ಕುಮಾರಸ್ವಾಮಿಗೆ ಸರ್ಟಿಫಿಕೇಟ್ ಕೊಡುವ ಯೋಗ್ಯತೆ ನನಗಿಲ್ಲ: ಹೊರಟ್ಟಿ

ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮೇಲ್ಮನೆ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ.
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ

ಬೆಂಗಳೂರು: ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮೇಲ್ಮನೆ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವವನ್ನು ಪ್ರಶ್ನೆ ಮಾಡುವಷ್ಟಾಗಲೀ, ಅವರ ಬಗ್ಗೆ ಸರ್ಟಿಫಿಕೇಟ್ ಕೊಡುವಷ್ಟಾಗಲೀ ತಾವು ದೊಡ್ಡವರು ಅಲ್ಲ ಎನ್ನುವ ಮೂಲಕ ಮೇಲ್ಮನೆ ಜೆಡಿಎಸ್ ಹಿರಿಯ ಸದಸ್ಯ ಹಾಗೂ ಮಾಜಿ ಸಚಿವ ಬಸವರಾಜ ಹೊರಟ್ಟಿ ಮತ್ತೊಮ್ಮೆ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ತಿವಿದಿದ್ದಾರೆ.

ಶಾಸಕರ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಹೊರಟ್ಟಿ, ಕುಮಾರಸ್ವಾಮಿಗೆ ಸರ್ಟಿಫಿಕೇಟ್ ಕೋಡುವ ಯೋಗ್ಯತೆ ತಮಗಿಲ್ಲ. ಅವರು ಎರಡು ಸಲ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ದೊಡ್ಡವರದಾವರ ಬಗ್ಗೆ ಮಾತಾನಾಡಲು ಆಗುವುದಿಲ್ಲ. ನಾವು ಕುಮಾರಸ್ವಾಮಿಯವರದ್ದಾಗಲೀ, ವರಿಷ್ಠ ಹೆಚ್.ಡಿ.ದೇವೇಗೌಡರ ನಾಯಕತ್ವದ ಬಗ್ಗೆ ಆಗಲೀ ಪ್ರಶ್ನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸಭಾಪತಿ ಸ್ಥಾನದಿಂದ ಕೆಳಗಿಳಿಸಿದಾಗ ಬಹಳ ನೋವಿನಿಂದ ಕಣ್ಣೀರು ಹಾಕಿ ಕೆಳಗೆ ಇಳಿಯಬೇಕಾಯಿತು. ಆಗ ಕರೆದು ಕುಮಾರಸ್ವಾಮಿ ಮಾತನಾಡಲಿಲ್ಲ. ಕುಮಾರಸ್ವಾಮಿ ಮೇಲೆ ನಮಗೆ ಗೌರವ ಇದೆ. ಆದರೆ ಅವರು ನಮ್ಮ ನೋವನ್ನು ಕೇಳುವ ಪ್ರಯತ್ನ ಮಾಡಲಿಲ್ಲ. ಕೆಲವು ದಿನಗಳ ಹಿಂದೆ ದೇವೇಗೌಡರು ನಮ್ಮನ್ನು ಕರೆದು ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ ಎಂದರು.

ಕೆಲವು ದಿನಗಳ ಹಿಂದೆ ಪದವೀಧರ ಮತ್ತು ಶಿಕ್ಷಣ ಕ್ಷೇತ್ರದ ಚುನಾವಣೆ ಸಂಬಂಧ ದೇವೇಗೌಡರ ನೇತೃತ್ವದಲ್ಲಿ ನಡೆದ ಸಭೆಗೆ ಬಸವರಾಜ ಹೊರಟ್ಟಿ ಸೇರಿದಂತೆ ಕೆಲ ಮೇಲ್ಮನೆ ಸದಸ್ಯರು ಗೈರಾಗುವ ಮೂಲಕ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಮಂಗಳವಾರ ಶಾಸಕರ ಭವನದಲ್ಲಿ ಮೇಲ್ಮನೆಯ ಕೆಲ ಸದಸ್ಯರ ಜೊತೆ ಬಸವರಾಜ ಹೊರಟ್ಟಿ ಪಕ್ಷದ ಸ್ಥಿತಿಗತಿ ಮತ್ತು ನಾಯಕರ ನಡವಳಿಕೆ ಕುರಿತು ವಿಧಾನ ಪರಿಷತ್ ಸದಸ್ಯರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ, ಆದರೂ ಯಾವುದೇ ಸಭೆ ನಡೆಸಿಲ್ಲ ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.

ತಮ್ಮೊಂದಿಗೆ ಐದಾರು ಮಂದಿ ಶಾಸಕರು ಮಾತ್ರ ಇದ್ದು, ಇನ್ನು ಕೆಲವರು ಬೇರೆ ಬೇರೆ ಕೆಲಸಗಳ ಮೇಲೆ ಹೊರ ಹೋಗಿದ್ದಾರೆ. ತಮ್ಮೊಂದಿಗಿರುವ ಯಾವ ಶಾಸಕರೂ ಪಕ್ಷ ಬಿಡುವ ಬಗ್ಗೆ ಮಾತನಾಡಿಲ್ಲ. ಎಲ್ಲಾ ಸದಸ್ಯರು ಬೆಂಗಳೂರಿಗೆ ಬಂದ  ಬಳಿಕ ಸಭೆ ನಡೆಸುತ್ತೇವೆ ಎಂದರು. ತಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಹೀಗಾಗಿ ಜೆಡಿಎಸ್ ತೊರೆಯುವ ಬಗ್ಗೆ ಚಿಂತನೆಯಿಲ್ಲ. ಬಿಜೆಪಿ, ಕಾಂಗ್ರೆಸ್ ಸೇರುವ ಬಗ್ಗೆಯೂ  ಚರ್ಚಿಸಿಲ್ಲ. ಒಂದು ವೇಳೆ ಮುಂದಿನ ದಿನಗಳಲ್ಲಿ ಪಕ್ಷ ತೊರೆಯುವ ಸಂದರ್ಭ ಎದುರಾದಲ್ಲಿ ನೇರ ಮಾರ್ಗದಲ್ಲಿಯೇ ಹೋಗುತ್ತೇವೆ ಎನ್ನುವ ಮೂಲಕ ಪಕ್ಷದ ನಾಯಕರಿಗೆ ಪರೋಕ್ಷ ಸಂದೇಶ ರವಾನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com