ಕಲಾಪಕ್ಕೆ ಮಾಧ್ಯಮ ನಿರ್ಬಂಧ ಪ್ರಜಾಪ್ರಭುತ್ವಕ್ಕೆ ಮಾರಕ: ಸಿದ್ದರಾಮಯ್ಯ

ಅಧಿವೇಶನದ ಕಲಾಪಕ್ಕೆ ವಿದ್ಯುನ್ಮಾನ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮದ ಛಾಯಾಗ್ರಾಹಕರಿಗೆ ನಿರ್ಬಂಧ ವಿಧಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಅಧಿವೇಶನದ ಕಲಾಪಕ್ಕೆ ವಿದ್ಯುನ್ಮಾನ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮದ ಛಾಯಾಗ್ರಾಹಕರಿಗೆ ನಿರ್ಬಂಧ ವಿಧಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ವಿಧಾನಸಭೆಯಲ್ಲಿ ಮಾಧ್ಯಮ ನಿರ್ಬಂಧ ವಿಚಾರ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಸದನದಲ್ಲಿ ಮಾಧ್ಯಮಗಳ ನಿಷೇಧ ಸರಿಯಲ್ಲ. ಪಾರದರ್ಶಕವಾಗಿರಬೇಕು. ಹೀಗಾಗಿ ಕೂಡಲೇ ನಿರ್ಬಂಧ ಹಿಂಪಡೆದು, ಶಾಸನಸಭೆಯ ಕಲಾಪವನ್ನು ಜನ ಗಮನಿಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸದನವನ್ನು ಇಡೀ ರಾಜ್ಯದ ಜನ ನೋಡಬೇಕು. ಎಲ್ಲರೂ ಪತ್ರಿಕೆ ಓದುವುದಿಲ್ಲ. ಟಿವಿ ಮೂಲಕ ಸದನದ ಕಲಾಪವನ್ನು ತಿಳಿದುಕೊಳ್ಳುತ್ತಿದ್ದಾರೆ. ಆದರೆ ಟಿವಿ ಕ್ಯಾಮೆರಾ ನಿಷೇಧ ಮಾಡಿದ್ದು ಏಕೆ? ಖಾಸಗಿ ಕ್ಯಾಮೆರಾ ಇದ್ದಿದ್ದರೆ ಇಲ್ಲಿದ್ದ ಸದಸ್ಯರಿಗೆ ಎಚ್ಚರಿಕೆ ಇರುತ್ತಿತ್ತು ಎಂದರು.

ಮಾಧ್ಯಮಗಳ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಚ್ಯುತಿ ತರುವ ಈ ಸ್ಪೀಕರ್ ಕ್ರಮ ಪ್ರಜಾತಂತ್ರಕ್ಕೂ ಪ್ರಬಲ ಹೊಡೆತ ನೀಡುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

ಅನಕ್ಷರಸ್ಥ ಸಾಮಾನ್ಯ ಜನರೂ ಕಲಾಪವನ್ನು ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ವೀಕ್ಷಿಸಲು ಇದ್ದ ಅವಕಾಶ ಕಸಿದುಕೊಂಡಿರುವ ಸ್ಪೀಕರ್‌ ತೀರ್ಮಾನ ಒಪ್ಪಲಾಗದು. ಈ ಬಗ್ಗೆ ಸ್ಪೀಕರ್‌ ಮನವೊಲಿಸಿ ನಿರ್ಬಂಧ ವಾಪಸ್‌ ಪಡೆಬೇಕು ಎಂದು ಸಿಎಂಗೆ ಒತ್ತಾಯಿಸಿದರು. ಸಿದ್ದರಾಮಯ್ಯ ಬೇಡಿಕೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಾತ್ರವಲ್ಲದೆ, ಆಡಳಿತ ಪಕ್ಷದ ಕೆಲವು ಸದಸ್ಯರೂ ಧ್ವನಿಗೂಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com