ಮತ್ತೆ ಕಾವೇರಿ ನಿವಾಸಕ್ಕೆ ಬೇಡಿಕೆ ಇಟ್ಟ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪಗೆ ಪತ್ರ

ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿಯೇ ವಾಸ್ತವ್ಯ ಮುಂದುವರೆಸಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮನಸು ಮಾಡಿದ್ದು, ಕಾವೇರಿ ನಿವಾಸವನ್ನು ತಮಗೆ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿಯೇ ವಾಸ್ತವ್ಯ ಮುಂದುವರೆಸಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮನಸು ಮಾಡಿದ್ದು, ಕಾವೇರಿ ನಿವಾಸವನ್ನು ತಮಗೆ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.
  
2013ರಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಕಾವೇರಿ ನಿವಾಸ ಹಂಚಿಕೆಯಾಗಿದ್ದು, ಇಲ್ಲಿಯವರೆಗೂ ಕಾವೇರಿಯಲ್ಲಿಯೇ ತಮ್ಮ ವಾಸ್ತವ್ಯ ಮುಂದುವರೆಸಿದ್ದರು.

ಮೈತ್ರಿ ಸರ್ಕಾರದಲ್ಲಿಯೂ ಸಿದ್ದರಾಮಯ್ಯ ಕಾವೇರಿಯನ್ನು ಬಿಟ್ಟು ಕೊಟ್ಟಿರಲಿಲ್ಲ‌. ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೂ ಕಾವೇರಿಯ ಮೇಲೆ ಕಣ್ಣಿತ್ತಾದರೂ ಸಿದ್ದರಾಮಯ್ಯ ಕಾವೇರಿ ನಿವಾಸವನ್ನು ಬಿಟ್ಟುಕೊಟ್ಟಿರಲಿಲ್ಲ.
  
ಮೈತ್ರಿ ಸರ್ಕಾರ ಪತನವಾದ ಬಳಿಕ ಬಿಜೆಪಿ ಸರ್ಕಾರದಲ್ಲಿ ಎಲ್ಲ ಸಚಿವರಿಗೆ ನಿವಾಸ ಹಂಚಿಕೆ ಮಾಡಲಾಗಿತ್ತಾದರೂ ಕಾವೇರಿಯನ್ನು ಯಾರಿಗೂ ಹಂಚಿಕೆ ಮಾಡಿರಲಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೇ ಬಂದ ಮೇಲೂ ಸಿದ್ದರಾಮಯ್ಯ ತಮ್ಮ ನೆಚ್ಚಿನ ನಿವಾಸವನ್ನು ಬಿಡಲು ಮನಸು ಮಾಡಿರಲಿಲ್ಲ.
  
ಆದರೆ ಸಿದ್ದರಾಮಯ್ಯನಿಗೆ ವಿರೋಧ ಪಕ್ಷದ ಸ್ಥಾನ ಕೈತಪ್ಪುವ ಸಾಧ್ಯತೆ ಇದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಸರ್ಕಾರಿ ನಿವಾಸವನ್ನು ತಮ್ಮ ಸ್ವಗೃಹಕ್ಕೆ ಸ್ಥಳಾಂತರ ಮಾಡಲು ತೀರ್ಮಾನಿಸಿದ್ದರು. ಈ ನಡುವೆ ಸಿದ್ದರಾಮಯ್ಯ ಅವರ ತೀರ್ಮಾನಿಸುತ್ತಿದ್ದಂತೆಯೇ ಯಡಿಯೂರಪ್ಪ ತಮ್ಮ ಗೃಹವನ್ನು ರೇಸ್ ಕೋರ್ಸ್ ರಸ್ತೆಯ ಬಳಿಯಿಂದ ದಿಡೀರ್ ಆಗಿ ಸಿದ್ದರಾಮಯ್ಯ ವಾಸವಿದ್ದ ಕಾವೇರಿ ನಿವಾಸವನ್ನು ಹಂಚಿಕೆ ಮಾಡಿ ಡಿಪಿಎಆರ್ ಪ್ರಕಟಿಸಿತು.
  
ಈ ನಡುವೆ ವಿಧಾನ ಸಭೆ ಅಧಿವೇಶನ ಆರಂಭವಾಗುತ್ತಿದ್ದಂತೆಯೇ, ಕಾಂಗ್ರೆಸ್ ಹೈ ಕಮಾಂಡ್ ಸಿದ್ದರಾಮಯ್ಯ ಅವರನ್ನು ವಿಧಾನ ಸಭೆ ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದು ಕಾವೇರಿ ನಿವಾಸವನ್ನು ತಮಗೆ ಹಂಚಿಕೆ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಒತ್ತಾಯವನ್ನು ಮುಖ್ಯಮಂತ್ರಿ ಅವರು ಹೇಗೆ ಪರಿಗಣಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com