ಡಿಕೆಶಿಗೆ ಬೃಹತ್ ಬೆಂಬಲ: ಒಕ್ಕಲಿಗರು ಇನ್ನೂ ಎದ್ದಿಲ್ಲ, ಇದು ಸ್ಯಾಂಪಲ್ ಅಷ್ಟೇ; ನಂಜಾವಧೂತ ಸ್ವಾಮೀಜಿ!

ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನ ಖಂಡಿಸಿ ಸಾವಿರಾರು ಮಂದಿ ಒಕ್ಕಲಿಗರು ಬುಧವಾರ ಪ್ರತಿಭಟನೆ ನಡೆಸಿ ಶಕ್ತಿ ಪ್ರದರ್ಶನ ನಡೆಸಿದರು.

Published: 11th September 2019 06:42 PM  |   Last Updated: 11th September 2019 06:42 PM   |  A+A-


Nanjavadutha Swamiji

ನಂಜಾವಧೂತ ಸ್ವಾಮೀಜಿ

Posted By : Vishwanath S
Source : UNI

ಬೆಂಗಳೂರು: ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನ ಖಂಡಿಸಿ ಸಾವಿರಾರು ಮಂದಿ ಒಕ್ಕಲಿಗರು ಬುಧವಾರ ಪ್ರತಿಭಟನೆ ನಡೆಸಿ ಶಕ್ತಿ ಪ್ರದರ್ಶನ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದವು. ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದ ನಿಯೋಗ ಶಿವಕುಮಾರ್ ವಿರುದ್ಧ ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ದುರುದ್ದೇಶದ ರಾಜಕಾರಣ ಮಾಡುತ್ತಿದೆ ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

ಇದಕ್ಕೂ ಮುನ್ನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಿವಿಧ ಸಂಘಟನೆಗಳ ಜೊತೆಗೂಡಿ ಕಾಂಗ್ರೆಸ್, ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸಿದರೆ, ಇತ್ತ ಒಕ್ಕಲಿಗ ಸಂಘದ ಸಾವಿರಾರು ಸಂಖ್ಯೆಯ ಡಿ.ಕೆ.ಶಿವಕುಮಾರ್ ಬೆಂಬಲಿಗರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿನ ಪ್ರತಿಭಟನಾ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಸ್ಫಟಿಕಪುರಿ ಮಹಾಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ, ಈ ಪ್ರತಿಭಟನೆ ಸಾಂಕೇತಿಕ ಮಾತ್ರ. ಸಮುದಾಯಕ್ಕೆ ಕಷ್ಟ ಕೊಟ್ಟರೆ ನಾವು ಸಹ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ. ಆಗ ಕರವೇ ನಾರಾಯಣಗೌಡ ಹಾದಿಯಲ್ಲಿ ಸ್ವಾಮೀಜಿಗಳು ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಇದರಿಂದ ಪರಿಸ್ಥಿತಿ ಗಂಭೀರವಾಗಬಹುದು. ಬಿಜೆಪಿ ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದರು.

ಒಕ್ಕಲಿಗರು ಯಾರಿಗೂ ಕಿಂಚಿತ್ತು ನೋವು ಕೊಡುವವರಲ್ಲ. ಬೆಂಗಳೂರಿಗೆ ಕಾವೇರಿ ನೀರು ಹರಿಸಿದ್ದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು. ಕೇಂದ್ರದಲ್ಲಿ ಈಗ ಅವರ ಧ್ವನಿ ಕೇಳಿಸದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 48 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದಾರೆ. ಅವರ ಧ್ವನಿಯನ್ನು ಕೂಡ ಮೊಟಕುಗೊಳಿಸುವ ಕೆಲಸ ನಡೆಯುತ್ತಿದೆ. ಸಾವಿರಾರು ಜನರಿಗೆ ಉದ್ಯೋಗ, ಲಕ್ಷಾಂತರ ಕುಟುಂಬಗಳಿಗೆ ಅನ್ನ ನೀಡಿದ ಸಿದ್ಧಾರ್ಥ್ ಅವರನ್ನು ಕಳೆದುಕೊಂಡಾಗಿದೆ. ಯಾವುದೇ ತಪ್ಪನ್ನು ಮಾಡದೇ ಅವರು ಈ ಲೋಕವನ್ನೇ ತ್ಯಜಿಸಬೇಕಾಯಿತು. ಡಿ.ಕೆ.ಶಿವಕುಮಾರ್ ಎರಡನೇ ಸಿದ್ಧಾರ್ಥ್ ಆಗಬಾರದು ಎಂದು ಕಿವಿ ಮಾತು ಹೇಳಿದರು.

ಶಾಸಕಾಂಗ, ಕಾರ್ಯಾಂಗ ಕೈ ಬಿಟ್ಟರೂ ನ್ಯಾಯಾಂಗ ಕೇಂದ್ರದ ಅನ್ಯಾಯದ ವಿರುದ್ಧ ಧ್ವನಿಯೆತ್ತಲಿದೆ ಎಂಬ ವಿಶ್ವಾಸವಿದೆ. ಶಿವಕುಮಾರ್ ಬಗ್ಗೆ ಆರಂಭದಲ್ಲಿ ಸಹಾನುಭೂತಿ ತೋರಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೀಗ ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದರು.

ಕಾರಾಗೃಹದಲ್ಲಿ ಇದ್ದವರಿಗೆ ಪೆರೋಲ್ ಕೊಟ್ಟಿದ್ದಾರೆ. ಆದರೆ ಗಣೇಶ ಹಬ್ಬದಂದು ತಂದೆಯವರ ಕಾರ್ಯ ಮಾಡಲು ಶಿವಕುಮಾರ್ ಅವರಿಗೆ ಅವಕಾಶ ಕೊಡಲಿಲ್ಲ. ಪುಣ್ಯಕೋಟಿಯ ಕಥೆಯನ್ನು ಜಾರಿನಿರ್ದೇಶನಾಲಯಕ್ಕೆ ಹೇಳುತ್ತಿಲ್ಲ. ಹುಲಿಯನ್ನು ಬೋನಿಗೆ ಹಾಕಿದರೂ, ಪಂಜರದಲ್ಲಿ ಬಂಧಿಸಿದರೂ ಹುಲಿ ಹುಲಿಯೇ. ಇತ್ತೀಚೆಗೆ ಹುಲಿಗೆ ಸಂಸ್ಕಾರ ಹೆಚ್ಚಾಗಿದ್ದರಿಂದ ಅದು ಸೌಮ್ಯವಾಗಿತ್ತು.ಹುಲಿ ಮೌನವಾಗಿದ್ದಕ್ಕಾಗಿಯೇ ಕೆಲವು ಬೆಳವಣಿಗೆಗಳು ಘಟಿಸಿಬಿಟ್ಟವು ಎಂದು ಶಿವಕುಮಾರ್ ಅವರನ್ನು ಸ್ವಾಮೀಜಿ ಹುಲಿಗೆ ಹೋಲಿಸಿದರು.

1994 ರಲ್ಲಿ ಆದಿಚುಂಚನಗಿರಿ ಸ್ವಾಮೀಜಿಗಳು ಸಮುದಾಯದ ಹೋರಾಟಕ್ಕೆ ಕರೆ ನೀಡಿದಾಗ ಹೋರಾಟ ಯಶ‍್ವಸಿಯಾಗಿತ್ತು. ಅಂದು ದೊಡ್ಡಮಟ್ಟದಲ್ಲಿ ಜನ ಸೇರಿದಂತೆ ಇಂದೂ ಜನ ಸೇರಿದ್ದಾರೆ ಎಂದರು.

ಬೆಂಗಳೂರು ಇಂದು ಸ್ತಬ್ಧವಾಗಿತ್ತು. ಒಕ್ಕಲಿಗರನ್ನು ಕೆರಳಿಸದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಡೆದುಕೊಳ್ಳಬೇಕು.ಶಿವಕುಮಾರ್ ಮಗಳಿಗೂ ಸಮನ್ಸ್ ಕೊಟ್ಟಿದ್ದಾರೆ. ಮೋದಿ ದೀಪದ ಕೆಳಗೆ ಬೆಳಕು ಇದೆ ಎಂಬುದನ್ನು ತಿಳಿದುಕೊಳ್ಳಬೇಕು. ಒಕ್ಕಲಿಗ ಸಮುದಾಯ ಬಿಜೆಪಿ ಶಾಸಕರು ಮತ್ತು ಸಂಸದರನ್ನು ಗೆಲ್ಲಿಸಿಕೊಟ್ಟಿದೆ. ಇದೇ ರೀತಿ ಸಮುದಾಯವನ್ನು ಗುರಿಯಾಗಿಸಿಕೊಂಡರೆ, ಚಿನ್ನಪ್ಪ ರೆಡ್ಡಿ ಆಯೋಗದ ವಿರುದ್ಧ ಮಾಡಿದ ಹೋರಾಟಕ್ಕಿಂತಲೂ ನಾಲ್ಕು ಪಟ್ಟು ದೊಡ್ಡಮಟ್ಟದಲ್ಲಿ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ. ಇದು ಸಾಂಕೇತಿಕ ಮಾತ್ರ ಎಂದು ನಂಜಾವಧೂತ ಸ್ವಾಮೀಜಿ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದರು.

ದೇವೇಗೌಡರ ಸೋಲಿನಿಂದ ಅವರಿಗೆ ವೈಯುಕ್ತಿಕ ನಷ್ಟಕ್ಕಿಂತಲೂ ನಾಡಿಗೆ ಹೆಚ್ಚು ನಷ್ಟವಾಗಿದೆ. ಕುಮಾರಸ್ವಾಮಿ ಅವರಿಗೆ ಅಧಿಕಾರ ಇರಲಿ ಇಲ್ಲದಿರಲಿ ಅವರು ಬಡವರ ಪರ ಇದ್ದಾರೆ. ಬಿಜೆಪಿ ಸರ್ಕಾರದಲ್ಲಿ ಒಕ್ಕಲಿಗ ಸಮುದಾಯದ ಕೇವಲ ಮೂವರಿಗೆ ಸಚಿವ ಸ್ಥಾನ ನೀಡಲಾಗಿದೆ. ಅಶೋಕ್, ಅಶ್ವತ್ಥ್ ನಾರಾಯಣ ಹಾಗೂ ಸಿ.ಟಿ ರವಿಗೆ ಜನರ ಸಮೀಪ ಕೆಲಸ ಮಾಡುವ ಇಲಾಖೆ ಹಂಚಿಕೆ ನೀಡಿಲ್ಲ. ಅಶೋಕ್ ಗೆ ಸಿಗಬೇಕಾದ ಸ್ಥಾನ ಮಾನ ಸಿಗಲಿಲ್ಲ. ಇದನ್ನು ಸಮುದಾಯ ಗಮನಿಸುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಡಿ.ಕೆ.ಶಿವಕುಮಾರ್ ಕಾಂಗ್ರೆಸ್‍ ಗೆ ನಿಷ್ಠಾವಂತ ನಾಯಕನಾಗಿರುವುದರಿಂದಲೇ ಅವರನ್ನು ಬಿಜೆಪಿ ಗುರಿಯಾಗಿಸಿ, ಅವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ. ಪಕ್ಷ ಹಾಗೂ ಎಲ್ಲಾ ಸಮುದಾಯ ಶಿವಕುಮಾರ್ ಅವರ ಬೆಂಬಲಕ್ಕೆ ನಿಂತಿದೆ ಎಂದರು.

ಜೆಡಿಎಸ್ ಮುಖಂಡ ಎಲ್.ಆರ್. ಶಿವರಾಮೇಗೌಡ ಮಾತನಾಡಿ, ನಂಜಾವಧೂತ ಸ್ವಾಮೀಜಿಯಂತೆ ಬೇರೆ ಯಾವ ಸ್ವಾಮೀಜಿಯೂ ಇಲ್ಲ. ಸಮುದಾಯಕ್ಕೆ ಸಂಕಷ್ಟ ಬಂದಾಗಲೆಲ್ಲಾ ಅವರು ಬೆಂಬಲಕ್ಕೆ ನಿಲ್ಲುತ್ತಾರೆ. ಒಕ್ಕಲಿಗರ ಸಮುದಾಯದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ಪಕ್ಷಾತೀತವಾಗಿ ಹೋರಾಟ ಮಾಡುತ್ತಾರೆ ಎನ್ನುವ ಮೂಲಕ ಪ್ರತಿಭಟನೆಯಿಂದ ದೂರ ಉಳಿದಿದ್ದ ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ನಾರಾಯಣಗೌಡ ಮಾತನಾಡಿ, ಡಿ.ಕೆ.ಶಿವಕುಮಾರ್ ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದ್ದರು. ಚೆನ್ನೈನದಲ್ಲಿ ಕಾವೇರಿ ಹೋರಾಟಗಾರರನ್ನು ಬಂಧಿಸಿದಾಗ ಜಾಮೀನು ಕೊಟ್ಟು ನಮ್ಮನ್ನೆಲ್ಲ ಬಿಡಿಸಿಕೊಂಡು ಬಂದಿದ್ದರು. ಹೀಗಾಗಿ ಅವರ ಬೆಂಬಲಕ್ಕೆ ಇಂದು ನಿಂತಿರುವುದಾಗಿ ಸ್ಪಷ್ಟಪಡಿಸಿದರು.

ಮಂಗಳವಾರ ರಾತ್ರಿ ಪೊಲೀಸರು ನನ್ನ ಮನೆಗೆ ಬಂದು ಪ್ರತಿಭಟನೆಯಲ್ಲಿ ಅಹಿತಕರ ಘಟನೆ ನಡೆದರೆ ಅದಕ್ಕೆ ನಾನೇ ಜವಾಬ್ದಾರ ಎಂದು ಪತ್ರ ಬರೆಸಿಕೊಂಡು ಹೋಗಿದ್ದಾರೆ. ಸಮುದಾಯದ ಮೇಲೆ ನಂಬಿಕೆ ಇಟ್ಟು ಸಹಿ ಮಾಡಿದ್ದೇನೆ. ಒಂದು ವಾರದಿಂದ ಪ್ರತಿಭಟನಾ ಜಾಥಾ ಮಾಡಬೇಕು ಎಂದು ಚಿಂತನೆ ನಡೆಸಲಾಗಿತ್ತು.ದ್ವೇಷದ ರಾಜಕಾರಣ ಬಿಡಿ ಎಂದರು.

ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ನಾರಾಯಣಗೌಡ, ಸಮುದಾಯಕ್ಕೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ಡಿ.ಕೆ.ಶಿವಕುಮಾರ್ ಹಾಗೂ ಸಮುದಾಯದ ಮೇಲಿನ ದಬ್ಬಾಳಿಕೆ ಕುರಿತು ವಜೂಭಾಯಿವಾಲಾ ಅವರಿಗೆ ವಿವರಿಸಲಾಗಿದ್ದು, ಹೋರಾಟದ ಬಗ್ಗೆ ಕೇಂದ್ರದ ಗಮನಕ್ಕೆ ತರುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದರು.

ಇಂದಿನ ಪ್ರತಿಭಟನೆ ಶಾಂತಿಯುತವಾಗಿ ನಡೆದಿದ್ದು, ಸುಮಾರು 60 ಸಾವಿರ ಜನ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಹಣವನ್ನು ಖರ್ಚು ಮಾಡದೇ ಪ್ರತಿಭಟನೆ ನಡೆಸಲಾಗಿದ್ದು, ಸ್ವಯಂಪ್ರೇರಿತರಾಗಿ ಪ್ರತಿಭಟನೆಯಲ್ಲಿ ಜನರು ಭಾಗಿಯಾಗುವ ಮೂಲಕ ನೈತಿಕ ಬೆಂಬಲ ಸೂಚಿಸಿದ್ದಾರೆ. ಶಿವಕುಮಾರ್ ಅವರ ಕಾನೂನು ಹೋರಾಟಕ್ಕೆ ಸಮುದಾಯ ಬೆಂಬಲ ನೀಡಲಿದೆ. ಕೇಂದ್ರದ ಮುಂದಿನ ನಡೆ ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು ಎಂದು ನಾರಾಯಣಗೌಡ ಹೇಳಿದರು.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp