ಬಿಜೆಪಿ ಸಭೆಯಲ್ಲಿ ಸುಮಲತಾ ಅಂಬರೀಶ್: ಕೇಸರಿ ಪಡೆಯತ್ತ ಮಂಡ್ಯ ಸಂಸದೆ ಚಿತ್ತ?

ಕಳೆದ ಲೋಕಸಭೆ ಸಭೆ ಚುನಾವಣೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಬುಧವಾರ ಬಿಜೆಪಿ ಸಭೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟು ಮಾಡಿದ್ದಾರೆ. 
ಬಿಜೆಪಿ ಸಭೆಯಲ್ಲಿ ಸುಮಲತಾ ಅಂಬರೀಶ್
ಬಿಜೆಪಿ ಸಭೆಯಲ್ಲಿ ಸುಮಲತಾ ಅಂಬರೀಶ್

ಮಂಡ್ಯ: ಕಳೆದ ಲೋಕಸಭೆ ಸಭೆ ಚುನಾವಣೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಬುಧವಾರ ಬಿಜೆಪಿ ಸಭೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟು ಮಾಡಿದ್ದಾರೆ. 

ಇಂದು ಮಂಡ್ಯ ಜಿಲ್ಲೆ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅವರು, ನಾನು ಬಿಜೆಪಿ  ಸೇರುವುದಾದರೆ ಗೌಪ್ಯತೆ ಕಾಪಾಡಲು ಸಾಧ್ಯವೇ. ಮೊದಲು ಮಾಧ್ಯಮದವರಿಗೆ ನಿರ್ಧಾರ ಪ್ರಕಟಿಸಿ, ಬಳಿಕ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದರು.

ಈವರೆಗೂ ಯಾವ ಪಕ್ಷದವರು ನನ್ನನ್ನ ಆಹ್ವಾನಿಸಿಲ್ಲ. ಕೇಂದ್ರದಲ್ಲಿ ಬಹುಮತ ಇದೆ. ನನ್ನ ಅಗತ್ಯ ಅವರಿಗೆ ಇದೆಯಾ ಯೋಚನೆ ಮಾಡಿ ಎಂದರು.

ಇನ್ನು ಕಬ್ಬು ಬೆಳೆಗಾರರ ಸಮಸ್ಯೆ ನಿನ್ನೆ‌, ಮೊನ್ನೆಯದಲ್ಲ. ಹಿಂದಿನಿಂದಲೂ ಈ‌ ಸಮಸ್ಯೆ‌ ಇದೆ. ಈ ಹಿಂದೆ ಅಧಿಕಾರದಲ್ಲಿದ್ದವರ ನಿರ್ಲಕ್ಷದಿಂದ ಕಬ್ಬು ಬೆಳೆಗಾರರು‌ ಸಮಸ್ಯೆಗೆ ಸಿಲುಕಿದ್ದಾರೆ. ಮೂರು ತಿಂಗಳಿಂದಷ್ಟೆ ಗೆದ್ದವರು ಏನು ಮಾಡ್ಲಿಲ್ಲ ಅಂದರೆ ಹೇಗೆ ಎಂದರು.

ಜೋಡೆತ್ತುಗಳು ಎಲ್ಲಿ ಹೋದರು ಎಂಬ ಶಿವರಾಮೇಗೌಡ ಟೀಕೆ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಪಕ್ಷದ 8 ಜನ ಶಾಸಕರೇ ಇದ್ದಾರೆ,
ಅಧಿಕಾರದಲ್ಲಿರುವ ಶಾಸಕರನ್ನ ಒತ್ತಾಯಿಸುವ ಬದಲು ಜೋಡೆತ್ತುಗಳ ಮೇಲೆ ಏಕೆ ಟೀಕೆ? ನಾನು ಒಬ್ಬಳು ಗೆದ್ದ ಮೇಲೆ ಉಳಿದವರ ಜವಾವ್ದಾರಿ ಮುಗಿದಿದೆಯಾ? ಅಥವ ಅವರ ಸೌಲಭ್ಯಗಳು ಕಡಿತವಾಗಿವೆಯಾ? ಎಂದು ಸುಮಲತಾ ಪ್ರಶ್ನಿಸಿದರು.

ಸುಮಲತಾ ಫಾರಿನ್ ಟೂರ್ ಇನ್ನೂ ಮುಗಿಸಿಲ್ಲ ಎಂಬ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಹೊರ ದೇಶದಲ್ಲಿ ಯಾರಿದ್ದರು, ಹೇಗಿದ್ದರು ಎಂಬುದರ ಫೋಟೋಸ್ ರಿಲೀಸ್ ಆಗಿವೆ. ಜನರಿಗೆ ಯಾರು ಏನು ಎಂಬುದು ಗೊತ್ತಾಗಿದೆ ಎಂದರು.

ಇದು ರಾಜಕಾರಣಿಗಳ ರಾಜಕೀಯ ಆಟ ಅಷ್ಟೆ. ಈಗಿನ ಸಿಎಂ ಸಂಸದರ ಸಭೆ ಕರೆದಾಗ ಮೊದಲು ಧ್ವನಿ ಎತ್ತಿದ್ದು ನಾನು. ಖಂಡಿತ ನಾವೆಲ್ಲರೂ ಸೇರಿ‌ ಜಿಲ್ಲೆಯ ಅಭಿವೃದ್ದಿಗೆ ಮುಂದಾಗೋಣ. ಮೀಡಿಯಾ ಮುಂದೆ, ಸ್ಟುಡಿಯೋದಲ್ಲಿ ಕುಳಿತು ವೇದಿಕೆ ಸಿಕ್ಕಿದೆ ಅಂತ ಮಾತನಾಡುವುದಲ್ಲ.
ರೈತರ ಬಳಿ ತೆರಳಿ ವಾಸ್ತವ ಸ್ಥಿತಿ ಅರಿಯಬೇಕು. ಆಗ ಮಾತ್ರ ಧ್ವನಿಗಳಿಗೆ ಬೆಲೆ ಸಿಗುತ್ತೆ ಎಂದು ಸಂಸದೆ ಹೇಳಿದರು.

ಪಕ್ಷ ರಾಜಕಾರಣದಿಂದ ರೈತರಿಗೆ ತೊಂದರೆ ಆಗಬಾರದು, ಸಿದ್ದರಾಮಯ್ಯ ಬೆಂಬಲದಿಂದ ಸುಮಲತಾ ಗೆಲುವು ಎಂಬ ಜೆಡಿಎಸ್ ಆರೋಪ ಸರಿಯಲ್ಲ. ಜೆಡಿಎಸ್, ಕಾಂಗ್ರೆಸ್ ರಾಜಕೀಯಕ್ಕೆ ನನ್ನ ಎಳೆಯ ಬೇಡಿ. ನನಗೆ ಕಾಂಗ್ರೆಸ್ ಪಕ್ಷ ಸಪೋರ್ಟ್ ಮಾಡಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಬೆಂಬಲ ನೀಡಿದ್ದಾರೆ. ಅವರಿಗೆ ಈಗಾಗಲೇ ಹಲವಾರು ವೇದಿಕೆಗಳಲ್ಲಿ ಕೃತಜ್ಞತೆ ಹೇಳಿದ್ದೇನೆ ಎನ್ನುವ ಮೂಲಕ ಜೆಡಿಎಸ್ ನಾಯಕ  ಶಿವರಾಮೇಗೌಡಗೆ ಸುಮಲತಾ ಟಾಂಗ್ ನೀಡಿದರು.

ಬಿಜೆಪಿ ಸಭೆಯಲ್ಲಿ ಸುಮಲತಾ ಭಾಗವಹಿಸಿದ ಹಿನ್ನೆಲೆಯಲ್ಲಿ ಅವರ ನಿರ್ಧಾರದಿಂದ ಬಹುತೇಕ ಬೆಂಬಲಿಗರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಚುನಾವಣೆ ವೇಳೆ ಸುಮಲತಾ ಬೆಂಬಲಿಸಿದ್ದ ಬಹುತೇಕ ಕೈ ನಾಯಕರು, ಮುಖಂಡರು, ಕಾರ್ಯಕರ್ತರು ಸುಮಲತಾ ಏಕಪಕ್ಷೀಯ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಿಜೆಪಿ ಸಭೆಯಲ್ಲಿ ಪಾಲ್ಗೊಳ್ಳದಂತೆಯೂ ಮನವಿ ಮಾಡಿದ್ದರು ಮತ್ತು  ಸಭೆಯಲ್ಲಿ ಪಾಲ್ಗೊಂಡರೆ ದೂರ ಸರಿಯುವ ಎಚ್ಚರಿಕೆ ನೀಡಿದ್ದರು.

-ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com