ನಾನು ಯಾರ ಹಂಗಲ್ಲೂ ಇಲ್ಲ, ಬಿಜೆಪಿ ಪಕ್ಷದಿಂದ ಆಹ್ವಾನ ಬಂದಿಲ್ಲ: ಜಿಟಿ ದೇವೇಗೌಡ ಗರಂ

ಜೆಡಿಎಸ್​ ಪಕ್ಷದಲ್ಲಿ ತಮಗೆ ಸಾಕಷ್ಟು ನೋವು ನೀಡಿದ್ದಾರೆ. ಪಕ್ಷಕ್ಕಾಗಿ ಹಗಲಿರುಳು ದುಡಿದರೂ ಅಧಿಕಾರ ಮಾತ್ರ ತಮಗೆ ಸಿಗಲಿಲ್ಲ ಎಂದು ಮಾಜಿ ಸಚಿವ, ಶಾಸಕ ಜಿ ಟಿ ದೇವೇಗೌಡ ಬಹಿರಂಗವಾಗಿ ಜೆಡಿಎಸ್ ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವೇಗೌಡ-ಕುಮಾರಸ್ವಾಮಿ-ಜಿಟಿ ದೇವೇಗೌಡ
ದೇವೇಗೌಡ-ಕುಮಾರಸ್ವಾಮಿ-ಜಿಟಿ ದೇವೇಗೌಡ

ಮೈಸೂರು: ಜೆಡಿಎಸ್​ ಪಕ್ಷದಲ್ಲಿ ತಮಗೆ ಸಾಕಷ್ಟು ನೋವು ನೀಡಿದ್ದಾರೆ. ಪಕ್ಷಕ್ಕಾಗಿ ಹಗಲಿರುಳು ದುಡಿದರೂ ಅಧಿಕಾರ ಮಾತ್ರ ತಮಗೆ ಸಿಗಲಿಲ್ಲ ಎಂದು ಮಾಜಿ ಸಚಿವ, ಶಾಸಕ ಜಿ ಟಿ ದೇವೇಗೌಡ ಬಹಿರಂಗವಾಗಿ ಜೆಡಿಎಸ್ ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ ಪಕ್ಷದಲ್ಲಿ ತಮಗೆ ಸಾಕಷ್ಟು ನೋವಾಗಿದೆ. ತಾವು ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದೇನೆ. ಆದರೆ ಅಧಿಕಾರ ಮಾತ್ರ ನಮಗೆ ಸಿಗಲಿಲ್ಲ. ಆರಂಭದಲ್ಲಿ ಸಹಕಾರ ಖಾತೆ ಕೊಡುತ್ತೇವೆ ಎಂದರು, ಬಂಡೆಪ್ಪ ಕಾಶೆಂಪೂರ್ ಬಿಡಲಿಲ್ಲ, ಆ ಖಾತೆ ತಮಗೆ ಸಿಗುವುದನ್ನು ಅವರು ತಪ್ಪಿಸಿದರು. ಕೊನೆಗೆ ಅಬಕಾರಿ ಖಾತೆ ಕೊಡುತ್ತೇವೆ ಎಂದರು ಕೊನೆಗೆ ಅದನ್ನೂ ಕೊಡಲಿಲ್ಲ. ಸಾ.ರಾ.ಮಹೇಶಗೆ ಮೈಸೂರು ಜಿಲ್ಲಾ ಉಸ್ತುವಾರಿ ಸ್ಥಾನ ನೀಡಲು ತೀರ್ಮಾನಿಸಿದ್ದು, ಈ ಮಾಹಿತಿಯನ್ನು ಅವರ ಕುಟುಂಬ ಸದಸ್ಯರೇ ತಮಗೆ ಹೇಳಿದ ಮೇಲೆ ಅವರು ಕೊಟ್ಟ ಖಾತೆ ಒಪ್ಪಿಕೊಂಡೆ. 8ನೇ ತರಗತಿ ಓದಿರುವ ತಮಗೆ ಉನ್ನತ ಶಿಕ್ಷಣ ಖಾತೆ ಕೊಟ್ಟು ಅಪಮಾನಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್ ಪಕ್ಷದ ಕಾರ್ಯಕ್ರಮಗಳಿಗೆ ತಮಗೆ ಆಹ್ವಾನ ನೀಡುತ್ತಿಲ್ಲ. ಕರೆಯದಿರುವ ಕಾರ್ಯಕ್ರಮಗಳಿಗೆ ತಾವೇಕೆ ಹೋಗಬೇಕು?, ಹುಣಸೂರು ಉಪಚುನಾವಣೆಯಲ್ಲಿ ತಮ್ಮ ಮಗ ಹರೀಶ್ ಸ್ಪರ್ಧೆ ಮಾಡುವುದಿಲ್ಲ ಎಂಬುದನ್ನು ಪಕ್ಷದ ವರಿಷ್ಠರ ಸಮ್ಮುಖದಲ್ಲೇ ಸ್ಪಷ್ಟವಾಗಿ ಹೇಳಿದ್ದೇನೆ. ತಮ್ಮ ಸ್ವಕ್ಷೇತ್ರ ಚಾಮುಂಡೇಶ್ವರಿ ಬಿಟ್ಟು ಬೇರೆ ಕ್ಷೇತ್ರಗಳ ಬಗ್ಗೆ ತಾವು ತಲೆಕೆಡಿಸಿಕೊಂಡಿಲ್ಲ ಎಂದು ಅವರು ಹೇಳಿದರು. 

ವಿಧಾನಸಭಾ ಚುನಾವಣೆ ವೇಳೆ ಮುಖ್ಯಮಂತ್ರಿ ಅವರ ಸಮಾನ ಅಧಿಕಾರವನ್ನು ತಮಗೆ ನೀಡುವುದಾಗಿ ಭರವಸೆ ನೀಡಿದ್ದರು. ಚಾಮುಂಡೇಶ್ವರಿಯಲ್ಲಿ ಗೆದ್ದ ಬಳಿಕ ಕಂದಾಯ ಖಾತೆ‌ ನೀಡಿ ಎಂದು ಮನವಿ ಮಾಡಿದ್ದೆ. ತಾವು ಖಾತೆ ಕೇಳಿದೆವು ಎಂಬ ಕಾರಣಕ್ಕೆ ಆ ಖಾತೆಯನ್ನೇ ಜೆಡಿಎಸ್ ಉಳಿಸಿಕೊಳ್ಳಲಿಲ್ಲ. 1970 ರಿಂದಲೇ ರಾಜಕೀಯ ಕ್ಷೇತ್ರದಲ್ಲಿದ್ದೇನೆ. 1995ರಲ್ಲಿ ತಮಗೆ ದೇವೇಗೌಡರ ಪರಿಚಯವಾಯಿತು. ಹಾಗಾಗಿ ತಮಗೆ ರಾಜಕೀಯ ಗುರು ಇಲ್ಲವೆಂದು ಹೇಳಿದ್ದೇನೆ, ಅದನ್ನೇ ದೇವೇಗೌಡರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಅವರು ಆಪಾದಿಸಿದರು.

ಎಚ್.ಡಿ.ದೇವೇಗೌಡರು, ಎಚ್ ಡಿ ಕುಮಾರಸ್ವಾಮಿ ತಮ್ಮ ಗುರುವಲ್ಲ ಎಂದು ತಾವು ಎಲ್ಲಿಯೂ ಹೇಳಿಲ್ಲ. ನಾನು ಯಾರ ಹಂಗಿನಲ್ಲಿಯೂ ಇಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂದು ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದೇ ನಾನು. ಅಲ್ಲಿಂದಲೂ ತಾವು ಪಕ್ಷಕ್ಕಾಗಿ ದುಡಿದಿದ್ದೇನೆ. ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕ್ರಮ ಆಯೋಜನೆ ಮಾಡಿದರೆ ಕೆ.ಆರ್‌.ನಗರದಿಂದ ಹತ್ತು ಜನ ಕಾರ್ಯಕರ್ತರು, ಬೆಂಬಲಿಗರು ಬರುವುದಿಲ್ಲ ಎಂದು ಹೇಳುವ ಮೂಲಕ ಶಾಸಕ ಸಾ.ರಾ.ಮಹೇಶ್ ವಿರುದ್ಧ ಕಿಡಿಕಾರಿದ್ದಾರೆ.

ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಳ್ಳುವುದಲ್ಲದೆ ಪಕ್ಷದಿಂದಲೂ ದೂರವಾಗುವ ಸಂದೇಶವನ್ನು ಜಿ ಟಿ ದೇವೇಗೌಡರು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com