17 ಕ್ಷೇತ್ರಗಳ ಉಪಚುನಾವಣೆ: ಮತ್ತೆ 'ಕಾಂಗ್ರೆಸ್' ಕದ ತಟ್ಟತ್ತಿರುವ ದೇವೇಗೌಡ

ಮೈತ್ರಿ ಸರ್ಕಾರದ ಪತನಕ್ಕೆ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರೇ ಕಾರಣ ಎಂದು ಬಹಿರಂಗವಾಗಿಯೇ ಆರೋಪ ಮಾಡಿದ್ದ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಇದೀಗ ಮತ್ತೆ ಕಾಂಗ್ರೆಸ್ ಬಾಗಿಲು ಬಡಿಯುತ್ತಿದ್ದಾರೆ
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ

ಬೆಂಗಳೂರು: ಮೈತ್ರಿ ಸರ್ಕಾರದ ಪತನಕ್ಕೆ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರೇ ಕಾರಣ ಎಂದು ಬಹಿರಂಗವಾಗಿಯೇ ಆರೋಪ ಮಾಡಿದ್ದ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಇದೀಗ ಮತ್ತೆ ಕಾಂಗ್ರೆಸ್ ಬಾಗಿಲು ಬಡಿಯುತ್ತಿದ್ದಾರೆ

ಉಪಚುನಾವಣೆಯಲ್ಲಿ ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆದಷ್ಟುಬೇಗ ಒಂದು ಸಹಮತಕ್ಕೆ ಬರಲಿ ಎಂದು ಮನವಿ ಮಾಡಿದ್ದಾರೆ. 17 ಅನರ್ಹ ಶಾಸಕರ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವ ಸಾಧ್ಯತೆ ಇದೆ. 17 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದರು. ಆದರೀಗ ಇರುವ ಮೂರು ಕ್ಷೇತ್ರಗಳು ಜೆಡಿಎಸ್ ಕೈತಪ್ಪುವ ಆತಂಕ ದೇವೇಗೌಡ ಅವರಿಗೆ ಕಾಡುತ್ತಿದೆ. ಬಲಾಢ್ಯ ಬಿಜೆಪಿಯ ಎದುರು ಕಾಂಗ್ರೆಸ್ ನಾಯಕರೇ ಪತರುಗುಟ್ಟುತ್ತಿರುವಾಗ ಪ್ರಾದೇಶಿಕ ಪಕ್ಷ ಜೆಡಿಎಸ್ ನ್ನು ಹೇಗೆ ಉಳಿಸಿಕೊಳ್ಳುವುದು ಎಂಬ ಚಿಂತೆ ಅವರಿಗಿದೆಯಂತೆ. ಹೀಗಾಗಿ ಮತ್ತೊಮ್ಮೆ ಮೈತ್ರಿಯ ಕದ ತೆರೆಯುವಂತೆ ಕಾಂಗ್ರೆಸ್ ಮುಂದೆ ಅವರು ಪ್ರಸ್ತಾಪ ಇಟ್ಟಿದ್ದಾರೆ.

17 ಕ್ಷೇತ್ರಗಳ ಪೈಕಿ ಕೇವಲ ಮೂರು ಕ್ಷೇತ್ರ ಮಾತ್ರವಲ್ಲ, ಪಕ್ಷಕ್ಕೆ ಶಕ್ತಿ ಇರುವ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದೇವೆ. ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತೀರ್ಮಾನ ಕೈಗೊಳ್ಳಲಿದ್ದಾರೆ.ಕಾಂಗ್ರೆಸ್ ಎಲ್ಲೆಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ ಎನ್ನುವುದು ತಮಗೆ ಗೊತ್ತಿಲ್ಲ.ಮಹಾರಾಷ್ಟ್ರದಲ್ಲಿ ಎನ್ ಸಿಪಿ ‌ ಜೊತೆ, ಉತ್ತರ ಪ್ರದೇಶದಲ್ಲಿ ಮಾಯಾವತಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ.  ಹೀಗಾಗಿ ಜೆಡಿಎಸ್ ಜೊತೆ ಮೈತ್ರಿ ಮುಂದುವರೆಸುವ ಬಗ್ಗೆ ಸೋನಿಯಾಗಾಂಧಿ, ಪಕ್ಷದ ಅಧ್ಯಕ್ಷರು ಸಮಾಲೋಚನೆ ಮಾಡಿ ಅಭಿಪ್ರಾಯಕ್ಕೆ ಬರಲಿ ಎಂದರು.

ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತಿನ ರಾಜಕೀಯ ಸನ್ನಿವೇಶಲ್ಲಿ ಎರಡು ಪಕ್ಷಕ್ಕೂ ಸಮಸ್ಯೆ ಆಗಿದೆ.ಸೋನಿಯಾಗಾಂಧಿ ಜೊತೆ ಮಾತನಾಡಿ ಒಂದು ಸಹಮತಕ್ಕೆ ಬಂದಲ್ಲಿ ಅದನ್ನು ಪರಿಗಣಿಸಲಾಗುವುದು ಎನ್ನುವ ಮೂಲಕ ದೇವೇಗೌಡ ಮೈತ್ರಿ ಮುಂದುವರೆಸುವ ಬಗ್ಗೆ ಕಾಂಗ್ರೆಸ್ ಗೆ ಪ್ರಸ್ತಾಪ ಇಟ್ಟರು.

ವೈಯಕ್ತಿಕ ದ್ವೇಷ ಬಿಟ್ಟು ಒಂದಾಗಬೇಕಿದೆ. ಮೈತ್ರಿ ಬಗ್ಗೆ ರಾಜ್ಯದ ಸ್ಥಳೀಯ ನಾಯಕರ ಮನಸಿನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಇನ್ನುಮುಂದೆ ಯಾರೂ ತಮ್ಮನ್ನು ಯಾವುದೇ ಪಕ್ಷದ ಬಿ-ಟೀಂ ಎನ್ನಬಾರದು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಗೆ ದೇವೇಗೌಡ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದರು.

ಉಪ ಚುನಾವಣೆ  ಅಥವಾ ಸಾರ್ವತ್ರಿಕ ಚುನಾವಣೆ ಯಾವುದೇ ಎದುರಾಗಲೀ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ಉಪಚುನಾವಣೆಯಲ್ಲಿ  ಕುಟುಂಬದ ಯಾವ ಸದಸ್ಯರು ಸ್ಪರ್ಧೆ ಮಾಡುವುದಿಲ್ಲ. ಕೆ.ಆರ್.ಪೇಟೆ, ಹುಣಸೂರು ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಐದು ಸುತ್ತಿನ ಮಾತುಕತೆ ನಡೆಸಲಾಗಿದೆ. ಸರ್ಕಾರ ನಮಗೆ ರಕ್ಷಣೆ ನೀಡಬೇಕು. ಭಯ ಹುಟ್ಟಿಸುವ ಮೂಲಕ ಸಫಲತೆ ಕಾಣುವ ಆಸೆಯನ್ನೇನಾದರೂ ಅವರು ಇಟ್ಟುಕೊಂಡಿದ್ದರೆ ಅದು ಸಫಲವಾಗುವುದಿಲ್ಲ. ಅದಕ್ಕೆಲ್ಲ ತಾವು ಅವಕಾಶ ನೀಡುವುದಿಲ್ಲ ಎಂದು ಅನರ್ಹ ಶಾಸಕ ಗೋಪಾಲಯ್ಯ ವಿರುದ್ಧ ಆಕ್ರೋಶ ಹೊರಹಾಕಿದರು.  

ಉಪಚುನಾವಣೆಗೆ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಹುಣಸೂರಿನ ಹಳೆಯ ಸ್ನೇಹಿತರ ಜೊತೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಹೊರಗಿನ ಅಭ್ಯರ್ಥಿಗಳಿಗೆ ಟಿಕೆಟ್ ಕೊಡದೇ ಸ್ಥಳೀಯರನ್ನೇ ಕಣಕ್ಕಿಳಿಸಬೇಕು. ಹೊರಗಿನಿಂದ ಬಂದವರು ಪಕ್ಷದಿಂದ ಗೆದ್ದ ಬಳಿಕ ಪಕ್ಷಕ್ಕೆ ದ್ರೋಹ ಎಸಗುತ್ತಾರೆ ಎಂದು ಸಭೆಯಲ್ಲಿ ಸ್ಥಳೀಯ ಮುಖಂಡರು ಪ್ರಸ್ತಾಪಿಸಿದ್ದಾರೆ ಎನ್ನುವ ಮೂಲಕ ಅನರ್ಹ ಶಾಸಕ ಹೆಚ್.ವಿಶ‍್ವನಾಥ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.  

ಹುಣಸೂರು ಕ್ಷೇತ್ರದಿಂದ ಮೊಮ್ಮಗ ಪ್ರಜ್ವಲ್ ನನ್ನು ಕಣಕ್ಕಿಳಿಸುವಂತೆಯೂ, ಹಾಸನ ಲೋಕಸಭೆಯಿಂದ ತಾವು ಮತ್ತೆ ಸಂಸತ್ ಪ್ರವೇಶಿಸುವಂತೆಯೂ ಕೆಲವರು ಸಲಹೆ ನೀಡಿದ್ದಾರೆ. ಆದರೆ ಇದಕ್ಕೆ ತಾವು ಒಪ್ಪಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುತ್ತೇನೆ. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ತಮ್ಮ ಹೆಗಲಿಗೇರಿಸಿಕೊಂಡಿದ್ದೇನೆ ಎಂದರು.
  
ಕೆ.ಆರ್.ಪೇಟೆ  ಉಪಚುನಾವಣೆಗೆ ಪಕ್ಷ ಸಂಘಟನೆ ಸಂಬಂಧ ಹೆಚ್.ಡಿ. ಕುಮಾರಸ್ವಾಮಿ ಸಭೆ ಮಾಡುತ್ತಾರೆ. ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಸಮರ್ಥ ಅಭ್ಯರ್ಥಿಯ ಆಯ್ಕೆ ಮಾಡಲಾಗುವುದು. ಅನರ್ಹ ಶಾಸಕರಿಂದ ತೆರವಾಗಿರುವ ಮೂರು ಕ್ಷೇತ್ರದಲ್ಲಿಯೂ ಪಕ್ಷ ಸಂಘಟನೆ ನಡೆಸಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿಯೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಈ ಬಗ್ಗೆ ಯಾರೂ ನಿರಾಶರಾಗಬಾರದು ಎಂದರು.  

ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಒಕ್ಕಲಿಗರ ಒಕ್ಕೂಟ ನಡೆಸಿರುವ ಪ್ರತಿಭಟನೆಗೆ ತಾವು ಸಹ ಬೆಂಬಲ ನೀಡಿದ್ದೇವೆ. ಶಿವಕುಮಾರ್ ಗೆ ಪಕ್ಷ ಬೆಂಬಲ ನೀಡಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ತಮಗೆ ಆಹ್ವಾನ ಬಂದಿತ್ತಾದರೂ ಮಾಜಿ ಪ್ರಧಾನಿಯಾಗಿರುವ ಕಾರಣ ಅದರಲ್ಲಿ ಭಾಗಿಯಾಗಲಿಲ್ಲ. ಶಾಸಕರು, ಕಾರ್ಯಕರ್ತರು, ಮಾಜಿ ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಈಗಾಗಲೇ ಕುಮಾರಸ್ವಾಮಿ ಅವರ ತಾಯಿಯನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com