ಡಿಕೆಶಿ ತಾಯಿ ಕಣ್ಣೀರಿನ ಶಾಪ ಬಿಜೆಪಿಗೆ ತಟ್ಟಲಿದೆ: ಎಚ್ ಡಿ ಕುಮಾರಸ್ವಾಮಿ

ಕೇಂದ್ರದ ಬಿಜೆಪಿ ಸರ್ಕಾರ ಪಿತೂರಿ ಮಾಡಿ ಡಿ ಕೆ ಶಿವಕುಮಾರ್ ಅವರನ್ನು ಬಂಧಿಸಿದ್ದು, ಅವರ ತಾಯಿಯ ನೋವು ಹಾಗೂ ಕಣ್ಣೀರಿನ ಶಾಪ ಬಿಜೆಪಿಯನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ...
ಡಿ ಕೆ ಶಿವಕುಮಾರ್ ತಾಯಿ ಜತೆ ಕುಮಾರಸ್ವಾಮಿ
ಡಿ ಕೆ ಶಿವಕುಮಾರ್ ತಾಯಿ ಜತೆ ಕುಮಾರಸ್ವಾಮಿ

ಕನಕಪುರ: ಕೇಂದ್ರದ ಬಿಜೆಪಿ ಸರ್ಕಾರ ಪಿತೂರಿ ಮಾಡಿ ಡಿ ಕೆ ಶಿವಕುಮಾರ್ ಅವರನ್ನು ಬಂಧಿಸಿದ್ದು, ಅವರ ತಾಯಿಯ ನೋವು ಹಾಗೂ ಕಣ್ಣೀರಿನ ಶಾಪ ಬಿಜೆಪಿಯನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಕನಕಪುರದ ಸಾತನೂರಿನ ಕೋಡಿಹಳ್ಳಿಯಲ್ಲಿರುವ ಡಿ ಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ, ಶಿವಕುಮಾರ್ ಅವರ ತಾಯಿ ಗೌರಮ್ಮ ಅವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು.

'ತಾವು ಯಾವುದಕ್ಕೂ ಹೆದರಬೇಡಿ, ಈ ಎಲ್ಲ ಸಂಕಷ್ಟಗಳನ್ನು ಎದುರಿಸಿ ಶಿವಕುಮಾರ್ ಅವರು ಹೊರ ಬರುತ್ತಾರೆ. ಬಿಜೆಪಿಯ ಈ ಕುತಂತ್ರ ಕೇವಲ ಎರಡು ದಿನ. ನಾವೆಲ್ಲರು ನಿಮ್ಮ ಜತೆ ಇದ್ದೇವೆ. ಹೆಚ್ಚು ಚಿಂತಿಸಬೇಡಿ. ಆರೋಗ್ಯದ ಕಡೆ ಗಮನಹರಿಸಿ ಎಂದು ಸಮಾಧಾನ ಮಾಡಿದರು.

ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಕುಮಾರಸ್ವಾಮಿ, ' ಡಿಕೆ ಶಿವಕುಮಾರ್ ಗುಜರಾತ್ ಕಾಂಗ್ರೆಸ್ ಶಾಸಕರನ್ನು ರಕ್ಷಿಸಿಕೊಂಡ ಪರಿಣಾಮ ಕೇಂದ್ರ ಸರ್ಕಾರ ತನಿಖಾ ಸಂಸ್ಥೆ ದುರ್ಬಳಕೆ ಮಾಡಿಕೊಂಡು ಸೇಡಿನ ರಾಜಕಾರಣ ಮಾಡುತ್ತಿದೆ. ಡಿಕೆ ಶಿವಕುಮಾರ್ ನಾಲ್ಕು ದಿನಗಳ ಕಾಲ ವಿಚಾರಣೆಗೆ ಹಾಜರಾಗಿ ಅವರ ಪ್ರಶ್ನೆಗೆ ಉತ್ತರಿಸಿದರೂ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಸಾಕ್ಷಿ ನಾಶಕ್ಕೆ ಅವಕಾಶ ಇಲ್ಲ. ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲಾಗಿದೆ. ಆದರೂ ಅವರನ್ನು ಬಂಧಿಸಿರುವುದು ಬಿಜೆಪಿಯ ದ್ವೇಷದ ರಾಜಕಾರಣದ ಪ್ರತೀಕವಾಗಿದೆ ಎಂದರು. 

ಈ ತಾಯಿಯ ನೋವು ಹಾಗೂ ಕಣ್ಣೀರ ಶಾಪ ಬಿಜೆಪಿ ಕುತಂತ್ರಕ್ಕೆ ತಕ್ಕ ಪಾಠ ಕಲಿಸಲಿದೆ. ಕುತಂತ್ರ ನಡೆಸಿದವರನ್ನು ಸರ್ವನಾಶ ಮಾಡಲಿದೆ. ಯಾರಿಗೂ ಅಧಿಕಾರ ಶಾಶ್ವತ ಅಲ್ಲ. ಕಾಲಚಕ್ರ ಬದಲಾಗಲಿದೆ. ನಾಳೆ ಇದೇ ಪರಿಸ್ಥಿತಿ ಬಿಜೆಪಿ ನಾಯಕರಿಗೆ ಬಂದರೆ ಆಶ್ಚರ್ಯ ಇಲ್ಲ' ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ನಿಮಗೂ ಇಂತಹುದೆ ಪರಿಸ್ಥಿತಿ ಎದುರಾಗಬಹುದು ಎಂಬ ಸಂದೇಶ ರವಾನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com