ವೋಟಿಗಾಗಿ ಒಕ್ಕಲಿಗ ಸಮುದಾಯ ಬಳಕೆ: ಕುಮಾರಸ್ವಾಮಿ ವಿರುದ್ಧ ಬಿ.ವೈ. ವಿಜಯೇಂದ್ರ ಆರೋಪ 

ಒಕ್ಕಲಿಗ ಸಮುದಾಯವನ್ನು ಜೆಡಿಎಸ್ ಕೇವಲ ಮತ​ ಬ್ಯಾಂಕಾಗಿ ಬಳಸಿಕೊಂಡು ರಾಜಕೀಯ ಮಾಡುತ್ತಿದೆ ಎಂದು ಬಿ. ವೈ ವಿಜಯೇಂದ್ರ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆರೋಪಿಸಿದ್ದಾರೆ.
ಕುಮಾರಸ್ವಾಮಿ, ವಿಜಯೇಂದ್ರ
ಕುಮಾರಸ್ವಾಮಿ, ವಿಜಯೇಂದ್ರ

ಮಂಡ್ಯ:ಒಕ್ಕಲಿಗ ಸಮುದಾಯವನ್ನು ಜೆಡಿಎಸ್ ಕೇವಲ ಮತ​ ಬ್ಯಾಂಕಾಗಿ ಬಳಸಿಕೊಂಡು ರಾಜಕೀಯ ಮಾಡುತ್ತಿದೆ ಎಂದು ಬಿ. ವೈ ವಿಜಯೇಂದ್ರ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆರೋಪಿಸಿದ್ದಾರೆ.
 
ಕೆ.ಆರ್​.ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗ ನಾಯಕರೆನಿಸಿರುವ ಕುಮಾರಸ್ವಾಮಿ,ಒಕ್ಕಲಿಗ ಸಮಾಜವನ್ನು ಕೇವಲ ಮತ ಬ್ಯಾಂಕ್ ಆಗಷ್ಟೇ ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ.ಅವರಿಗೆ ಅಧಿಕಾರ ದೊರೆತರೂ ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಲಿಲ್ಲ ಎಂದು ದಳಪತಿಗಳ ವಿರುದ್ಧ ಕಿಡಿ ಕಾರಿದರು.
 
ಕರ್ನಾಟಕದಲ್ಲಿ ಜಾತ್ಯಾತೀತ ಜನತಾದಳ ನಿರ್ನಾಮವಾಗಿದೆ.ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಜೆಡಿಎಸ್​​ ಪಕ್ಷದಲ್ಲಿ ಉಳಿದುಕೊಂಡಿದ್ದಾರೆ.ಅವರು ಯಾವಾಗ ಜೆಡಿಎಸ್ ಗೆ ಹಾಗೂ ಕುಮಾರಸ್ವಾಮಿಗೆ ಗುಡ್ ಬೈ ಹೇಳುತ್ತಾರೆ ಎಂಬುದು ಗೊತ್ತಿಲ್ಲ.ರಾಜ್ಯ ಮುಖ್ಯಮಂತ್ರಿಯಾಗಿ ಓರ್ವ ಹೆಣ್ಣು ಮಗಳ ಮುಂದೆ ತನ್ನ ಪುತ್ರನನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ.ಅಧಿಕಾರದ‌ ಮದದಿಂದ ಲೋಕಸಭಾ ಚುನಾವಣೆ ಯಲ್ಲಿ ಮಂಡ್ಯದಲ್ಲಿ ಗೆಲ್ಲುತ್ತೆವೆ ಎಂದು ಬೀಗುತ್ತಿದ್ದರು ಎಂದು ಲೇವಡಿ ಮಾಡಿದರು. 
 
ಅವರ ಪಕ್ಷದ ನಾಯಕರು ಹೆಣ್ಣುಮಗಳ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು.ಹೆಣ್ಣಿಗೆ ಗೌರವ ಕೊಡಬೇಕು ಎಂಬ ಕನಿಷ್ಠ ಸೌಜನ್ಯವೂ ಅಂದಿನ‌ ಮುಖ್ಯಮಂತ್ರಿಗೆ ಇರಲಿಲ್ಲ.ಮಂಡ್ಯದ ಜನತೆ ಪ್ರಜ್ಞಾವಂತರು. ಅಧಿಕಾರದ ಮದದಲ್ಲಿ ಮೆರೆಯುತ್ತಿದ್ದವರಿಗೆ ಸರಿಯಾದ ಪಾಠ ಕಲಿಸಿದ್ದಾರೆ ಎಂದು ಎಚ್​​ಡಿ ಕುಮಾರಸ್ವಾಮಿ ಹೆಸರು ಹೇಳದೆ ಆಕ್ರೋಶ ವ್ಯಕ್ತಪಡಿಸಿದರು. 
 
ಯಡಿಯೂರಪ್ಪ ಅವರನ್ನು ಒಕ್ಕಲಿಗ ವಿರೋಧಿ ಎಂದು ಬಿಂಬಿಸಲಾಗುತ್ತದೆ. ಅದೆಲ್ಲ ಶುದ್ಧ ಸುಳ್ಳು. ಒಕ್ಕಲಿಗ ಸಮುದಾಯಕ್ಕೆ ಸೇರಿದ ಸದಾನಂದ ಗೌಡರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಅದೇ ಬಿಎಸ್​ ಯಡಿಯೂರಪ್ಪ. ಎಲ್ಲ ಸಮುದಾಯದವರೂ ಯಡಿಯೂರಪ್ಪ ಅವರನ್ನು ಒಪ್ಪಿದ್ದಾರೆ ಎಂದು ಯಡಿಯೂರಪ್ಪ ಅವರಿಗೆ ಒಕ್ಕಲಿಗ ವಿರೋಧಿ ಎಂಬ ಹಣೆಪಟ್ಟಿ ಕಟ್ಟುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com