ಸಿದ್ದರಾಮಯ್ಯ, ನಮ್ಮ ನಾಯಕರೆಂದು ರಾಜ್ಯ ಕಾಂಗ್ರೆಸ್ ನಾಯಕರು ಹೇಳಲಿ: ಮಾಧುಸ್ವಾಮಿ ಸವಾಲು

ಸಿದ್ದರಾಮಯ್ಯನವರೇ ನಮ್ಮ ನಾಯಕ ಎಂದು ಡಿ ಕೆ ಶಿವಕುಮಾರ್, ಎಚ್ ಕೆ ಪಾಟೀಲ್ ಹಾಗೂ ಡಾ ಜಿ ಪರಮೇಶ್ವರ್ ಅವರಿಂದ ಒಮ್ಮೆ ಹೇಳಿಸಿ ನೋಡೋಣ..? ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ....
ಜೆಸಿ ಮಾಧುಸ್ವಾಮಿ
ಜೆಸಿ ಮಾಧುಸ್ವಾಮಿ

ಕೊಪ್ಪಳ: ಸಿದ್ದರಾಮಯ್ಯನವರೇ ನಮ್ಮ ನಾಯಕ ಎಂದು ಡಿ ಕೆ ಶಿವಕುಮಾರ್, ಎಚ್ ಕೆ ಪಾಟೀಲ್ ಹಾಗೂ ಡಾ ಜಿ ಪರಮೇಶ್ವರ್ ಅವರಿಂದ ಒಮ್ಮೆ ಹೇಳಿಸಿ ನೋಡೋಣ..? ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಕಾಂಗ್ರೆಸ್ ನಾಯಕರಿಗೆ ಸವಾಲು  ಹಾಕಿದ್ದಾರೆ.
 
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ತಿಂಗಳಿನಿಂದ ವಿರೋಧ ಪಕ್ಷದ ನಾಯಕರನ್ನು ಮಾಡಿ ಎಂದು ನಾವು ಕೇಳುತ್ತಲ್ಲೇ ಇದ್ದೇವೆ. ಆದರೆ ಕಾಂಗ್ರೆಸ್ ನಾಯಕರು, ಯಾರನ್ನು ಶಾಸಕಾಂಗ ನಾಯಕರನ್ನಾಗಿಸಬೇಕು ಎಂಬ ಗೊಂದಲದಲ್ಲಿಯೇ ಕಾಲ  ಕಳೆಯುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ರಾಜಕೀಯ ಜ್ಞಾನವಿಲ್ಲದವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ದೇವೇಗೌಡರ ಹಂಗಿನಲ್ಲಿ, ನೆರಳಿನಲ್ಲಿ ಬೆಳೆದು ದೊಡ್ಡ ನಾಯಕರಾದವರು. ಅವರೇನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಅವರ ಬಗ್ಗೆ ಮಾತನಾಡುತ್ತಾರೆ. ಮೊದಲು ಅವರ ಮನೆಯನ್ನು ತೊಳೆದುಕೊಳ್ಳಲಿ ಎಂದು ಸಿದ್ದರಾಮಯ್ಯ ವಿರುದ್ದ ಕಿಡಿ ಕಾರಿದರು.
 
ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಡಿಯ್ಯೂರಪ್ಪ ಹಾಗೂ ಮತ್ತೊಬ್ಬರ ಮಾತುಗಳು ನಡೆಯುವುದಿಲ್ಲ. ಏನಿದ್ದರೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು.
ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣವನ್ನು ಸಿಬಿಐಗೆ ತನಿಖೆಗೆವಹಿಸಿ ಎಂಬ ಸಾರ್ವಜನಿಕರ ಆಗ್ರಹದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ತನ್ನಷ್ಟಕ್ಕೆ ತಾನೇ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅದಕ್ಕೆಲ್ಲಾ ಪ್ರತ್ಯೇಕ ಕಾನೂನು ವಿಭಾಗ, ಪೊಲೀಸ್ ಇಲಾಖೆ, ನ್ಯಾಯಾಂಗ ಸೂಚನೆ ನೀಡಿದರೆ ಆಗ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.
 
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬಿಜೆಪಿ ಸರ್ಕಾರ ನಾಲ್ಕು ತಿಂಗಳ ಬಳಿಕ ಇರುವುದಿಲ್ಲ ಎಂಬ ಹೇಳಿಕೆಗೆ ಉತ್ತರಿಸಿದ ಅವರು, ಮೈತ್ರಿ ಸರ್ಕಾರ ಜನರಿಂದ ತಿರಸ್ಕಾರಗೊಂಡು ಪತನಗೊಂಡಿದೆ. ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ ಎಂದು ಜನರು ಹೇಳಿದರೆ, ಮೂರು ತಿಂಗಳು ಆಡಳಿತ ನಡೆಸಿದರೂ ಸಾಕು ಎಂದು ಕುಮಾರಸ್ವಾಮಿಗೆ ಮಾಧುಸ್ವಾಮಿ ತಿರುಗೇಟು ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com