ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಲು ಹೈಕಮಾಂಡ್ ಸಂಪೂರ್ಣ ಸ್ವಾತಂತ್ರ್ಯನೀಡಿದೆ: ಬಿ.ಎಸ್.ಯಡಿಯೂರಪ್ಪ

 ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಲು ಪಕ್ಷದ ಹೈಕಮಾಂಡ್ ನನಗೆ ಆಡಳಿತ ನಡೆಸಲು ಸಂಪೂರ್ಣವಾಗಿ ಸ್ವಾತಂತ್ರ್ಯನೀಡಿದ್ದು, ಮುಂದಿನ ಮೂರುವರೆ ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ಸಿಎಂ ಯಡಿಯೂರಪ್ಪ
ಪ್ರೆಸ್ ಕ್ಲಬ್ ನಲ್ಲಿ ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಲು ಪಕ್ಷದ ಹೈಕಮಾಂಡ್ ನನಗೆ ಆಡಳಿತ ನಡೆಸಲು ಸಂಪೂರ್ಣವಾಗಿ ಸ್ವಾತಂತ್ರ್ಯನೀಡಿದ್ದು, ಮುಂದಿನ ಮೂರುವರೆ ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ೧೦೦ ದಿನಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಆಯೋಜಿಸಲಾದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವು ಶತ ದಿನೋತ್ಸವದ ಸಂಭ್ರಮದಲ್ಲಿದೆ. ಪಕ್ಷದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಹೈಕಮಾಂಡ್ ಅಧಿಕಾರ ನಡೆಸಲು ಸಂಪೂರ್ಣ ಸಹಕಾರ ನೀಡಲಿದೆ. ಹೈಕಮಾಂಡ್ ತಮಗೆ ಕಡಿವಾಣ ಹಾಕಿದ್ದು, ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬುದು ಊಹಾಪೋಹಾ ಸುದ್ದಿ. ಕೇಂದ್ರದ ನಾಯಕರು ಸಂಪೂರ್ಣ ಸ್ವಾತಂತ್ರ್ಯಮತ್ತು ಸಹಕಾರ ನೀಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಸಚಿವ ಸಂಪುಟ ರಚನೆ ಸೇರಿದಂತೆ ಯಾವುದೇ ವಿಚಾರದಲ್ಲಿ ಯೂ ತಮಗೆ ಹೈ ಕಮಾಂಡ್ ಅಡ್ಡಿಪಡಿಸಿಲ್ಲ.ಸರ್ಕಾರ ಕೈಗೊಂಡಿರುವ ತೀರ್ಮಾನಗಳ ಬಗ್ಗೆಯೂ ಕೇಂದ್ರದ ನಾಯಕರು ಚಕಾರ ಎತ್ತಿಲ್ಲ. ನನ್ನ ಮೇಲೆ ಸಂಪೂರ್ಣ ವಿಶ್ವಾಸ ಇರುವುದರಿಂದಲೇ ಮುಖ್ಯಮಂತ್ರಿ ಮಾಡಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತೇನೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದರು.

ಲಿಂಗಾಯಿತರು ಯಡಿಯೂರಪ್ಪ ಜತೆ ಇಲ್ಲ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಜತೆ ಎಲ್ಲಾ ವರ್ಗದವರು ಇದ್ದಾರೆ. ಅವರ ಹೇಳಿಕೆ ಸರಿಯಿಲ್ಲ.ಪರಿಶಿಷ್ಟ ಜಾತಿ ಮತ್ತು ವರ್ಗ,ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲರೂ ಜತೆಗಿದ್ದು,ರಾಜ್ಯದ ಕಲ್ಯಾಣಕ್ಕಾಗಿ ಸರ್ಕಾರ ಹಾಗೂ ತಾವು ಶ್ರಮಿಸಲಾಗುತ್ತಿದ್ದೇವೆ. ಮುಂದಿನ ಉಪಚುನಾವಣೆಯಲ್ಲಿ ೧೫ ಕ್ಷೇತ್ರಗಳಲ್ಲಿ ಗೆಲ್ಲಲು ಗಮನ ಹರಿಸಿದ್ದು, ೧೩ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೆಲವು ಅಧಿಕಾರಿಗಳ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ತಿಂಗಳಲ್ಲಿ ಸಾಕಾಷ್ಟು ಅಧಿಕಾರಿಗಳ ವರ್ಗಾವಣೆಯಾಗಿದೆ.ಇದರಲ್ಲಿಯೂ ಕೇಂದ್ರ ನಾಯಕರು ಹಸ್ತಕ್ಷೇಪ ಮಾಡಿಲ್ಲ. ಆಡಳಿತಾತ್ಮಕ ದೃಷ್ಟಿಯಿಂದ ಕೆಲವು ಅಧಿಕಾರಿಗಳನ್ನು ಬದಲಿಸಲಾಗಿದೆ. ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು, ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಂದೆಡೆ ನೆರೆಯಿಂದಾಗಿರುವ ನಷ್ಟ. ಮತ್ತೊಂದೆಡೆ ಸಾಲಮನ್ನಾದ ಹೊರೆ ಇದ್ದು, ಎರಡನ್ನೂ ನಿಭಾಯಿಸಿಕೊಂಡು ಅಭಿವೃದ್ಧಿಯ ಕಡೆಗೆ ಗಮನ ಹರಿಸಲಾಗಿದೆ.ರಾಜ್ಯದಲ್ಲಿ ಮೂರು ಉಪಮುಖ್ಯಮಂತ್ರಿಗಳ ಸೃಷ್ಠಿ ಮಾಡಿರುವುದು ಕೇಂದ್ರ ನಾಯಕರ ತೀರ್ಮಾನವಾಗಿದೆ. ಇದರಲ್ಲಿ ಯಾವುದೇ ತಪ್ಪು ಇದೆ ಎಂದು ಅನಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ಬಿಜೆಪಿಯವರ ಜತೆ ಗುರುತಿಸಲ್ಪಟ್ಟವರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎನ್ನುವ ವಿಚಾರವು ಸರಿಯಲ್ಲ. ಸಮಿತಿಯಲ್ಲಿ ಪಾರದರ್ಶಕವಾಗಿ ಚರ್ಚಿಸಿ ಆಯ್ಕೆ ಮಾಡಲಾಗಿದೆ. ಒಂದೆರೆಡರ ಬಗ್ಗೆ ಆಕ್ಷೇಪ ಇದೆಯಾದರೂ ಎಲ್ಲವನ್ನು ಸಮಿತಿ ಸದಸ್ಯರು ಚರ್ಚಿಸಿ ನಿರ್ಣಯ ಕೈಗೊಂಡಿದ್ದಾರೆ. ಆಯ್ಕೆಯಾಗಿರುವ ೬೪ ಗಣ್ಯರ ಬಗ್ಗೆ ರಾಜ್ಯದ ಜನತೆಗೆ ಹೆಮ್ಮೆ ಇದೆ ಎಂದರು.

ಬೆಂಗಳೂರಿನಲ್ಲಿನ ಕಸದ ಸಮಸ್ಯೆ ಮತ್ತು ಗುಂಡಿಗಳ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಪ್ರಯತ್ನ ನಡೆಯುತ್ತಿದೆ. ದೇಶದ ನಾನಾ ಭಾಗದಿಂದ ಹಾಗೂ ವಿದೇಶಿಗರು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗೌರವ ಹೆಚ್ಚುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com