'ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಎಲ್ಲ ರೀತಿಯ ವಿಚಾರಣೆಗೂ ಸಹಕರಿಸುತ್ತೇನೆ- ಡಿಕೆಶಿ

ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ, ಕಾನೂನಿಗೆ ಗೌರವ ಕೊಟ್ಟು ವರ್ತಿಸಿದ್ದೇನೆ. ಯಾರಿಗೂ ಎಂದಿಗೂ ಮೋಸ ಮಾಡಿಲ್ಲ, ಕಾನೂನು ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಡಿಕೆಶಿವಕುಮಾರ್, ದಿನೇಶ್ ಗುಂಡೂರಾವ್
ಡಿಕೆಶಿವಕುಮಾರ್, ದಿನೇಶ್ ಗುಂಡೂರಾವ್

ಬೆಂಗಳೂರು: ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ, ಕಾನೂನಿಗೆ ಗೌರವ ಕೊಟ್ಟು ವರ್ತಿಸಿದ್ದೇನೆ. ಯಾರಿಗೂ ಎಂದಿಗೂ ಮೋಸ ಮಾಡಿಲ್ಲ, ಕಾನೂನು ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ  ಅಫಿಡವಿಟ್ ನಲ್ಲಿ  ನನ್ನ ಆಸ್ತಿಪಾಸ್ತಿ ಬಗ್ಗೆ ಉಲ್ಲೇಖವಿದೆ. ಚಿಕ್ಕ ವಯಸ್ಸಿನಲ್ಲಿ ವಿದ್ಯಾರ್ಥಿ ನಾಯಕನಾಗಿದ್ದೆ, ರೈತನಾಗಿ ಹುಟ್ಟಿ, ಉದ್ಯಮಿಯಾಗಿ ಬೆಳೆದೆ ,ಯಾರಿಗೂ ವಂಚನೆ ಮಾಡಿಲ್ಲ ನಾನು, ತಮ್ಮ ಕುಟುಂಬ ತಪ್ಪು ಮಾಡಿದ್ದರೆ ನೆಲದ ಕಾನೂನು, ದೇವರು ಶಿಕ್ಷೆ ನೀಡಲಿ ಎಂದರು. 

ತಿಹಾರ್ ಜೈಲಿನಲ್ಲಿದ್ದಾಗ  ಕಾಂಗ್ರೆಸ್ , ಜೆಡಿಎಸ್ ಅಲ್ಲದೇ ಬಿಜೆಪಿ ನಾಯಕರು ಕೂಡಾ ಸಹಕಾರ ನೀಡಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಹೋರಾಟ ಮಾಡಿದ್ದಾರೆ. ಸೋನಿಯಾ ಗಾಂಧಿ ಜೈಲಿನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅಂತಹವರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅಭಿಮಾನ ಅಳೆಯಲು ಸಾಧ್ಯವಿಲ್ಲ, ಋುಣ ಯಾವ ರೀತಿಯಲ್ಲಿ ತೀರಿಸಬೇಕೆಂಬುದು ಚಿಂತನೆಯಾಗಿದೆ ಎಂದು ಹೇಳಿದರು.

ಇಡಿಯಿಂದ ನಮ್ಮ ಕುಟುಂಬಕ್ಕೆ ಕಿರುಕುಳ ನೀಡಲಾಗಿದೆ. ಸ್ಕೋಲ್ ಗೆ ಹೋದ ಮಕ್ಕಳಿಗೆ ನಿಮ್ಮಪ್ಪ ಜೈಲಿಗೆ ಹೋದ ಅಂದ್ರೆ ನೋವಾಗುವುದಿಲ್ಲವೇ, ವಯಸ್ಸಾದ ತಾಯಿ ದೆಹಲಿಗೆ ಬಂದು ವಿಚಾರಣೆ ಎದುರಿಸುವಂತೆ ಸಮನ್ಸ್ ನೀಡಿದಾಗ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ.. ನಮ್ಮ ಕುಟುಂಬ ಕಾನೂನಿಗೆ ವಿರುದ್ಧವಾಗಿ ನಡೆದಿದ್ದರೆ ಶಿಕ್ಷೆ ನೀಡಲಿ. ಆದರೆ, ಕಿರುಕುಳ ನೀಡಬಾರದು, ಇಡಿ, ಸಿಬಿಐ ಎಲ್ಲ ರೀತಿಯ ವಿಚಾರಣೆಗೂ ಸಹಕರಿಸುತ್ತೇನೆ.ನ್ಯಾಯಾಲಯದಿಂದ ಅನ್ಯಾಯದ ತೀರ್ಪು ಬರಬಾರದು ಎಂದು  ಡಿಕೆಶಿವಕುಮಾರ್ ಹೇಳಿದರು. 

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, 2018ರ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿಯೇ  ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗಿತ್ತು. ಡಿಕೆ ಶಿವಕುಮಾರ್ ಅವರನ್ನು ರಾಜಕೀಯ ಪ್ರೇರಿತದಿಂದ ಬಂಧಿಸಲಾಗಿತ್ತು. ಅವರನ್ನು ಜನ ಇಷ್ಟು ದೊಡ್ಡ ಮಟ್ಟದಲ್ಲಿ ಸ್ವಾಗತಿಸುವ ಮೂಲಕ ಬಿಜೆಪಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ಕೆ. ಜೆ. ಜಾರ್ಜ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com