ಜಿಟಿ ದೇವೇಗೌಡ-,ಸಿಟಿ ರವಿ
ಜಿಟಿ ದೇವೇಗೌಡ-,ಸಿಟಿ ರವಿ

ಪುತ್ರನ ರಾಜಕೀಯ ಭವಿಷ್ಯಕ್ಕೆ ವೇದಿಕೆ ಸಜ್ಜು: ಜೆಡಿಎಸ್ ವರಿಷ್ಠರ ವಿರುದ್ಧ ಹರಿಹಾಯ್ದ ಜಿಟಿಡಿ

ಇತ್ತೀಚೆಗೆ ಸ್ವಪಕ್ಷ ನಾಯಕರ ಜೊತೆಗೆ ಓಡಾಡುವುದಕ್ಕಿಂತಲೂ ಹೆಚ್ಚಾಗಿ ಬಿಜೆಪಿ ನಾಯಕರ ಜೊತೆಗೆ ಗುರುತಿಸಿಕೊಳ್ಳುತ್ತಿರುವ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ, ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿಯುವ ಮೂಲಕ ಪಕ್ಷದಿಂದ ಹೊರನಡೆಯುವ ಅಧಿಕೃತ ಸೂಚನೆ ನೀಡಿದ್ದಾರೆ

ಮೈಸೂರು: ಇತ್ತೀಚೆಗೆ ಸ್ವಪಕ್ಷ ನಾಯಕರ ಜೊತೆಗೆ ಓಡಾಡುವುದಕ್ಕಿಂತಲೂ ಹೆಚ್ಚಾಗಿ ಬಿಜೆಪಿ ನಾಯಕರ ಜೊತೆಗೆ ಗುರುತಿಸಿಕೊಳ್ಳುತ್ತಿರುವ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ, ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿಯುವ ಮೂಲಕ ಪಕ್ಷದಿಂದ ಹೊರನಡೆಯುವ ಅಧಿಕೃತ ಸೂಚನೆ ನೀಡಿದ್ದಾರೆ

ಅಷ್ಟೇ ಅಲ್ಲ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸುವ ಮೂಲಕ ಪುತ್ರ ಪ್ರಜ್ವಲ್ ರಾಜಕೀಯ ಭವಿಷ್ಯಕ್ಕೆ ಹುಣಸೂರಿನಿಂದಲೇ ಬುನಾದಿ ಹಾಕಿದ್ದಾರೆ. 2018 ರ ವಿಧಾಸಭಾ ಚುನಾವಣೆ ಸಂದರ್ಭದಲ್ಲಿಯೇ ಪುತ್ರನ ರಾಜಕೀಯ ಭವಿಷ್ಯಕ್ಕೆ ಯೋಜನೆ ರೂಪಿಸಿದ್ದ ಜಿಟಿಡಿ, ಹುಣಸೂರು ಕ್ಷೇತ್ರದಿಂದ ಪುತ್ರನಿಗೆ ಜೆಡಿಎಸ್‍ ಟಿಕೆಟ್ ಗಾಗಿ ಹೋರಾಟ ನಡೆಸಿದ್ದರಾದರೂ, ಹೆಚ್.ವಿಶ‍್ವನಾಥ್ ಗೆ ಬಿ.ಫಾರಂ ಕೊಡುವ ಮೂಲಕ ಜಿ.ಟಿ.ದೇವೇಗೌಡರ ಆಸೆಗೆ ಜೆಡಿಎಸ್ ವರಿಷ್ಠರು ತಣ್ಣೀರೆರಚಿದ್ದರು. ಇದೀಗ ಪುತ್ರನ ರಾಜಕೀಯ ಭವಿಷ್ಯಕ್ಕೆ ಉಪಚುನಾವಣೆಯೇ ಉತ್ತಮ ವೇದಿಕೆ ಎಂಬುದನ್ನು ಪರಿಗಣಿಸಿರುವ ಅವರು, ಬಿಜೆಪಿಯಿಂದ ಪುತ್ರ ಪ್ರಜ್ವಲ್ ನನ್ನು ಹುಣಸೂರು  ಕ್ಷೇತ್ರದಿಂದ ಕಣಕ್ಕಿಳಿಸಲು ಸಕಲ ಸಿದ್ಧತೆ ನಡೆಸಿದ್ದಾರೆ.

ಕೆಲವು ದಿನಗಳ ಹಿಂದೆ ಬಿಜೆಪಿಗೆ ಜೆಡಿಎಸ್ ನ ಕೆಲ ಶಾಸಕರು ಬಾಹ್ಯ ಬೆಂಬಲ ಕೊಡಲು ಸಿದ್ಧರಾಗಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿಯತ್ತ ತಮ್ಮ ಒಲವು ತೋರಿದ್ದರು. ಆದರೆ ಜೆಡಿಎಸ್ ತೊರೆಯುವ ಬಗ್ಗೆ ಸ್ಪಷ್ಟಪಡಿಸಿರಲಿಲ್ಲ.  ವಿಶ‍್ವನಾಥ್ ಹಿಡಿದ ಹಾದಿಯನ್ನು ಹಿಡಿಯದೇ ಚಾಣಾಕ್ಷ್ಯ ನಡೆಯನ್ನು ಅನುಸರಿಸುತ್ತಿರುವ ಜಿಟಿಡಿ ಹಂತಹಂತವಾಗಿ ಬಿಜೆಪಿ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ. ಜಿಟಿಡಿ ಚಿತ್ತ ಬಿಜೆಪಿಯತ್ತ ಎಂಬುದು ತೆರೆದ ಸತ್ಯವಾಗಿರುವುದರಿಂದ ಜೆಡಿಎಸ್ ಪಕ್ಷ ಸಂಘಟನಾ ಪಟ್ಟಿಯಿಂದ ಜಿ.ಟಿ.ದೇವೇಗೌಡರನ್ನು ಕೈಬಿಟ್ಟಿದ್ದು, ಮಾಜಿ ಸಚಿವ ಸಾ.ರಾ.ಮಹೇಶ್ ಅವರಿಗೆ ಸ್ಥಾನ ಕಲ್ಪಿಸಿದೆ ಎನ್ನಲಾಗಿದ್ದು, ಈ ಪಟ್ಟಿ ಶುಕ್ರವಾರ ಬಿಡುಗಡೆಯಾಗಲಿದೆ.

ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ, ಹೆಚ್.ಡಿ.ಕುಮಾರಸ್ವಾಮಿ ಅವರ ಬದಲಿಗೆ ಸಾ.ರಾ.ಮಹೇಶ್ ಈಗ ಪಕ್ಷದಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಅವರು ಸಂಘಟನೆಯಲ್ಲಿ ಬಹಳ ಚತುರರು. ತಮಗಿಂತಲೂ ಹೆಚ್ಚಿನ ಸಂಘಟನಾ ಶಕ್ತಿ ಅವರಿಗಿದೆ. ಇಷ್ಟು ದಿನ ರಾಜ್ಯದಲ್ಲಿ ಜೆಡಿಎಸ್ ಕಟ್ಟಿದ್ದಾರೆ, ಇನ್ಮುಂದೆ ದೇಶದಲ್ಲಿ ಪಕ್ಷ ಸಂಘಟಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಲಿ ಎಂದು ವ್ಯಂಗ್ಯವಾಡುವ ಮೂಲಕ ಸಾರಾ ಮಹೇಶ್ ಅವರ ಕಾಲೆಳೆದರು. ಸಾ.ರಾ.ಮಹೇಶ್ ಗೂ ಅಷ್ಟಕ್ಕಷ್ಟೆ ಎಂಬುದನ್ನು ಮತ್ತೊಮ್ಮೆ ಬಹಿರಂಗಪಡಿಸಿದರು.

ಮೈತ್ರಿ ಸರ್ಕಾರದಲ್ಲಿ ಸಚಿವನಾಗಿದ್ದ ಸಂದರ್ಭದಲ್ಲಿ ಕ್ಷಣಕ್ಷಣಕ್ಕೂ ಅವಮಾನ ಪಡಬೇಕಿತ್ತು. ಪ್ರತಿಕ್ಷಣ ನೋವನ್ನು ಉಂಡು ಸಹಿಸಿಕೊಂಡು ಇದ್ದೆ. ಪ್ರಜಾಪ್ರಭುತ್ವಕ್ಕೆ ಮಾರಕವಾದವರು ರಾಜಕಾರಣಕ್ಕೆ ಬಂದಿದ್ದರಿಂದ ತಮ್ಮಂತಹ ರಾಜಕಾರಣಿಗಳಿಗೂ ಅವರು ಮಾರಕವಾದರು. ಸಚಿವ ಸ್ಥಾನ, ಯಾವುದೇ ಜವಾಬ್ದಾರಿಯಿಲ್ಲದೇ ತಾವೀಗ ಬಹಳ ಆರಾಮಾಗಿದ್ದು, ಯಾವ ಅವಮಾನವೂ, ನೋವು ಇಲ್ಲ ಎಂದು ಜೆಡಿಎಸ್ ವರಿಷ್ಠರನ್ನು ಮಾತಿನಿಂದ ಚುಚ್ಚಿದರು. ಜೆಡಿಎಸ್ ಸಂಘಟನಾ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದಿರುವುದು ತಮ್ಮ ತಲೆಯ ಮೇಲಿದ್ದ ದೊಡ್ಡಬಂಡೆಯೊಂದು ಇಳಿದಂತಾಗಿದೆ. ಈಗ ಬಡವರ ಸೇವೆ ಮಾಡಿಕೊಂಡು ನೆಮ್ಮದಿಯಾಗಿದ್ದೇನೆ ಎಂದರು. ತಾವು ಜೆಡಿಎಸ್ ನಲ್ಲಿರುವುದು ಹಲವರಿಗೆ ಇಷ್ಟವಿಲ್ಲ. ಉನ್ನತ ಶಿಕ್ಷಣ ಖಾತೆ ಬೇಡ ಎಂದಾಗ ಯಾರೊಬ್ಬರೂ ತಮಗೆ ಸ್ಪಂದಿಸಲಿಲ್ಲ. ತಮಗೆ  ರಾಜಕೀಯ ಸಾಕಾಗಿದ್ದು, ಚುನಾವಣಾ ರಾಜಕಾರಣದಿಂದ ನಿವೃತ್ತಿ‌ ಪಡೆದು ಮಗನಿಗೆ ಬಿಟ್ಟುಕೊಡುತ್ತೇನೆ ಎಂದರು.

ಹುಣಸೂರು ಉಪಚುನಾವಣೆಯಲ್ಲಿ ಜೆಡಿಎಸ್ ಸೋಲುತ್ತದೆ ಎನ್ನುವ ಮೂಲಕ ಪಕ್ಷದ ವರಿಷ್ಠರನ್ನು ಕುಟುಕಿದರು. ಇತ್ತ  ಹೆಚ್.ವಿಶ್ವನಾಥ್ ಸಹ ಸಹ ಪುತ್ರ ಅಮಿತ್ ದೇವರಹಟ್ಟಿ ಅವರನ್ನು ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಸಲು ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ಹುಣಸೂರು ಉಪಚುನಾವಣೆಗೆ ಜಿಟಿಡಿ ಪುತ್ರನಿಗೆ ಟಿಕೆಟ್ ಸಿಗದೇ ಹೋದಲ್ಲಿ ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಪುತ್ರನನ್ನು ಕಣಕ್ಕಿಳಿಸುವ ಚಿಂತನೆಯೂ ಇವರಿಗಿದೆ.

ಇದೇ ಸಂದರ್ಭದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಂಧನ ಕುರಿತು ಪ್ರತಿಕ್ರಿಯಿಸಿದ ಅವರು, ಈ  ಸುದ್ದಿ ಕೇಳಿ ತಮಗೆ ಆಘಾತವಾಗಿದೆ. ಅಕ್ರಮ ಹಣ ಸಂಗ್ರಹ  ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಶಿವಕುಮಾರ್ ಅವರನ್ನು ಬಂಧಿಸಿದ್ದು, ಅದಕ್ಕೆ ಅವರು ಎದೆಗುಂದಬೇಕಿಲ್ಲ. ಅವರಿಗೆ ಎಲ್ಲವನ್ನೂ ಜಯಿಸುವ ಶಕ್ತಿ ಇದೆ. ಎಲ್ಲಾ  ಸಂಕಷ್ಟಗಳಿಂದ ಮುಕ್ತವಾಗಲಿ ಎಂದು ಚಾಮುಂಡೇಶ್ವರಿ ದೇವಿಯಲ್ಲಿ  ಪ್ರಾರ್ಥಿಸುವುದಾಗಿ ಜಿ.ಟಿ.ದೇವೇಗೌಡ ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com