ಚಾಮುಂಡೇಶ್ವರಿಯಲ್ಲಿ ಸೋಲುತ್ತೇನೆ ಎಂದು ಗೊತ್ತಿದ್ದರೂ ಜೊತೆಗಿದ್ದವರು ಸುಳ್ಳು ಹೇಳಿದರು: ಸಿದ್ದರಾಮಯ್ಯ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಸೋಲುತ್ತೇನೆ ಎಂದು ಗೊತ್ತಿದ್ದರೂ ನನ್ನ ಸುತ್ತಮುತ್ತ ಇರುವವರು ನೀವು ಗೆದ್ದೇ ಗೆಲ್ಲುತ್ತೀರಾ ಎಂದು ಸುಳ್ಳು ಹೇಳಿದರು. ನನ್ನ ಜೊತೆಗಿದ್ದವರು ಯಾಕೆ ಆ ರೀತಿ ಸುಳ್ಳು ಹೇಳಿದರೂ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಲು ಕಾರಣವೇನು ಎಂಬುದನ್ನು ಬಿಚ್ಚಿಟ್ಟರು.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಸೋಲುತ್ತೇನೆ ಎಂದು ಗೊತ್ತಿದ್ದರೂ ನನ್ನ ಸುತ್ತಮುತ್ತ ಇರುವವರು ನೀವು ಗೆದ್ದೇ ಗೆಲ್ಲುತ್ತೀರಾ ಎಂದು ಸುಳ್ಳು ಹೇಳಿದರು. ನನ್ನ ಜೊತೆಗಿದ್ದವರು ಯಾಕೆ ಆ ರೀತಿ ಸುಳ್ಳು ಹೇಳಿದರೂ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಲು ಕಾರಣವೇನು ಎಂಬುದನ್ನು ಬಿಚ್ಚಿಟ್ಟರು.

ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರುಣಾ ಕ್ಷೇತ್ರ ಬಿಟ್ಟು ನನ್ನ ಹಳೆ ಕ್ಷೇತ್ರವಾದ ಚಾಮುಂಡೇಶ್ವರಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದೆ. ನನಗೆ, ನೀವೇ ಗೆಲ್ಲುತ್ತೀರಾ ಎಂದೇ ನನ್ನ ಜೊತೆಗಿದ್ದವರು ತಿಳಿಸಿದರು. 35 ಸಾವಿರ ಮತಗಳ ಅಂತರದಿಂದ ನಾನು ಸೋಲುತ್ತಿದ್ದರೂ, ನೀವು ಗೆಲುತ್ತೀರಾ ಎಂದರು. ಸುಮ್ಮನೆ ಗೆಲ್ಲುತ್ತೇವೆ ಎಂದರೆ ಆಗಲ್ಲ. ಅದಕ್ಕೆ ತಕ್ಕನಂತೆ ಕೆಲಸ ಮಾಡಬೇಕು. ಚುನಾವಣೆಯಲ್ಲಿ ಕೆಳಹಂತದವರೆಗೂ ಇಳಿದು ಕೆಲಸ ಮಾಡಿದರೆ ಮಾತ್ರ ಗೆಲುವು ಸಾಧ್ಯ ಎಂದು ತಮ್ಮ ಸೋಲಿನ ಕಾರಣವನ್ನು ಸಿದ್ದರಾಮಯ್ಯವಿಶ್ಲೇಷಿಸಿದರು.

ಚುನಾವಣೆಯಲ್ಲಿ ಬರೀ ಹಣದಿಂದ ಗೆಲ್ಲಲು ಸಾಧ್ಯವಿಲ್ಲ. 1983ರಲ್ಲಿ ನನ್ನ‌ ಬಳಿ ಠೇವಣಿ ಕಟ್ಟಲು ಹಣ ಇರಲಿಲ್ಲ. ಆಗ ಜನರೇ ದುಡ್ಡು ಕೊಟ್ಟು 63 ಸಾವಿರ ಹಣ ನೀಡಿ, ನನ್ನನ್ನು ಗೆಲ್ಲಿಸಿದರು. ಚುನಾವಣೆಯಲ್ಲಿ ಕೇವಲ ದುಡ್ಡು ಕೆಲಸ ಮಾಡುವುದಿಲ್ಲ ಎಂಬುದಕ್ಕೆ ಮಂಡ್ಯ ಚುನಾವಣೆ ಉದಾಹರಣೆ. ಮಂಡ್ಯದಲ್ಲಿ ಚುನಾವಣೆಗೆ ಸ್ಪರ್ಧಿಸಿದ ಸುಮಲತಾ ಏನು ದುಡ್ಡು ಖರ್ಚು ಮಾಡಿದರು? ಆದರೂ ಅವರು ಗೆದ್ದರು. ಇದರಿಂದಲೇ ಅರ್ಥವಾಗುತ್ತದೆ ಜನರು ದುಡ್ಡಿಗೆ ಬೆಲೆ ಕೊಡುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದರು.

ಬಳಿಕ ನಗರದಲ್ಲಿಂದು ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಪಕ್ಷದ ವಿರುದ್ದ ನಡೆಯುತ್ತಿರುವ ಅಪಪ್ರಚಾರಗಳನ್ನು ಕಾರ್ಯಕರ್ತರು ತಡೆಯಬೇಕು. ಹಾಗ ಮಾತ್ರ ಉಪ ಚುನಾವಣೆಯಲ್ಲಿ ನಾವು ಗೆಲ್ಲಲು ಸಾಧ್ಯ. ಉಪ ಚುನಾವಣೆಯಲ್ಲಿ ನನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ. ಹೀಗಾಗಿ ನಾಯಕರ ಹಾಗೂ ಕಾರ್ಯಕರ್ತರ ಸಹಕಾರಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದರು.

ನನ್ನ ಮೇಲೆ ಮತ್ತೆ ವಿಶ್ವಾಸ ಇಟ್ಟು ವಿಪಕ್ಷ ನಾಯಕನನ್ನಾಗಿ ಮಾಡಿದ್ದಾರೆ. ಇದಕ್ಕೆ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರಿಗೆ ಅಭಾರಿಯಾಗಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ರಾಯಭಾರಿಗಳು. ನಾನು ಜಂಬಕೋಸ್ಕರ ಹೇಳುತ್ತಿಲ್ಲ. ನೂರಕ್ಕೆ ನೂರು ಭರವಸೆ ಈಡೇರಿಸಿದ ಸರ್ಕಾರ ನಮ್ಮದು. ಆದರು 2018 ಚುನಾ ವಣೆಯಲ್ಲಿ ನಾವು ಸೋತೆವು. ಪ್ರಜಾಪ್ರಭುತ್ವ ವಿಪರ್ಯಾಸವೆಂದರೆ ಇದೆ. ನಮಗೆ ಜನ ಹೆಚ್ಚು ಮತ ಹಾಕಿದರು. ಆದರೆ ಸೀಟು ಕಡಿಮೆ ಆಯಿತು. ಬಿಜೆಪಿಗೆ ಸೀಟು ಜಾಸ್ತಿ ಬಂದು ಮತ ಕಡಿಮೆ ಬಂದವು. ಹೈಕಮಾಂಡ್ ತೀರ್ಮಾನಕ್ಕೆ ನಾವು ತಲೆ ಬಾಗಿ ಒಪ್ಪಿಕೊಂಡು ಮೈತ್ರಿ ಸರ್ಕಾರ ಮಾಡಿದೆವು. ಆದರೆ ಶಾಸಕರ ಅಸಮಾಧಾನದಿಂದ ಸರ್ಕಾರ ಬಿದ್ದು ಹೋಯಿತು ಎಂದರು.

ಆಪರೇಷನ್ ಕಮಲ ರೋಗವನ್ನು ಹುಟ್ಟುಹಾಕಿದ್ದೆ ಬಿಜೆಪಿ. 2008ರಲ್ಲಿ 8 ಜನ ಶಾಸಕರುಗಳು ಕೈಯಲ್ಲಿ ರಾಜೀನಾಮೆ ಕೊಡಿಸಿದ್ದರು. 2019ರಲ್ಲಿ 17 ಜನ ಶಾಸಕರ ಗಳ ಕೈಯಲ್ಲಿ ರಾಜೀನಾಮೆ ಕೊಡಿಸಿದರು. ಕೊನೆಗು ಹಿಂಬಾಗಿಲಿನಿಂದ ಅಧಿಕಾರಕ್ಕೆ ಏರಿದರು. ಈಗ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ಎದುರಿಸಬೇಕಾಗಿದೆ. ಹುಣಸೂರಿನಲ್ಲಿ ಉಪಚುನಾವಣೆ ನಡೆಯಲಿದ್ದು, ಅಲ್ಲಿಯ ನಮ್ಮ ಅಭ್ಯರ್ಥಿ ಮಂಜುನಾಥ್ ಇರುತ್ತಾರೆ. ಈ ಬಾರಿ ಉಪಚುನಾವಣೆಯಲ್ಲಿ ಮಂಜುನಾಥ್ ಗೆಲ್ಲುತ್ತಾರೆ. 15 ಕ್ಷೇತ್ರಗಳಲ್ಲಿಯೂ ನಮ್ಮ ಅಭ್ಯರ್ಥಿಗಳು ಗೆದ್ದರೂ ಆಶ್ಚರ್ಯ ಇಲ್ಲ. ಬಹುತೇಕ ಕ್ಷೇತ್ರ ಕಾಂಗ್ರೆಸ್ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

2006ರಲ್ಲಿ ನಡೆದ ಚಾಮುಂಡೇಶ್ವರಿ ಉಪಚುನಾವಣೆ ಫಲಿತಾಂಶದಂತೆ 2019ರ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಬಿಜೆಪಿ ದುರಾಡಳಿತವನ್ನು ಮನೆ ಮನೆಗೆ ತಲುಪಿಸಬೇಕು. 2018ರಲ್ಲಿ ನಾವು ಸರ್ಕಾರದ ವೈಫಲ್ಯದಿಂದ ಸೋಲಲಿಲ್ಲ. ಬಿಜೆಪಿಯವರ ಅಪಪ್ರಚಾರದಿಂದ ಸೋತೆವು. ಒಂದೆ ಸುಳ್ಳನ್ನು ಬಿಜೆಪಿಯವರು ಪದೆ ಪದೆ ಹೇಳಿ ನಂಬಿಸುತ್ತಾರೆ. ಈ ಕೆಲಸ ಹಿಟ್ಲರ್ ಮಾಡುತ್ತಿದ್ದರು. ಈಗ ಇದನ್ನ ಬಿಜೆಪಿಯವರು ಮಾಡುತ್ತಿದ್ದಾರೆ. ಬಿಜೆಪಿ ಅವರಿಗೂ ಹಿಟ್ಲರ್​ಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಅವರು ಆರೋಪಿಸಿದರು.

ಇದೇ ವೇಳೆ ವೀರ ಸಾವರ್ಕರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ, ಹಿಂದುತ್ವ ಪದ ಬಳಸಿದ್ದೇ ಸಾವರ್ಕರ್. ಅವರು ಗಾಂಧಿ ಕೊಂದ ಪ್ರಕರಣದ ಆರೋಪಿ ಅವರು. ಗಾಂಧಿ ಹಂತಕನಿಗೆ ಭಾರತ ರತ್ನ ನೀಡುವ ಮೊದಲು ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಿ ಎಂದರು.

ಗಾಂಧಿ ಕೊಲೆ ಆರೋಪಿಗೆ ಭಾರತ ರತ್ನ ಬೇಡ ಎಂದು ನಾನು ಹೇಳಿದ್ದೆ. ಅದಕ್ಕೆ ನನಗೆ ಇತಿಹಾಸವೇ ಗೊತ್ತಿಲ್ಲ ಎಂದು ಬಿಜೆಪಿಯವರು ಮಾತನಾಡುತ್ತಾರೆ. ಆ ಪಕ್ಷದ ರಾಜ್ಯಾಧ್ಯಕ್ಷ ಕಟೀಲ್​ಗೆ ಕರ್ನಾಟಕವೇ ಗೊತ್ತಿಲ್ಲ. ರಾಜ್ಯದಲ್ಲಿ 36 ಜಿಲ್ಲೆಗಳಿವೆ ಎಂದು ಬಾಲಿಷ ಹೇಳಿಕೆ ಕೊಡುತ್ತಾರೆ. ಇಂಥವರು ನಮಗೆ ಇತಿಹಾಸದ ಪಾಠ ಹೇಳಲು ಬರುತ್ತಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com