ಮಧ್ಯಂತರ ಚುನಾವಣೆ ಅನಿವಾರ್ಯ: ಸಿದ್ದರಾಮಯ್ಯ

ವರ್ಷದೊಳಗಾಗಿ ರಾಜ್ಯದಲ್ಲಿ ಬಿಜೆಪಿ ತನ್ನ ಅಧಿಕಾರ ಕಳೆದುಕೊಳ್ಳಲಿದೆ, ಮಧ್ಯಂತರ ಚುನಾವಣೆ ಅನಿವಾರ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.  
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ವರ್ಷದೊಳಗಾಗಿ ರಾಜ್ಯದಲ್ಲಿ ಬಿಜೆಪಿ ತನ್ನ ಅಧಿಕಾರ ಕಳೆದುಕೊಳ್ಳಲಿದೆ, ಮಧ್ಯಂತರ ಚುನಾವಣೆ ಅನಿವಾರ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 
ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಸಿದ್ದರಾಮಯ್ಯ ಅವರು, ರಾಜ್ಯ ರಾಜಕೀಯ ಪರಿಸ್ಥಿತಿ ಕುರಿತು ಮಾತನಾಡಿದ್ದಾರೆ. 


ದೇವೇಗೌಡ ಹಾಗೂ ನಿಮ್ಮ ನಡುವಿನ ವೈಮನಸ್ಸು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮುರಿದು ಬೀಳಲು ಕಾರಣವಾಯಿತೇ? ಮೈತ್ರಿ ಮುಂದುವರೆಸುವಂತೆ ಕಾಂಗ್ರೆಸ್ ಹೈ ಕಮಾಂಡ್ ಸೂಚಿಸಿದರೆ ಮುಂದೇನಾಗುತ್ತದೆ? 
ಮೈತ್ರಿ ಕುರಿತು ಹೈ ಕಮಾಂಡ್ ನಿರ್ಧಾರ ಕೈಗೊಂಡಿತ್ತು. ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ನಾವು ಮಾತುಕತೆ ನಡೆಸುತ್ತಿದ್ದೇವೆ. ಈ ಮೂಲಕ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದೇವೆ. ಮೈತ್ರಿ ಪಕ್ಷ ತನ್ನ ಉದ್ದೇಶದಂತೆ ನಡೆದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಮತಗಳು ವರ್ಗಾವಣೆಯಾಗದ ಕಾರಣ ನಮ್ಮ ನಿಲುವುಗಳನ್ನು ಹೈ ಕಮಾಂಡ್ ಮುಂದೆ ಪ್ರಸ್ತುತ ಪಡಿಸುತ್ತೇವೆ. 


ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಮುನ್ಸೂಚನೆ ನೀಡುತ್ತಿದ್ದೀರಿ. ಇದಕ್ಕೆ ಕಾರಣ? 
ಬಿಎಸ್. ಯಡಿಯೂರಪ್ಪ ಸರ್ಕಾರ ಹೆಚ್ಚಿನ ಕಾಲ ಸರ್ಕಾರ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಮಧ್ಯಂತರ ಚುನಾವಣೆ ನಡೆಯುವುದು ಖಚಿತ ಎಂಬ ವಿಶ್ವಾಸ ನನಗಿದೆ. 105 ಶಾಸಕರೊಂದಿಗೆ ಬಿಜೆಪಿ ಹಿಂಬಾಗಿಲಿನಿಂದ ಬಂದಿದೆ. ಈಗಲೂ ಅವರಲ್ಲಿ ಬಹುಮತವಿಲ್ಲ. ಬಹುಮತಕ್ಕೆ ನಮಗೆ ಕೇವಲ 8 ಶಾಸಕರ ಅಗತ್ಯವಿದೆ. 17 ಶಾಸಕರ ಅಮಾನತು ಅರ್ಜಿ ಕುರಿತ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿದೆ. ಸುಪ್ರೀಂಕೋರ್ಟ್ ಆದೇಶದ ಬಳಿಕ ಪರಿಸ್ಥಿತಿ ಹದಗೆಡಲಿದೆ. ಬಿಜೆಪಿ ಹಾಗೂ ಹಲವು ಹಿರಿಯ ನಾಯಕರಲ್ಲಿ ಈಗಾಗಲೇ ಮನಸ್ತಾಪಗಳು ಎದುರಾಗಿವೆ. ಪರಿಸ್ಥಿತಿ ಹೀಗಿರುವಾಗ ಯಡಿಯೂರಪ್ಪ ಅವರು ಯಾವ ರೀತಿಯಲ್ಲಿ ಸರ್ಕಾರ ನಡೆಸುತ್ತಾರೆ? 


ಉಪ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆಯೇ? 
17 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಈಗಾಗಲೇ ನಾವು ಸಿದ್ಧತೆ ನಡೆಸುತ್ತಿದ್ದೇವೆ. ಸುಪ್ರೀಂಕೋರ್ಟ್ ಆದೇಶ ನೀಡುತ್ತಿದ್ದಂತೆಯೇ ಈ ಸಿದ್ಧತೆ ಮತ್ತಷ್ಟು ಚುರುಕುಗೊಳ್ಳಲಿದೆ. ಇದಲ್ಲದೆ, ಮಧ್ಯಂತರ ಚುನಾವಣೆಗೂ ನಾವು ಸಿದ್ಧತೆ ನಡೆಸುತ್ತಿದ್ದೇವೆ. 


ಪ್ರವಾಹ ಹಾಗೂ ಬರ ಪರಿಸ್ಥಿತಿ ಕುರಿತು ವಿಶೇಷ ಅಧಿವೇಶನಕ್ಕೆ ಆಗ್ರಹಿಸುತ್ತೀರಾ? 
ಈಗಾಗಲೇ ಸಿಎಂ ಯಡಿಯೂರಪ್ಪ ಅವರ ಬಳಿ ಪ್ರವಾಹ ಹಾಗೂ ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಸಲು 1 ವಾರಗಳ ಕಾಲ ವಿಶೇಷ ಅಧಿವೇಶನ ನಡೆಸುವಂತೆ ಆಗ್ರಹಿಸಿದ್ದೇವೆ. 


ನಿಮ್ಮ ಇತ್ತೀಚಿನ ನಡೆಗಳು ವಿರೋಧ ಪಕ್ಷದ ನಾಯಕರಾಗಲು ಸಾಕಷ್ಟು ತಂತ್ರಗಳನ್ನು ನಡೆಸುತ್ತಿರುವಂತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ? 
ರಾಜಕೀಯ ಭವಿಷ್ಯದಲ್ಲಿಯೇ ನಾನು ಎಂದಿಗೂ ಅಧಿಕಾರ ಹಾಗೂ ಸ್ಥಾನಕ್ಕಾಗಿ ಲಾಬಿ ನಡೆಸಿಲ್ಲ. ಉನ್ನತ ಸ್ಥಾನ ನೀಡಿದ್ದರೂ ನಾನೇ ಅದನ್ನು ತಿರಸ್ಕರಿಸಿದ್ದೇನೆ. ವಿರೋಧ ಪಕ್ಷದ ನಾಯಕರ ಆಯ್ಕೆ ವಿಚಾರ ಹೈ ಕಮಾಂಡ್'ಗೆ ಸಂಬಂಧಿಸಿದ್ದು. 


ಬಿಜೆಪಿ ವಿರುದ್ಧ ಹೋರಾಟ ನಡೆಸಲು ಯಾವ ರೀತಿಯ ಯೋಜನೆ ರೂಪಿಸುತ್ತಿದ್ದೀರಿ? 
ಕೇಂದ್ರ ಸರ್ಕಾರ ಪಿತೂರಿ ನಡೆಸುತ್ತಿದೆ. ವಿರೋಧ ಪಕ್ಷದ ನಾಯಕರನ್ನು ಗುರಿ ಮಾಡುತ್ತಿದೆ. ಸರ್ವಾಧಿಕಾರ ರಾಜಕಾರಣ ಕೇಂದ್ರ ಬಿಂದುವಾಗಿದೆ. ಮಾಜಿ ಹಣಕಾಸು ಸಚಿವ ಚಿದಂಬರಂ ಅವರ ಬಂಧನ ಅಗತ್ಯವಿತ್ತೇ? ಸಂವಿಧಾನದ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com