮಕ ದೃಷ್ಟಿಯಿಂದ ತುಮಕೂರು ಜಿಲ್ಲೆಯ ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆ ಮಾಡುವುದು ಅನಿವಾರ್ಯವಿದೆ. ಆಡಳಿತಾತ್ಮಕ ದೃಷ್ಟಿಯಿಂದಲೇ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಲಾಗಿದೆ. ಇತ್ತೀಚೆಗೆ ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಬೇಕು ಎಂಬ ಕೂಗುಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಮಧುಗಿರಿಯನ್ನೂ ಸಹ ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಿ ಎಂದು ಒತ್ತಾಯ ಮಾಡಿದ್ದೇನೆ ಎಂದರು.

ತುಮಕೂರಿನಲ್ಲಿ 11 ವಿಧಾನಸಭಾ ಕ್ಷೇತ್ರ ಹಾಗೂ 10 ತಾಲ್ಲೂಕುಗಳಿವೆ. ನಾನು ಮಧುಗಿರಿಯಿಂದ ಶಾಸಕನಾಗಿದ್ದ ಸಂದರ್ಭದಲ್ಲಿಯೂ ಪ್ರತ್ಯೇಕ ಜಿಲ್ಲೆಯ ಕೂಗು ಇತ್ತು. ಮಧುಗಿರಿಯನ್ನು ಶೈಕ್ಷಣಿಕ ಜಿಲ್ಲೆಯನ್ನಾಗಿ ಮಾಡಿದ್ದೇವೆ. ಅನೇಕ ಉಪ ವಿಭಾಗಾಧಿಕಾರಿಗಳ ಕಚೇರಿಗಳಿವೆ.
ಪ್ರತ್ಯೇಕ ಜಿಲ್ಲೆ ಪರವಾಗಿ ಜನಾಭಿಪ್ರಾಯವೂ ಇದೆ. ಬಳ್ಳಾರಿ ಇತರೆ ಜಿಲ್ಲೆ ವಿಭಜನೆ ವೇಳೆ ನಮ್ಮ ತುಮಕೂರು ಜಿಲ್ಲೆ ವಿಭಜನೆಯನ್ನು ಪರಿಗಣಿಸಬೇಕು. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com