ಮಹಾರಾಷ್ಟ್ರದಲ್ಲಿ ಈ ಬಾರಿ ಕಾಂಗ್ರೆಸ್ - ಎನ್ ಸಿಪಿ ಮೈತ್ರಿ ಸರ್ಕಾರ ರಚನೆ: ಮಲ್ಲಿಕಾರ್ಜುನ್ ಖರ್ಗೆ ವಿಶ್ವಾಸ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಅಕ್ಟೋಬರ್ 21ರಂದು ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಶನಿವಾರ ಅಂತ್ಯಗೊಂಡಿದೆ ಎಂದು ಕಾಂಗ್ರೆಸ್ ನಾಯಕ, ಮಹಾರಾಷ್ಟ್ರ ಉಸ್ತುವಾರಿ ಮಲ್ಲಿಕಾರ್ಜುನ್ ಖರ್ಗೆ ಅವರು ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಅಕ್ಟೋಬರ್ 21ರಂದು ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಶನಿವಾರ ಅಂತ್ಯಗೊಂಡಿದೆ ಎಂದು ಕಾಂಗ್ರೆಸ್ ನಾಯಕ, ಮಹಾರಾಷ್ಟ್ರ ಉಸ್ತುವಾರಿ ಮಲ್ಲಿಕಾರ್ಜುನ್ ಖರ್ಗೆ ಅವರು ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿ ಉತ್ತಮ ಸ್ಥಿತಿಯಿದ್ದು, ನಾನು ಸಾಧ್ಯವಾದಷ್ಟೂ ಪ್ರಮುಖ ಸ್ಥಳಗಳಲ್ಲಿ ಪ್ರಚಾರ ಮಾಡಿದ್ದೇನೆ ಎಂದರು.

ರೈತರು ಸೇರಿದಂತೆ ಸಾರ್ವಜನಿಕರು ಮಹಾ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಮುಂಬೈ ಹಾಗೂ ಮಹಾರಾಷ್ಟ್ರದಲ್ಲಿ 2, 200 ಉದ್ಯಮಗಳು ಮುಚ್ಚಿ ಹೋಗಿವೆ. ಎನ್‌ಸಿಪಿ- ಕಾಂಗ್ರೆಸ್, ಸಿಪಿಎಂ ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸುತ್ತಿದ್ದೇವೆ. ಈ ಬಾರಿ ನಮ್ಮ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನೇಕ ಉದ್ಯಮಪತಿಗಳು ಚಾನೆಲ್ ನಡೆಸುತ್ತಿದ್ದಾರೆ. ಕೆಲವು ಮಾಧ್ಯಮಗಳನ್ನು ಪರೋಕ್ಷವಾಗಿ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಹೀಗಾಗಿ ಅವರಿಗೆ ಬೇಕಾದ ಹಾಗೆ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ ಎಂದು ಅವರು ಮಾಧ್ಯಮ ಸಮೀಕ್ಷೆಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಿಗೆ ಬಾಲಕೋಟ್ ವಾಯುದಾಳಿ ಸಹಾಯ ಮಾಡಿತ್ತು. ಆದರೆ ಈ ಬಾರಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ರದ್ದು ಬಿಜೆಪಿಗೆ ಉಲ್ಟಾ ಹೊಡೆಯಲಿದೆ. ಹೀಗಾಗಿ ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ ಎಂದರು.

ಮಹದಾಯಿ ವಿಚಾರದ ಬಗ್ಗೆ ನಾವು ಹಿಂದೆ ಅಧಿಕಾರದಲ್ಲಿದ್ದಾಗಲೂ ಚರ್ಚೆ ಮಾಡಿದ್ದೇವೆ. ಗೋವಾಗೆ ಬಹಳಷ್ಟು ನೀರು ಹರಿದುಹೋಗುತ್ತದೆ. 8 ಟಿಎಂಸಿ ನೀರು ಕೇಳಿದ್ದೇವೆ. ಗೋವಾದವರು ಗಮನ ಹರಿಸುತ್ತಿಲ್ಲ. ಮಹದಾಯಿ ಇಡೀ ರಾಜ್ಯದ ಸಮಸ್ಯೆ. ಎಲ್ಲರೂ ಪಕ್ಷಾತೀತವಾಗಿ ಸೇರಿ ಇದನ್ನು ಬಗೆಹರಿಸಬೇಕು. ರಾಜ್ಯಪಾಲರು ಪ್ರತಿಭಟನಾ ನಿರತರನ್ನು ಭೇಟಿಯಾಗಬೇಕು ಎಂದರು.

ರಾಜ್ಯದಿಂದ ಮಹಾರಾಷ್ಟ್ರಕ್ಕೆ ನೀರು ಬಿಡುವ ವಿಚಾರ ಕುರಿತು ಚುನಾವಣೆಯ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com