ಬಾದಾಮಿ: ಪ್ರವಾಹದ ಮನೆಯಲ್ಲಿ ಸಿದ್ದು ಸನ್ಮಾನಕ್ಕೆ ಭರ್ಜರಿ ಸಿದ್ಧತೆ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಬಾದಾಮಿ ಕ್ಷೇತ್ರದಲ್ಲಿ ಹರಿಯುವ ಮಲಪ್ರಭಾ ನದಿಯಲ್ಲಿ ಪ್ರವಾಹದ ತೀವ್ರತೆ ಹೆಚ್ಚಾಗಿ ನದಿ ದಂಡೆಯ ಮೇಲಿನ ಗ್ರಾಮಗಳಿಗೆ ನುಗ್ಗುತ್ತಿದ್ದರೆ ಇನ್ನೊಂದು ಕಡೆ ಸಿದ್ದರಾಮಯ್ಯ ಅಭಿಮಾನಿಗಳಿಂದ ಅಭಿನಂದನಾ ಸಮಾರಂಭಕ್ಕೆ ಭರ್ಜರಿ ಸಿದ್ದತೆ ನಡೆದಿದೆ.
ಬಾದಾಮಿ
ಬಾದಾಮಿ

ಬಾಗಲಕೋಟೆ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಬಾದಾಮಿ ಕ್ಷೇತ್ರದಲ್ಲಿ ಹರಿಯುವ ಮಲಪ್ರಭಾ ನದಿಯಲ್ಲಿ ಪ್ರವಾಹದ ತೀವ್ರತೆ ಹೆಚ್ಚಾಗಿ ನದಿ ದಂಡೆಯ ಮೇಲಿನ ಗ್ರಾಮಗಳಿಗೆ ನುಗ್ಗುತ್ತಿದ್ದರೆ ಇನ್ನೊಂದು ಕಡೆ ಸಿದ್ದರಾಮಯ್ಯ ಅಭಿಮಾನಿಗಳಿಂದ ಅಭಿನಂದನಾ ಸಮಾರಂಭಕ್ಕೆ ಭರ್ಜರಿ ಸಿದ್ದತೆ ನಡೆದಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದೇನೋ ಖುಷಿಯ ಸಂಗತಿ ನಿಜ. ಆದರೆ ಬಾದಾಮಿ ಕ್ಷೇತ್ರದ ಜನತೆ ಮಲಪ್ರಭ ನದಿಯಲ್ಲಿನ ಪ್ರವಾಹದಿಂದ ತತ್ತರಿಸುತ್ತಿರುವಾಗ ಸಿದ್ದು ಸನ್ಮಾನ ಎಷ್ಟು ಸೂಕ್ತ ಎನ್ನುವ ಪ್ರಶ್ನೆ ಬಾದಾಮಿ ಕ್ಷೇತ್ರದಾದ್ಯಂತ ಹರಿದಾಡುತ್ತಿದೆ.

ಸಿದ್ದರಾಮಯ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಅ.22 ರಂದು ಬಾದಾಮಿಯಲ್ಲಿ ಅದ್ಧೂರಿ ಅಭಿನಂದನೆ ಸಮಾರಂಭ ಏರ್ಪಡಿಸಿದ್ದಾರೆ. ಅಭಿನಂದನಾ ಸಮಾರಂಭದ ಬಗ್ಗೆ ಬಾದಾಮಿ ಕ್ಷೇತ್ರದಲ್ಲಿ ಅಪಸ್ವರ ಕೇಳಿ ಬರುತ್ತಿದೆ.

ಕ್ಷೇತ್ರವ್ಯಾಪ್ತಿಯಲ್ಲಿನ ಮಲಪ್ರಭಾ ನದಿಯಲ್ಲಿ ಉಂಟಾಗಿದ್ದ ಪ್ರವಾಹದಿಂದ ನದಿ ತೀರದ ಗ್ರಾಮಗಳ ಜನತೆ ಬದುಕು ಕೊಚ್ಚಿ ಹೋಗಿದೆ. ಅಪಾರ ಪ್ರಮಾಣದಲ್ಲಿ ಬೆಳೆದು ನಿಂತಿದ್ದ ಬೆಳೆ ನೀರು ಪಾಲಾಗಿದೆ. ಪ್ರವಾಹ ಪೀಡಿತ ಗ್ರಾಮಗಳಲ್ಲಿ ಕುಸಿದು ಬಿದ್ದಿರುವ ಮನೆಗಳನ್ನು ಕಟ್ಟಿಕೊಳ್ಳಲು ಆಗಿಲ್ಲ. ಅನೇಕ ಗ್ರಾಮಗಳಲ್ಲಿ ಇಂದಿಗೂ ಜನತೆ ಬೀದಿ ಬದಿಯಲ್ಲಿ ಬದುಕು ಸಾಗಿಸಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‍ಗಳ ನಿರ್ಮಾಣ ಕೂಡ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಪ್ರವಾಹ ಸಂತ್ರಸ್ತರು ಪರಿಹಾರಕ್ಕಾಗಿ ಸರ್ಕಾರದತ್ತ ಮುಖ ಮಾಡಿದ್ದಾರೆ. ಸರ್ಕಾರ ನೀಡುತ್ತಿರುವ ಪರಿಹಾರ ಕೂಡ ಸರಿಯಾಗಿ ತಲುಪುತ್ತಿಲ್ಲ.

ಹೀಗೆ ಕ್ಷೇತ್ರದ ಜನತೆ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾಗಲೇ ಮಲಪ್ರಭಾ ನದಿಯಲ್ಲಿ ಮತ್ತೆ ಪ್ರವಾಹ ಕಾಣಿಸಿಕೊಂಡಿದೆ. ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಭರ್ತಿಯಾಗಿರುವ ನವಿಲುತೀರ್ಥ ಜಲಾಶಯ ಮತ್ತು ಬೆಣ್ಣಿ ಹಳ್ಳದಿಂದ ಅಪಾರ ಪ್ರಮಾಣದ ನೀರು ನದಿಗೆ ಹರಿದು ಬರುತ್ತಿದೆ. ಈ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿದ್ದು, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲಾಡಳಿತ ನದಿ ತೀರದ ಗ್ರಾಮದ ಜನತೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿವೆ.

ಈಗಾಗಲೇ ಉಂಟಾಗಿದ್ದ ಪ್ರವಾಹದ ವೇಳೆ ಕ್ಷೇತ್ರದ ಶಾಸಕರೂ ಆಗಿರುವ ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಂದು ಪ್ರವಾಹ ಸಂತ್ರಸ್ತರಿಗೆ ಸಾಂತ್ವನ ಹೇಳುವ ಕೆಲಸ ಮಾಡಿರಲಿಲ್ಲ. ಆಗ ಸಿದ್ದರಾಮಯ್ಯ ಕ್ಷೇತ್ರದಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದ್ದರು. ಈಗ ಬಾದಾಮಿ ಕ್ಷೇತ್ರದಲ್ಲಿ ಹರಿಯುವ ಮಲಪ್ರಭಾ ನದಿಯಲ್ಲಿ ಮತ್ತೆ ಪ್ರವಾಹ ಭೀತಿ ಕಾಣಿಸಿಕೊಂಡಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದು, ಆತಂಕದ ಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. 

ಸಿದ್ದರಾಮಯ್ಯ ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿನ ಜನತೆ ಇಂತಹ ಸ್ಥಿತಿಯಲ್ಲಿರುವಾಗ ಅವರ ಬೆಂಬಲಿಗರು ಅದ್ಧೂರಿ ಅಭಿನಂದನಾ ಸಮಾರಂಭಕ್ಕೆ ಮುಂದಾಗಿರುವುದು ಎಷ್ಟು ಸೂಕ್ತ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿದ್ದು, ಅ.22 ರಂದು ಕ್ಷೇತ್ರಕ್ಕೆ ಆಗಮಿಸುವ ಸಿದ್ದರಾಮಯ್ಯ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅಭಿನಂದನೆ ಸ್ವೀಕಾರಿಸುತ್ತಾರೋ ಇಲ್ಲವೆ ಪ್ರವಾಹ ಭೀತಿಯಲ್ಲಿರುವ ನದಿ ತೀರದ ಜನತೆಯ ಬಳಿ ತೆರಳಿ ಧೈರ್ಯ ತುಂಬುವ ಕೆಲಸ ಮಾಡುತ್ತಾರೋ, ಕ್ಷೇತ್ರ ಪ್ರವಾಸವನ್ನೇ ರದ್ದುಗೊಳಿಸುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com