ಕುಟುಂಬ ರಾಜಕೀಯದ ಸ್ಪೂರ್ತಿಯಿಂದ ರಾಜಕೀಯ ಪ್ರವೇಶಿಸಿಲ್ಲ, ಅದರ ಅನಿವಾರ್ಯತೆಯೂ ನನಗಿಲ್ಲ: ವಿಜಯೇಂದ್ರ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ರೀತಿ ತಮ್ಮ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಹಾಗೂ ಆಧಾರ ರಹಿತ ಆರೋಪಗಳನ್ನು ಮಾಡುವ ಮೂಲಕ ಕೆಲವರು ತನ್ನ ರಾಜಕೀಯ ಏಳಿಗೆಗೆ ತಡೆಯೊಡ್ಡಬೇಕೆಂಬ ಷಡ್ಯಂತ್ರ ರೂಪಿಸಿದ್ದಾರೆ ಎಂದು ಯುವ ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. 

Published: 12th September 2019 12:12 PM  |   Last Updated: 12th September 2019 12:12 PM   |  A+A-


ವಿಜಯೇಂದ್ರ ಯಡಿಯೂರಪ್ಪ

Posted By : Raghavendra Adiga
Source : UNI

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ರೀತಿ ತಮ್ಮ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಹಾಗೂ ಆಧಾರ ರಹಿತ ಆರೋಪಗಳನ್ನು ಮಾಡುವ ಮೂಲಕ ಕೆಲವರು ತನ್ನ ರಾಜಕೀಯ ಏಳಿಗೆಗೆ ತಡೆಯೊಡ್ಡಬೇಕೆಂಬ ಷಡ್ಯಂತ್ರ ರೂಪಿಸಿದ್ದಾರೆ ಎಂದು ಯುವ ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. 

ರಾಜಕೀಯವಾಗಿ ಈಗಷ್ಟೇ ಅಂಬೆಗಾಲಿಡುತ್ತಿರುವ ತಾನು, ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರೇರಣೆಗೊಂಡು, ತಂದೆ  ಬಿ.ಎಸ್. ಯಡಿಯೂರಪ್ಪನವರ ಹೋರಾಟದ ಬದುಕನ್ನು ಆದರ್ಶವಾಗಿಟ್ಟುಕೊಂಡು ಸಾರ್ವಜನಿಕ ಕ್ಷೇತ್ರದಲ್ಲಿ ಸಾರ್ಥಕ ಹೆಜ್ಜೆ ಇಡಬೇಕೆಂಬ ಹಂಬಲ ಹೊಂದಿದ್ದೇನೆ. ಹಾಗಾಗಿ, ಭಾರತೀಯ ಜನತಾ ಪಾರ್ಟಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಗುರುತಿಸಿಕೊಂಡು ಯುವ ಸಮುದಾಯದಲ್ಲಿ ಒಂದು ಆತ್ಮ ವಿಶ್ವಾಸವನ್ನು ತುಂಬಿ ರಾಷ್ಟ್ರ ಕಟ್ಟುವ ಕಾಯಕದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ ಎಂದರು.  

ನನ್ನ ನಡೆ, ನುಡಿಯಲ್ಲಿ ಏನಾದರೂ ಲೋಪ-ದೋಷ ಕಂಡಾಗ ಅದನ್ನು ತಿದ್ದುವ ಅಥವಾ ಆರೋಗ್ಯಕರ ಮನಸ್ಸಿನಿಂದ ತಿಳಿಹೇಳುವ ಮಾತುಗಳನ್ನು ಹೃನ್ಮನಸ್ಸಿನಿಂದ ಸ್ವೀಕಾರ ಮಾಡುವ ಮನೋಭಾವ ಬೆಳೆಸಿಕೊಂಡಿದ್ದೇನೆ. ಆದರೆ, ಇತ್ತೀಚಿನ ದಿನಗಳಲ್ಲಿ ಅದರಲ್ಲೂ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ನಾನು ಮುಖ್ಯಮಂತ್ರಿಗಳ ಪುತ್ರ ಎಂಬ ಒಂದೇ ಕಾರಣಕ್ಕಾಗಿ ಕೆಲ ಪಟ್ಟಭದ್ರ ಹಿತ್ತಾಸಕ್ತಿಗಳು ನನ್ನ ವಿರುದ್ಧ ರಾಜಕೀಯ ದುರುದ್ದೇಶದಿಂದ ಇಲ್ಲ ಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ದೂರಿದರು.

ಸರ್ಕಾರದ ಆಡಳಿತ ಹಾಗೂ ವರ್ಗಾವಣೆ ಪ್ರಕ್ರಿಯೆಯಲ್ಲಿ ನಾನು ಹಸ್ತಕ್ಷೇಪ ಮಾಡುತ್ತಿದ್ದೇನೆಂದು ಕೆಲವರು ವ್ಯವಸ್ಥಿತ ಅಪಪ್ರಚಾರ ಹಾಗೂ ಆಧಾರ ರಹಿತ ಆರೋಪಗಳಲ್ಲಿ  ತೊಡಗಿದ್ದಾರೆ. ಇದು ರಾಜಕಿಯ ಹತಾಶೆ ಹಾಗೂ ಅಸೂಯೆಯಲ್ಲದೆ ಬೇರೇನೂ ಅಲ್ಲ. ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ  ಉಂಟುಮಾಡುವ ಹಾಗೂ ನನ್ನ ರಾಜಕೀಯ ಏಳಿಗೆಗೆ ತಡೆಯೊಡ್ಡಬೇಕೆಂಬ ಷಡ್ಯಂತ್ರ ಈ ಅಪಪ್ರಚಾರದ ಹಿಂದಿದೆ ಎಂದು ಅತ್ಯಂತ ನೋವಿನಿಂದ ಹೇಳಬೇಕಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ನಾನು ಕುಟುಂಬ ರಾಜಕಾರಣದಿಂದ ಪ್ರೇರಿತನಾಗಿ ರಾಜಕೀಯ ಪ್ರವೇಶಿಸಿಲ್ಲ. ಬದಲಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಭಾಗದ ಜನರ ಪ್ರೀತಿಯ ಬಂಧನಕ್ಕೆ ತಲೆಬಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶ ಮಾಡಬೇಕಾಯಿತು. ಇದು ಅನಿರೀಕ್ಷಿತ ಬೆಳವಣಿಗೆ. ನಾನು ರಾಜಕೀಯ ಪ್ರವೇಶಿಸಬೇಕಾದ ಪರಿಸ್ಥಿತಿಗೆ ಕಾರಣವಾಯಿತು ಎಂದರು. 

 ಚುನಾವಣಾ ರಾಜಕೀಯಕ್ಕೆ ಮುನ್ನ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ವರಿಷ್ಠರು ನೀಡಿದ ಸೂಚನೆಯನ್ವಯ ಇಡೀ ರಾಜ್ಯದಲ್ಲಿ ಸಂಚರಿಸಿ ಪಕ್ಷ ಕಟ್ಟುವ ಕಾಯಕದಲ್ಲಿ ನಿರತನಾಗಿದ್ದೇನೆಯೇ ಹೊರತು ಅಧಿಕಾರ-ರಾಜಕಾರಣದಲ್ಲಿ ಮೂಗು ತೂರಿಸುವ ಅನಿವಾರ್ಯತೆ ನನಗಿಲ್ಲ.  ಆದರೆ, ನನ್ನಲ್ಲಿ ನಿವೇದನೆ ಮಾಡಿಕೊಳ್ಳಲು ಬರುವ ಬಡವರ, ಜನಸಾಮಾನ್ಯರ ಹಾಗೂ ಕಾರ್ಯಕರ್ತರ ನಿರೀಕ್ಷೆಗಳಿಗೆ ಪ್ರಮಾಣಿಕವಾಗಿ ಸ್ಪಂದಿಸುವುದು ನನ್ನ ಕರ್ತವ್ಯವಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ನಂತರ ಅನೀರಿಕ್ಷಿತವಾಗಿ ನಾಡಿಗೆ ಎರಗಿ ಬಂದ ‘ನೆರೆ ಹಾವಳಿ’ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ಅನೇಕರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಊರು-ಕೇರಿಗಳು ತಮ್ಮ ಮೂಲ ಸ್ವರೂಪ ಕಳೆದುಕೊಂಡು ದಿಕ್ಕೆಟ್ಟುಹೋಗಿವೆ. ಇಂತಹ ಕಡುಕಷ್ಟದ ಸಂದರ್ಭವನ್ನು ನಿಭಾಯಿಸಲು ಸರ್ಕಾರ ಹಗಲಿರುಳೆನ್ನದೆ ಶ್ರಮಿಸುತ್ತಿದೆ. ಇದರ ಜೊತೆ-ಜೊತೆಗೆ ಅಭಿವೃದ್ಧಿ ಕಾರ್ಯಗಳೂ ಸ್ಥಗಿತಗೊಳ್ಳದಂತೆ ರಾಜ್ಯ ಸರ್ಕಾರ ಕ್ರಿಯಾಶೀಲವಾಗಿಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಈ ವೇಳೆ ಸರ್ಕಾರದ ಹೆಜ್ಜೆಯೊಂದಿಗೆ ಹೆಜ್ಜೆಯನ್ನಿರಿಸಿ ಸಹಕಾರ ನೀಡಬೇಕಾದ ಕೆಲವು ಶಕ್ತಿಗಳು ಕ್ಷುಲ್ಲಕ ವಿಚಾರಗಳನ್ನು ಮುಂದು ಮಾಡಿಕೊಂಡು ಕಪೋಲಕಲ್ಪಿತವಾದ ಸುದ್ದಿಗಳನ್ನು ಹರಡುವುದರಲ್ಲಿ ನಿರತರಾಗಿರುವುದು ಲಜ್ಜೆಗೇಡಿ ರಾಜಕಾರಣದ ಪರಮಾವಧಿಯಾಗಿದೆ. ನಾಡು ಸಮೃದ್ಧಗೊಳಿಸುವ ಮೂಲಕ ‘ಪ್ರಧಾನಿ ನರೇಂದ್ರ ಮೋದಿಯವರ ಬಲಿಷ್ಠ ಭಾರತ ಕಟ್ಟುವ ಯೋಜನೆಗೆ’ ಮಹತ್ವದ ಕೊಡುಗೆ ನೀಡುವ ಛಲ ಹೊತ್ತು ದಕ್ಷ ಆಡಳಿತ ನೀಡುತ್ತಿರುವ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಸರ್ಕಾರಕ್ಕೆ ಅಪಖ್ಯಾತಿ ತರಬೇಕೆಂಬ ಹತಾಶೆಯ ಮನಸ್ಸುಗಳು ಈ ಅಪಪ್ರಚಾರದ ಮೂಂಚೂಣಿಯಲ್ಲಿರುವುದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತೀಯ ಜನತಾ ಪಾರ್ಟಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳುವ ಹಾಗೂ ಸಮಾಜದ ಸರ್ವವರ್ಗಗಳ ಜನರ ನೋವು-ನಲಿವುಗಳಿಗೆ ಸ್ಪಂದಿಸುವ ನಮ್ಮ ಉತ್ಸಾಹವನ್ನು ಯಾರೂ ಕುಗ್ಗಿಸಲಾಗದು. ಎದುರಾಗುವ ಟೀಕೆ, ಸುಳ್ಳು-ವದಂತಿಗಳಿಗೆ ಯಾವುದೇ ಮಾನ್ಯತೆ ನೀಡದೇ, ನಾನು ನಂಬಿರುವ ಪಕ್ಷದ ಸಿದ್ಧಾಂತ, ತತ್ವಗಳಿಗೆ ಬದ್ಧನಾಗಿ ಯಡಿಯೂರಪ್ಪನವರು ಸವೆಸಿದ ಹಾದಿಯಲ್ಲಿ ಸಮಾಜ ಸೇವೆಗೆ ನನ್ನನ್ನು ಸಮರ್ಪಿಸಿಕೊಂಡು ಮುನ್ನಡೆಯಲು ನಿಮ್ಮ ಆಶೀರ್ವಾದವನ್ನು ಸದಾ ನಿರೀಕ್ಷಿಸುತ್ತೇನೆ ಎಂದು ವಿಜಯೇಂದ್ರ ಯಡಿಯೂರಪ್ಪ ಹೇಳಿದರು.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp