ಚುನಾವಣೆ ಸೋಲಿಗೆ ಮೈತ್ರಿ, ಬಿಜೆಪಿಯ ಅಪಪ್ರಚಾರ, ಒಳಜಗಳ ಕಾರಣ: ಸತ್ಯಶೋಧನಾ ಸಮಿತಿ ವರದಿ

ಕಳೆದ 2018ರ ವಿಧಾನಸಭೆ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿನ ಸೋಲು ಹಾಗೂ ಪಕ್ಷದ ಹಿನ್ನಡೆಗೆ ಕಾರಣವಾಗಿರುವ ನೈಜ ಅಂಶಗಳನ್ನು ಪಟ್ಟಿ ಮಾಡಲು ಹಿರಿಯ ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್ ಹಾಗೂ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ನೇತೃತ್ವದಲ್ಲಿ...

Published: 01st October 2019 08:36 PM  |   Last Updated: 01st October 2019 08:36 PM   |  A+A-


Dinesh Gundu Rao

ದಿನೇಶ್ ಗುಂಡೂರಾವ್

Posted By : Lingaraj Badiger
Source : UNI

ಬೆಂಗಳೂರು: ಕಳೆದ 2018ರ ವಿಧಾನಸಭೆ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿನ ಸೋಲು ಹಾಗೂ ಪಕ್ಷದ ಹಿನ್ನಡೆಗೆ ಕಾರಣವಾಗಿರುವ ನೈಜ ಅಂಶಗಳನ್ನು ಪಟ್ಟಿ ಮಾಡಲು ಹಿರಿಯ ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್ ಹಾಗೂ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ನೇತೃತ್ವದಲ್ಲಿ ರಚಿಸಲಾಗಿದ್ದ 'ಸತ್ಯ ಶೋಧನಾ ಸಮಿತಿʼ ಮೂರು ತಿಂಗಳು ಸುದೀರ್ಘ ಅಧ್ಯಯನ ನಡೆಸಿ ಕೆಪಿಸಿಸಿಗೆ ವರದಿ ಸಲ್ಲಿಸಿದೆ.

ಸೋಲಿಗೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದೇ ತಪ್ಪು ಎಂದು ಬೊಟ್ಟು ಮಾಡಿದೆ. ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ ಜತೆ ಮೈತ್ರಿ ಬೇಡ ಎಂದು ಸ್ಪಷ್ಟವಾಗಿ ಹೇಳಿದೆ. ಅಲ್ಲದೆ ಒಳಜಗಳ ಮತ್ತು ಬಿಜೆಪಿಯ ಅಪಪ್ರಚಾರ ಎದುರಿಸುವಲ್ಲಿ ಪಕ್ಷ ವಿಫಲವಾಗಿದ್ದು ಸಹ ಸೋಲಿಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ಒಟ್ಟು 62 ಪುಟಗಳುಳ್ಳ ವರದಿಯಲ್ಲಿ ಸೋಲಿಗೆ ಕಾರಣಗಳು ಮತ್ತು ಪರಿಣಾಮಗಳು, ಪಕ್ಷದ ಬಲವರ್ಧನೆಗೆ ಶಿಫಾರಸುಗಳು, ಪಕ್ಷದ ಚಟುವಟಿಕೆಗಳ ಕುರಿತು ಶಿಫಾರಸ್ಸು ಮಾಡಿದೆ. 

ರಾಜ್ಯದ 25  ಜಿಲ್ಲೆಗಳಲ್ಲಿ ಜಿಲ್ಲಾ ಹಾಗೂ ಲೋಕಸಭಾವಾರು ಸಭೆ ನಡೆಸಿ ಸ್ಥಳೀಯ ಕಾರ್ಯಕರ್ತರು, ಜಿಲ್ಲಾಮುಖಂಡರಿಂದ ಸೋಲಿಗೆ ಕಾರಣಗಳನ್ನು ಸಮಿತಿ ಪಟ್ಟಿ ಮಾಡಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸೂಕ್ತ ರೀತಿಯಲ್ಲಿ ಮೈತ್ರಿ ಆಗಿರಲಿಲ್ಲ. ಅಸಮರ್ಪಕ ಮೈತ್ರಿಯಿಂದ ಪಕ್ಷದ ಅಭ್ಯರ್ಥಿಗಳು ಸೋಲು ಕಾಣಬೇಕಾಯಿತು. ಪಕ್ಷದ ಕಾರ್ಯಕರ್ತರು ಹಾಗೂ ಮತದಾರರು ಮೈತ್ರಿಯನ್ನು ಒಪ್ಪಿಕೊಂಡಿಲ್ಲದಿರುವುದನ್ನು ಇದು ಸೂಚಿಸುತ್ತದೆ. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೇ 38.14, ಜೆಡಿಎಸ್ ಶೇ 19. ಸೇರಿ ಲೋಕಸಭಾ ಚುನಾವಣೆಯಲ್ಲಿ ಶೇ  57 ರಷ್ಟು ಮತಗಳು ಮೈತ್ರಿಕೂಟಕ್ಕೆ ಬರಬೇಕಿತ್ತು. ಮೈತ್ರಿ ಸರ್ಕಾರದಲ್ಲಿ ರೈತರ ಸಾಲಮನ್ನಾ ಸೇರಿದಂತೆ ಮುಂತಾದ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರೂ ನಿರೀಕ್ಷಿತ ಮತಗಳು ಪಕ್ಷಕ್ಕೆ ದೊರೆಯಲಿಲ್ಲ ಎಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ. 

ಮೈಸೂರು ಹಾಗೂ ಬೆಂಗಳೂರು ಕಂದಾಯ ವಿಭಾಗಗಳ ಅನೇಕ ಕ್ಷೇತ್ರಗಳಲ್ಲಿ 1977 ರಿಂದಲೂ ಕಾಂಗ್ರೆಸ್ ಗೆ ಜೆಡಿಎಸ್ ಪಕ್ಷವೇ ಪ್ರತಿಸ್ಪರ್ಧಿ. ಹೀಗಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಜನತಾದಳದ ಮತದಾರರು ಬೆಂಬಲಿಸಲಿಲ್ಲ ಎಂದು ಹೇಳಿದೆ. 
ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಅಭಿಪ್ರಾಯದಂತೆ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳು, ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿಯನ್ನು ಮುಂದುವರೆಸದಂತೆ ಸಮಿತಿ ಕೆಪಿಸಿಸಿಗೆ ಸಲಹೆ ನೀಡಿದೆ.

ಕಾಂಗ್ರೆಸ್ ಎನ್ನುವುದು ಬದುಕಿನ ಆಧಾರದ ಕಾನೂನುಗಳು ಹಾಗೂ ಕಾರ್ಯಕ್ರಮಗಳು, ಬಿಜೆಪಿ ಎಂದರೆ ಭಾವನೆಗಳನ್ನು ಕದಡುವ ಕಾನೂನುಗಳು ಮತ್ತು ಕಾರ್ಯಕ್ರಮಗಳನ್ನು ಹೊಂದಿದೆ. ಕಾಂಗ್ರೆಸ್ ಎಂದರೆ ಗಾಂಧಿ, ನೆಹರೂ ಮತ್ತು ಅಂಬೇಡ್ಕರ್ ಪರಂಪರೆ, ಬುದ್ಧ, ಬಸವ ಮತ್ತು ಕುವೆಂಪು ವಿಚಾರಧಾರೆಗಳಲ್ಲಿ ವಿಶ್ವಾಸ ಮೂಡಿಸಬೇಕೆಂದು ಸಮಿತಿ ಸಲಹೆ ಮಾಡಿದೆ. ರಾಷ್ಟ್ರ ಮತ್ತು ರಾಜ್ಯ ರಾಜಕಾರಣದ ಪ್ರಸ್ತುತ ಸಂದರ್ಭದಲ್ಲಿ ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಜನಪರ ಆಂದೋಲನಗಳ ಅಗತ್ಯ ಕಂಡುಬಂದಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. 

ವ್ಯಕ್ತಿ ಪ್ರತಿಷ್ಠೆ, ಗುಂಪುಗಾರಿಕೆ ಬಗ್ಗೆ ಪಕ್ಷ ಎಚ್ಚರಿಕೆ ವಹಿಸಬೇಕು ಮತ್ತು ಪಕ್ಷವಿರೋಧಿ ಚುಟವಟಿಕೆಗಳನ್ನು ಆಗಿಂದಾಗಲೇ ಹತೋಟಿಗೆ ತರಬೇಕು. ಬ್ಲಾಕ್, ಜಿಲ್ಲಾ ಮತ್ತು ರಾಜ್ಯ ಸಮಿತಿಗಳು, ಪಕ್ಷದ ಕಚೇರಿಗಳು ಸಮರ್ಪಕ ಆಡಳಿತ ನಿರ್ವಹಣೆಗಾಗಿ ಸಂಯೋಜನೆ ಮತ್ತು ಸಂಘಟನೆ ದೃಷ್ಟಿಯಿಂದ ಪಕ್ಷದ ಶಾಸಕರು ಸಂಸದರು ಪ್ರತಿ ತಿಂಗಳು ಕೆಪಿಸಿಸಿಗೆ ದೇಣಿಗೆ ನೀಡಬೇಕೆಂದು ಸಮಿತಿ ಹೇಳಿದೆ. 

ಪಕ್ಷ ಸಂಘಟನೆ ಕುರಿತು ಸಲಹೆ ನೀಡಿರುವ ಸತ್ಯ ಶೋಧನಾ ಸಮಿತಿ, ಪಕ್ಷದ ಆನ್ ಲೈನ್ ನೋಂದಣಿ ಅಭಿಯಾನ ಮತ್ತು ಪುಸ್ತಕದ ಮುಖಾಂತರ ಎರಡೂ ಪ್ರಕಾರಗಳಲ್ಲಿ ಸದಸ್ಯತ್ವ ನೋಂದಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕೆಲವು ಜಿಲ್ಲೆಗಳಲ್ಲಿ ನಾಯಕರ ರಿಪಬ್ಲಿಕ್  ಧೋರಣೆಯಿಂದ ಪಕ್ಷದ ಬೆಂಬಲವನ್ನು ವ್ಯಾಪಕವಾಗಿ ಸಂಘಟಿಸಲು ಮತ್ತು ಚುನಾವಣೆಯಲ್ಲಿ ಗೆಲುವು ಸಾಧಿಸಲು ಹಿನ್ನಡೆಯಾಗಿದೆ. ಜಾತಿ ಮತ್ತು ಹಣ ಕೆಲವು ಕ್ಷೇತ್ರಗಳಲ್ಲಿ ಪ್ರಭಾವ ಬೀರಿರುವುದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದಿದೆ.

ಪಕ್ಷ ಸಂಘಟನೆ ಸಮರ್ಪಕವಾಗಿ ಸಾಗಲು ಬೂತ್, ಬ್ಲಾಕ್, ಜಿಲ್ಲಾ ಸಮಿತಿಗಳನ್ನು ಕೂಡಲೇ ರಚಿಸಬೇಕು, ಕಾಂಗ್ರೆಸ್ ಸರ್ಕಾರದ ಜನಪರ ಸುಧಾರಣೆಗಳನ್ನು ಪ್ರಚುರ ಪಡಿಸುವುದು, ಭವಿಷ್ಯದ ಹೊಣೆಗಾರಿಕೆಯ ದೃಷ್ಟಿಯಿಂದ ಪಕ್ಷದ ಹಿರಿಯ ನಾಯಕರುಗಳು ಸಮಾಲೋಚನೆ ನಡೆಸಿ ಕಾರ್ಯತಂತ್ರ ರೂಪಿಸಬೇಕು. ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸಮಿತಿ ಶಿಫಾರಸು ಮಾಡಿದೆ.

ಕುಟುಂಬ ರಾಜಕಾರಣ ಹಾಗೂ ಸರ್ಕಾರಿ ನಿವೃತ್ತ ಅಧಿಕಾರಿಗಳಿಗೆ ಪಕ್ಷದಿಂದ ಟಿಕೆಟ್ ನೀಡುವುದಕ್ಕೆ ಎಲ್ಲಾ ಜಿಲ್ಲಾ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದನ್ನು ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಜಿಲ್ಲಾವಾರು ಪ್ರವಾಸದ ಸಂದರ್ಭದಲ್ಲಿ ಅನರ್ಹ ಶಾಸಕರ ವರ್ತನೆಯ ವಿರುದ್ಧ ಪಕ್ಷ ತೆಗೆದುಕೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ರಮೇಶ್ ಕುಮಾರ್ ಅವರ ತೀರ್ಪು ಸಮಂಜಸವೆಂದು ಅಭಿಪ್ರಾಯಪಟ್ಟಿದ್ದಾರೆ. ಅನರ್ಹ ಶಾಸಕರು ಪ್ರತಿನಿಧಿಸುತ್ತಿದ್ದ 17 ಕ್ಷೇತ್ರಗಳನ್ನು ಉಪಚುನಾವಣೆಯಲ್ಲಿ ಮರಳಿಪಡೆಯಲು ಕಟ್ಟುನಿಟ್ಟಾಗಿ ಪಕ್ಷ ಸಂಘಟನೆ ಹಾಗೂ ಪ್ರಚಾರ ನಡೆಸುವುದು ಅತಿ ಅವಶ್ಯಕವೆಂದು ಸಮಿತಿ ಅಭಿಪ್ರಾಯಪಟ್ಟಿದೆ.

ವರದಿ ಸ್ವೀಕಾರ ಬಳಿಕ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಚುನಾವಣೆ ಸೋಲಿನ ಬಗ್ಗೆ ವೈಜ್ಞಾನಿಕ ಸಂಶೋಧನೆ ಆಗಬೇಕಾಗಿದೆ. ಸಮಿತಿ ಗಂಭೀರವಾಗಿ ವರದಿ ಸಿದ್ಧಪಡಿಸಿದ್ದು, ಈ ವರದಿ ಆಧಾರದಲ್ಲಿ ಮುಂದಿನ ದಿನಗಳಲ್ಲಿ ಚರ್ಚಿಸಿ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಕೆಲವು ವಿಷಯಗಳು ಪಕ್ಷದ ವೇದಿಕೆಯಲ್ಲಿ ಚರ್ಚಸಿ ತಪ್ಪುಗಳನ್ನು ಸರಿಪಡಿಸಲು ಅನುಕೂಲವಾಗುತ್ತದೆ. ಮೂರು ತಿಂಗಳು ಪ್ರಯತ್ನಿಸಿ ವರದಿ ನೀಡಿದ್ದಾರೆ. ಇದನ್ನು ಅನುಷ್ಠಾನ ಮಾಡದೇ ಹಾಗೆ ಇಟ್ಟುಕೊಂಡರೆ ಏನೂ ಪ್ರಯೋಜನ ಇಲ್ಲ. ಎಲ್ಲ ನಾಯಕರ ಜೊತೆ ಚರ್ಚಿಸಿ ವರದಿ ಜಾರಿಗೆ ಕ್ರಮ ಕೈಗೊಳ್ಳುತ್ತೇವೆ. ಬಿಜೆಪಿಯವರು ಭಾವನಾತ್ಮಕವಾಗಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದನ್ನು ಎದುರಿಸಲು ಈ ವರದಿಯನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಮಿತಿ ಸಂಚಾಲಕ ಬಸವರಾಜ ರಾಯರೆಡ್ಡಿ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ಕಾಂಗ್ರೆಸ್ ಮಾಡಿರುವ ಹೋರಾಟದ ಬಗ್ಗೆ ವರದಿಯಲ್ಲಿ ವಿವರಿಸಲಾಗಿದೆ. ಪ್ರತಿಯೊಂದು ಜಿಲ್ಲೆಯ ಎಲ್ಲ ಹಂತದ ಮುಖಂಡರು ಪಾಲ್ಗೊಂಡು ಸಮಿತಿಯ ಮುಂದೆ ತಮ್ಮ ಅಭಿಪ್ರಾಯ ನೀಡಿದ್ದಾರೆ. ವರದಿಯಲ್ಲಿ ಯಾವುದನ್ನೂ  ಮುಚ್ಚಿಟ್ಟಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಪಕ್ಷ. ಹೇಗೆ ಬದಲಾವಣೆ ಮಾಡಿಕೊಳ್ಳಬೇಕು ಎಂದು ಶಿಫಾರಸ್ಸು ಮಾಡಿದ್ದೇವೆ ಎಂದರು.

2013 ಕ್ಕಿಂತ 2018ಕ್ಕೆ 1.1.4 % ಹೆಚ್ಚಿಗೆ ಮತಗಳು ಬಂದಿವೆ. ಕಾಂಗ್ರೆಸ್ ವಿರೋಧಿ ಅಲೆ ಇರಲಿಲ್ಲ. ಮತದಾರರಲ್ಲಿ ಕಾಂಗ್ರೆಸ್ ಜನಪ್ರಿಯತೆ ಕಡಿಮೆಯಾಗಿಲ್ಲ. ಅದನ್ನು ಸರಿ ಎಂದು ಒಪ್ಪಿಕೊಂಡು ಸುಮ್ಮನೆ ಕೂಡುವಂತಿಲ್ಲ. ಲೋಕಸಭೆಯಲ್ಲಿ ಬಿಜೆಪಿಗೆ 51 %ಕಾಂಗ್ರೆಸ್ ಗೆ 31.88 %ಜೆಡಿಎಸ್ ಗೆ 9.28 % ಮತಗಳು ಬಂದಿವೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬಾರದ ಕಾರಣ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಮೈತ್ರಿ ಸರ್ಕಾರ ಸಾಲ ಮನ್ನಾದಂತ ಉತ್ತಮ ಕಾರ್ಯಕ್ರಮ ಜಾರಿಗೆ ತಂದಿದ್ದರೂ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ ಶೇ. 17 ರಷ್ಟು ಮತಗಳು ಬಿಜೆಪಿಗೆ ಹೋಗಿದೆ. ಜೆಡಿಎಸ್ ಮತಗಳು ಬಿಜೆಪಿಗೆ ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಜನರು ಮೈತ್ರಿಯನ್ನು ಒಪ್ಪಿಕೊಳ್ಳಲಿಲ್ಲ.  ಕಾರ್ಯಕರ್ತರು ಮೈತ್ರಿ ಸರಿಯಾಗಿ ಆಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

ಕೆಪಿಸಿಸಿ ಪಾದಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆಯೂ ಸಲಹೆ ನೀಡಿದ್ದೇವೆ. ವಿಜಿಟಿಂಗ್ ಪದಾಧಿಕಾರಿಗಳನ್ನು ಕೈ ಬಿಡಬೇಕು.  ಪಕ್ಷ ಸಂಘಟನೆಯಲಲಿ ಎನ್ ಎಸ್ ಯು ಐ ಹಾಗೂ ಯುವ ಘಟಕ ಬಳಕೆ ಮಾಡಿಕೊಳ್ಳಲು ಸಲಹೆ ನೀಡಿದ್ದು, ಯುವ ಕಾಂಗ್ರೆಸ್ ಚುನಾವಣೆ ಕೈ ಬಿಡುವಂತೆ ಸಲಹೆ.  ಸೇವಾದಳ ಬಲಗೊಳಿಸವುದು ಸೇರಿದಂತೆ ಹಲವು ಅಂಶಗಳನ್ನು ಪ್ರಸ್ತಾಪಿಸಲಾಗಿದೆ. 

ಎಸ್ಸಿ ಎಸ್ಟಿ ವಿಭಾಗದಲ್ಲಿ ಸಮಸ್ಯೆಗಳಿದ್ದು, ಪರಿಶಿಷ್ಟರ  ಒಳ ಮೀಸಲಾತಿ ಬಗ್ಗೆ ಚರ್ಚೆಯಾಗಬೇಕು. ವೀರಶೈವ ಲಿಂಗಾಯತ ಧರ್ಮದ ವಿಚಾಋದಲ್ಲಿ ಪಕ್ಷದ ವಿರುದ್ಧ ಅಪಪ್ರಚಾರ ಮಾಡಲಾಯಿತು. ಬಸವಣ್ಣನ ಫೋಟೊ ಸರ್ಕಾರಿ ಕಚೇರಿಯಲ್ಲಿ ಹಾಕಲಾಯಿತು. ವಿಜಯಪುರ ಮಹಿಳಾ ವಿವಿಗೆ ಅಕ್ಕ ಮಹಾದೇವಿ ವಿವಿ ಎಂದು ಹೆಸರು ಇಡಲಾಯಿತು. ಬಿಜೆಪಿಯ ಅಪಾರ ಪ್ರಚಾರ ತಡೆಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ವರದಿಯಲ್ಲಿನ ಅಂಶಗಳನ್ನು ರಾಯರೆಡ್ಡಿ ಬಿಚ್ಚಿಟ್ಟರು.

ರಾಜ್ಯದಲ್ಲಿ ಶೇ 13 ರಷ್ಟು ಮುಸ್ಲಿಂ ಸಮುದಾಯವಿದ್ದು, ಅವರಿಗೆ ಚುನಾವಣೆಯಲ್ಲಿ ಹೆಚ್ಚಿನ ಅವಕಾಶ ನೀಡಬೇಕು. ಒಕ್ಕಲಿಗರನ್ನು ಸ್ಕಾಕ್ ಹೋಲ್ಡ್ ಫ್ಯಾಕ್ಟರಿ ಮಾಡಿಕೊಂಡಿದ್ದಾರೆ. ಕೆಂಪೇಗೌಡ ಹೆಸರು ವಿಮಾನ ನಿಲ್ದಾಣಕ್ಕೆ ಇಡಲು ತೀರ್ಮಾನಿಸಿದ್ದೆ ಕಾಂಗ್ರೆಸ್.  ಬ್ರಾಹ್ಮಣ ಅಭಿವೃದ್ಧಿ ನಿಗಮ ಮಾಡಿದ್ದೇವೆ. ಐವತ್ತಾರು ಕ್ಷೇತ್ರದಲ್ಲಿ ಯಾವ ರೀತಿ ಬದಲಾವಣೆ ಮಾಡಬೇಕು ಎನ್ನುವ ಕುರಿತು ಸಲಹೆ ನೀಡಲಾಗಿದೆ ಎಂದರು.

ಬಿಜೆಪಿ ವಿರುದ್ಧ ಪ್ರತಿತಂತ್ರ ಹೂಡುವ ಬಗ್ಗೆ ವರದಿಯಲ್ಲಿ ಸಲಹೆಗಳನ್ನು ನೀಡಿದ್ದೇವೆ. ಪಕ್ಷಾಂತರ ಪಿಡುಗಿನ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಇವಿಎಂ ಬಗ್ಗೆ ಕಾರ್ಯಕರ್ತರ ಅಭಿಪ್ರಾಯವನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ನೇರವಾಗಿ ಆರೋಪಗಳು ಬಂದಿವೆ ಅದನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.

ಹಿರಿಯ ಮುಖಂಡ ವಿ.ಆರ್.ಸುದರ್ಶನ ಮಾತನಾಡಿ, ಸತ್ಯ ಶೋಧನಾ ಸಮಿತಿ ವರದಿ ಸಲ್ಲಿಕೆಯಾಗಿದೆ.  ಕರ್ನಾಟಕದ ಇತಿಹಾಸದಲ್ಲಿ ಒಂದು ರಾಜಕೀಯ. ಪಕ್ಷ ಸೋಲಿಗೆ ಕಾರಣ ಹುಡುಕಲು ಸತ್ಯ ಶೋದನಾ ಸಮಿತಿ ರಚನೆ ಮಾಡಿದ್ದು ಇದೆ ಮೊದಲು. ಚುನಾವಣೆ ಸೋಲಿಗೆ ನಾಯಕರ ಅಭಿಪ್ರಾಯಗಳೆ ತೀರ್ಮಾನವಾಗಬಾರದು. ಜೂನ್ ತಿಂಗಳಿನಿಂದ ಎಲ್ಲ.ಕ್ಷೇತ್ರಗಳಿಗೆ ತೆರಳಿ ಬ್ಲಾಕ್ ಅಧ್ಯಕ್ಷರು, ಸದಸ್ಯರು, ಜಿಲ್ಲಾ ಮುಖಂಡರ ಅಭಿಪ್ರಾಯ ಪಡೆಯಲಾಗಿದೆ ಎಂದರು.

ರಾಜ್ಯದ ಎಲ್ಲ ಕ್ಷೇತ್ರಗಳಿಗೆ ತೆರಳಿ ಅಭಿಪ್ರಾಯ ಪಡೆಯಲಾಗಿದೆ. 62 ಪುಟಗಳ ವರದಿ. 24 ವಿಷಯಗಳನ್ನು ತೆಗೆದುಕೊಳ್ಳಲಾಗಿದೆ. 56 ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದು, ಈ ಬಾರಿ ಮತ ಹೆಚ್ಚಿಗೆ ಬಂದರೂ ಸರ್ಕಾರ ರಚನೆಗೆ ಅವಕಾಶ ಆಗಲಿಲ್ಲ. ರಾಹುಲ್ ರಾಜೀನಾಮೆ, ಕುಟುಂಬ ರಾಜಕಾರಣ, ನಿವೃತ್ತ ಅಧಿಕಾರಿಗಳನ್ನು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ ಕಾರ್ಯಕರ್ತರಿಂದ ಅಭಿಪ್ರಾಯ ಬಂದಿದೆ. ಸೊಲಿನ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ಸಂಪಾದಕೀಯವನ್ನು ಗಂಭೀರವಾಗಿ ಪರಿಗಣಿಸಿ ವರದಿಯಲ್ಲಿ ಅಳವಡಿಸಲಾಗಿದೆ ಎಂದು ಸುದರ್ಶನ್ ಸ್ಪಷ್ಟಪಡಿಸಿದರು.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp