ರೇಷನ್ ಅಂಗಡೀಲೂ ಸಾರಾಯಿ ಕೊಡಿ ಎಂದದ್ದೇ ಸಿದ್ದರಾಮಯ್ಯ: ಅನಂತಕುಮಾರ್ ಹೆಗಡೆ

ಗಾಂಧೀಜಿ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರದ ಮಾಜಿ ಸಚಿವ, ಸಂಸದ ಅನಂತ ಕುಮಾರ ಹೆಗಡೆ, ಸಿದ್ದರಾಮಯ್ಯ ಕಾಲದ ಸಾರಾಯಿ ನೀತಿಯನ್ನು ಪ್ರಶ್ನಿಸಿದ್ದಾರೆ. 
ಅನಂತ ಕುಮಾರ ಹೆಗಡೆ
ಅನಂತ ಕುಮಾರ ಹೆಗಡೆ

ಕಾರವಾರ: ಗಾಂಧೀಜಿ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರದ ಮಾಜಿ ಸಚಿವ, ಸಂಸದ ಅನಂತ ಕುಮಾರ ಹೆಗಡೆ, ಸಿದ್ದರಾಮಯ್ಯ ಕಾಲದ ಸಾರಾಯಿ ನೀತಿಯನ್ನು ಪ್ರಶ್ನಿಸಿದ್ದಾರೆ. 

ಸಿದ್ದರಾಮಯ್ಯ ಅವರು ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾಗ ಹಣಕಾಸು ಮತ್ತು ಅಬಕಾರಿ ಇಲಾಖೆಯ ಜವಾಬ್ದಾರಿ ಹೊತ್ತಿದ್ದರು. ಆಗ ಸಿದ್ದರಾಮಯ್ಯ ಜಾರಿಗೆ ತಂದಿದ್ದ ಸರಾಯಿ ನೀತಿಯನ್ನು ಈಗ ಕೆದಕಿದ್ದಾರೆ.

ದಾಂಡೇಲಿಯಲ್ಲಿ ಆಯೋಜಿಸಿದ್ದ ಗಾಂಧಿ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ರೇಷನ್ ಅಂಗಡಿಯಲ್ಲೂ ಸಾರಾಯಿ ಕೊಡಿ ಎಂದಿದ್ದು ಸಿದ್ದರಾಮಯ್ಯ. ರಾಜ್ಯಕ್ಕೆ ಸಾರಾಯಿ ಭಾಗ್ಯ ಯೋಜನೆ ಕೊಟ್ಟಿದ್ದೇ ಅವರು' ಎಂದು ವ್ಯಂಗ್ಯ ಮಾಡಿದರು.

 ' ಈ ಅನಂತಕುಮಾರ್ ಹೆಗಡೆ ಬಾಯಿ ಬಿಟ್ಟ ಎಂದರೆ ಸಿದ್ದರಾಮಯ್ಯ, ಗುಂಡೂರಾವ್ ‌ಗೆ ನಿದ್ರೆ ಬರುವುದಿಲ್ಲ' ಎಂದು ವ್ಯಂಗ್ಯವಾಗಿ ಕುಟುಕಿದರು.  

ರಾಮರಾಜ್ಯ ಕಲ್ಪನೆಯನ್ನು ಕೊಟ್ಟಿದ್ದು ಬಿಜೆಪಿ, ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್ ಅಲ್ಲ. ಅದು ಮಹಾತ್ಮ ಗಾಂಧಿ. ಆದರೆ, ಕಾಂಗ್ರೆಸ್‌ನ ಅಜೆಂಡಾದಲ್ಲಿ ರಾಮರಾಜ್ಯ ಕಲ್ಪನೆಯೇ ಇಲ್ಲ. ರಾಮರಾಜ್ಯ ಕಲ್ಪನೆ ಇಟ್ಟುಕೊಂಡವರು ಬಿಜೆಪಿಯವರು. ಗಾಂಧಿ ಹೆಸರಿನಲ್ಲಿ ಪ್ರತಿನಿತ್ಯ ಅವರನ್ನು ಅವಹೇಳನ ಮಾಡಿದ್ದು, ಹತ್ಯೆ ಮಾಡಿದ್ದು ಕಾಂಗ್ರೆಸ್ ಪಾರ್ಟಿ. ಗಾಂಧಿ, ಅಂಬೇಡ್ಕರ್, ಸಾವರ್ಕರ್ ಹೀಗೆ ದೇಶಕ್ಕೆ ಒಳ್ಳೆಯದನ್ನು ಮಾಡಿದವರನ್ನು ಬದಿಗಿಡುವ ಕೆಲಸ ಮಾಡಿದ್ದೂ ಕಾಂಗ್ರೆಸ್' ಎಂದು ಟೀಕಿಸಿದರು.

'ಗಾಂಧಿಯವರು ನಾನೇಕೆ ಹಿಂದೂ ಎನ್ನುವ ಪುಸ್ತಕ ಬರೆದಿದ್ದಾರೆ, ಕಾಂಗ್ರೆಸ್ ನವರು ಅದನ್ನು ಓದಿದರೆ ಎಲ್ಲರೂ ಕಾಳಿ ನದಿಯಲ್ಲಿ ಸ್ನಾನ ಮಾಡಿ ಹೋಗುತ್ತಾರೆ. ಪುಸ್ತಕ ಓದಿದರೆ ಸಿದ್ದರಾಮಯ್ಯನ ತಲೆ ಬದಲಾಗುತ್ತದೆ ಅನ್ನುವ ವಿಶ್ವಾಸ ಖಂಡಿತ ನನಗಿಲ್ಲ. ಗಾಂಧೀಜಿಯ ಹೆಸರಿನಲ್ಲಿ ಸಮಾಜದ ತುಂಬಾ ಕೆಸರನ್ನು ಹರಡುವ ಕೆಲಸವನ್ನು ಕಾಂಗ್ರೆಸ್ ಮಾಡಿದ್ದಾರೆ. ಇದರ ಪರಿಣಾಮ ಈಗ ಕೆಸರು ಹಾಕಲೂ ಜಾಗ ಇಲ್ಲದೇ ಒಬ್ಬೊಬ್ಬರೇ ತಿಹಾರ್ ಜೈಲಿಗೆ ಹೋಗುತ್ತಿದ್ದಾರೆ' ಎಂದು ವ್ಯಂಗ್ಯ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com