ಬರ-ಪ್ರವಾಹದಿಂದ ಜನ ತಲ್ಲಣ: ಶಾಸಕರ ಅಸಮಾಧಾನ; 'ತಣಿ'ಸಲು ಮಲೇಷಿಯಾವೇ ಬೇಕಾ ಕುಮಾರಣ್ಣ?

ರಾಜ್ಯದಲ್ಲೆ ಕೆಲವೆಡೆ ಬರ ಮತ್ತು ಹಲವೆಡೆ ಪ್ರವಾಹದಿಂದ ರಾಜ್ಯದ ಜನತೆ ತತ್ತರಿಸುತ್ತಿದ್ದಾರೆ, ಹೀಗಿರುವಾಗ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತಮ್ಮ ಶಾಸಕರ ಅಸಮಾಧಾನ ತಣಿಸಲು ಮಲೇಶಿಯಾಗೆ ಕರೆದು ಕೊಂಡು ಹೋಗುತ್ತಿದ್ದಾರೆ
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು:  ರಾಜ್ಯದಲ್ಲೆ ಕೆಲವೆಡೆ ಬರ ಮತ್ತು ಹಲವೆಡೆ ಪ್ರವಾಹದಿಂದ ರಾಜ್ಯದ ಜನತೆ ತತ್ತರಿಸುತ್ತಿದ್ದಾರೆ, ಹೀಗಿರುವಾಗ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತಮ್ಮ ಶಾಸಕರ ಅಸಮಾಧಾನ ತಣಿಸಲು ಮಲೇಷಿಯಾಗೆ ಕರೆದು ಕೊಂಡು ಹೋಗುತ್ತಿದ್ದಾರೆ. ಆದರೆ ರಾಜ್ಯದ ಜನರು ಸಮಸ್ಯೆಗಳಿಂದ ಬಳಲುತ್ತಿರುವಾಗ ವಿದೇಶ ಪ್ರವಾಸದ ಅವಶ್ಯಕತೆಯಿದೆಯೇ ಎಂಬ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.

ಎಲ್ಲಾ ಶಾಸಕರನ್ನು ಮೂರು ದಿನ ಒಟ್ಟಿಗೆ ಸ್ಥಳೀಯ ಪ್ರದೇಶಗಳಲ್ಲಿ ಹಿಡಿದಿಡಲು ಕಷ್ಟವಾಗುತ್ತದೆ. ಕೆಲವರು ಮನೆಗೆ ಹೋಗಬೇಕೆಂದು ಕಾರಣ ನೀಡುತ್ತಾರೆ, ಹೀಗಾಗಿ ಜೆಡಿಎಸ್ ಶಾಸಕರನ್ನು ಕರೆದುಕೊಂಡು ಮೂರು ದಿನಗಳ ಮಲೇಷಿಯಾ ಪ್ರವಾಸಕ್ಕೆ ತೆರಳುತ್ತಿದ್ದೇವೆ ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.

ಜೆಡಿಎಸ್ ಪಕ್ಷದ ಶಾಸಕರು, ಪರಿಷತ್ ಸದಸ್ಯರು ಹಾಗೂ ಪಕ್ಷದ ವರಿಷ್ಠರ ನಡುವೆ ಉಂಟಾಗಿರುವ ಅಸಮಾಧಾನವನ್ನು ಶಮನ ಮಾಡಲು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ವಿಶೇಷ ಪ್ಲಾನ್ ಮಾಡಿದ್ದಾರೆ.  ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಶಾಸಕರು ಹಾಗೂ ಪರಿಷತ್ ಸದಸ್ಯರು, ಮುಖಂಡರು ಮಲೇಷಿಯಾ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದಾರೆ . ಅಲ್ಲದೇ ಪ್ರವಾಸ ತೆರಳಲು ಬೇಕಾದ ಅಗತ್ಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

ನಾವು ದೂರದ ಲಂಡನ್ ಅಥವಾ ಅಮೆರಿಕಾಗೆ ಹೋಗುತ್ತಿಲ್ಲ, ನೆರೆರಾಷ್ಚ್ರ ಮಲೇಷಿಯಾಗೆ ಹೋಗುತ್ತಿದ್ದೇವೆ ಎಂದು ಜೆಡಿಎಸ್ ಶಾಸಕ ಶ್ರೀಕಂಠೇಗೌಡ ಹೇಳಿದ್ದಾರೆ, ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ಚರ್ಚಿಸಲು ನಮಗೆ ಸಮಯ ಸಿಗುವುದಿಲ್ಲ, ಹಿಗಾಗಿ ಹಲವು ವಿಷಯಗಳ ಬಗ್ಗೆ ಚರ್ಚಿಸಲು ನಾವು ಮಲೇಷಿಯಾಗೆ ತೆರಳುತ್ತಿದ್ದೇವೆ ಎಂದು ತಿಳಿಸಿದ್ದಾರೆ,

ನ.3 ರಿಂದ ನ.6ವರೆಗೂ ಜೆಡಿಎಸ್ ಮುಖಂಡರು ಮಲೇಷಿಯಾ ಪ್ರವಾಸಕ್ಕೆ ತೆರಳಿದ್ದು, ಪಕ್ಷದಲ್ಲಿ ಒಗ್ಗಟ್ಟು ಸಾಧಿಸುವ ಉದ್ದೇಶ ಈ ಪ್ರವಾಸ ಹಿಂದಿದೆ ಎನ್ನಲಾಗಿದೆ. ಪ್ರವಾಸ ವೇಳೆ ಪಕ್ಷದ ನಾಯಕರ ಸಮಸ್ಯೆಗಳು ಹಾಗೂ ಅವರ ಅಸಮಾಧಾನಕ್ಕೆ ಕಾರಣಗಳನ್ನು ತಿಳಿದು ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ವರಿಷ್ಠರು ನೀಡಲಿದ್ದಾರೆ.

ಸದ್ಯ ಎಚ್‍ಡಿಕೆಯವರ ಈ ನಿರ್ಧಾರಕ್ಕೆ ಕೆಲ ಅಪ್ತ ಶಾಸಕರು ಒಪ್ಪಿಗೆ ನೀಡಿದ್ದು, ಪಕ್ಷದ ನಾಯಕರ ಸಮಸ್ಯೆ ಕೇಳಲು ಈ ಪ್ರವಾಸ ಶಾಸಕರಿಗೆ ಹೊಸ ಅನುಭವ ಹಾಗೂ ಹೊಸತನ ನೀಡಲಿದೆ ಎಂಬುವುದು ಅವರ ಪ್ಲಾನ್ ಆಗಿದೆ. ಇಡಿ ಪ್ರವಾಸದ ಪೂರ್ಣ ವೆಚ್ಚವನ್ನು ಎಚ್ ಡಿ ಕುಮಾರಸ್ವಾಮಿ ಭರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೂರ್ವ ನಿರ್ಧರಿತ ಕಾರ್ಯಕ್ರಮಗಳಿಂದಾಗಿ ತಾವು ಪ್ರವಾಸ ಹೋಗುತ್ತಿಲ್ಲವೆಂದು ಶಾಸಕ ಬಸವರಾಜ ಹೊರಟ್ಟಿ ಹೇಳಿದ್ದಾರೆ,  ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್,ಕೆ ಕುಮಾರಸ್ವಾಮಿ, ಪುಟ್ಟರಾಜು, ಚೌಡರೆಡ್ಡಿ ಸೇರಿದಂತೆ ಹಲವರು ತೆರಳಲಿದ್ದಾರೆ. ಜೆಡಿಎಸ್ ನ 34 ಶಾಸಕರು ಹಾಗೂ 16 ವಿಧಾನ ಪರಿಷತ್ ಸದಸ್ಯರಿದ್ದು ಇವರಲ್ಲಿ ಹಲವರು ಕುಮಾರ ಸ್ವಾಮಿ ವಿರುದ್ಧ ಬಂಡಾಯದ ಕಹಳೆ ಊದಿದ್ದಾರೆ, ಮೂವರು ಶಾಸಕರು ರಾಜಿನಾಮೆ ನೀಡಿದ್ದಾರೆ. ಹೀಗಿರುವಾಗ ಎಚ್‍ಡಿಕೆಯವರ ಈ ಮಲೇಷಿಯಾ ಪ್ರವಾಸ ಪ್ಲಾನ್ ಯಾವ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com