ಕೇಂದ್ರ ಸರ್ಕಾರ ಜೆಡಿಎಸ್‍ ಜೊತೆ ಕಾಂಗ್ರೆಸ್‍ ಪಕ್ಷವನ್ನು ಮುಗಿಸಲು ಯತ್ನಿಸುತ್ತಿದೆ-ದೇವೇಗೌಡ

ಪ್ರಾದೇಶಿಕ ಪಕ್ಷ ಜೆಡಿಎಸ್ ಜೊತೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಅನ್ನು ಕೇಂದ್ರ ಮುಗಿಸಲು ಪ್ರಯತ್ನ ನಡೆಸುತ್ತಿದ್ದು,  ಸಧ್ಯ ಕೇಂದ್ರದ ನಡವಳಿಕೆ ಹಾದಿ ತಪ್ಪಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಚ್ ಡಿ ದೇವೇಗೌಡ
ಎಚ್ ಡಿ ದೇವೇಗೌಡ

ಬೆಂಗಳೂರು:ಪ್ರಾದೇಶಿಕ ಪಕ್ಷ ಜೆಡಿಎಸ್ ಜೊತೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಅನ್ನು ಕೇಂದ್ರ ಮುಗಿಸಲು ಪ್ರಯತ್ನ ನಡೆಸುತ್ತಿದ್ದು,  ಸಧ್ಯ ಕೇಂದ್ರದ ನಡವಳಿಕೆ ಹಾದಿ ತಪ್ಪಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೆ.ಪಿ.ಭವನದಲ್ಲಿ ಇಂದು ನಡೆದ ನೆಲಮಂಗಲ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರೊಂದಿಗಿನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ತನಿಖಾ ಸಂಸ್ಥೆಯನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹಿಂದೆ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ಅವರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದರು.

ಚುನಾವಣೆ ಯಾವ ಸಂದರ್ಭದಲ್ಲಿಯಾದರೂ ಎದುರಾಗಲಿ. ಅದಕ್ಕೆ ಪಕ್ಷ ಸಿದ್ಧವಿದೆ. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಈಗಾಗಲೇ ಹಳೇ ಮೈಸೂರಿನ ಎಲ್ಲಾ ಜಿಲ್ಲೆಗಳ ಕಾರ್ಯಕರ್ತರ ಸಭೆ ನಡೆಸಲಾಗಿದ್ದು, ಇಂದು ನೆಲಮಂಗಲದ ಕಾರ್ಯಕರ್ತರ ಸಭೆ ನಡೆಸಲಾಗಿದೆ ಎಂದರು.  

ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸಹ ಸಭೆ ನಡೆಸುತ್ತಿದ್ದು, ಈಗಾಗಲೇ ಅವರು ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ. ಹಲವು ರಾಜ್ಯಗಳ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಆದರೆ ನಮ್ಮ ಪಕ್ಷದಿಂದ ಯಾರೂ ಓಡಿಹೋಗಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಪರ ಒಕ್ಕಲಿಗ ಸಮುದಾಯ ನಡೆಸಿದ ಪ್ರತಿಭಟನೆಯಲ್ಲಿ ಕುಮಾರಸ್ವಾಮಿ ಹಾಗೂ ತಾವು ಪಾಲ್ಗೊಳ್ಳದೇ ಇರುವ ಬಗ್ಗೆ ಅಪಾರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ. ವಿಚಾರಣೆಗೆ ದೆಹಲಿಗೆ ತೆರಳುವ ಮೊದಲು ಶಿವಕುಮಾರ್ ತಮ್ಮನ್ನು ಭೇಟಿಯಾಗಿದ್ದು, ಅವರಿಗೆ ಧೈರ್ಯ ಹೇಳಿ ಕಳುಸಿದ್ದೇನೆ. ಕುಮಾರಸ್ವಾಮಿ ಶಿವಕುಮಾರ್ ಅವರ ತಾಯಿಯನ್ನು ಭೇಟಿಯಾಗಿ ಸಮಧಾನ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು. 

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್ ನಡುವೆ ಸ್ವಲ್ಪ ಭಿನ್ನಾಭಿಪ್ರಾಯ ಇರಬಹುದು. ಅಂದಮಾತ್ರಕ್ಕೆ ಜಿ.ಟಿ.ದೇವೇಗೌಡ ಜೆಡಿಎಸ್ ತೊರೆಯುತ್ತಾರೆ ಎಂಬರ್ಥವಲ್ಲ. ಮೈಸೂರಿನಲ್ಲಿ ಎಲ್ಲವೂ ಪಕ್ಕಾ ಆದ ಮೇಲೆ ಮೈಸೂರಿನಲ್ಲಿ ಪಕ್ಷ ಸಂಘಟನೆ ವಿಚಾರವಾಗಿ ಮಾತನಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬ್ಯಾಂಕ್ ಗಳನ್ನು ವಿಲೀನ ಮಾಡಿ, ಉದ್ಯೋಗಿಗಳನ್ನು ಏನು ಮಾಡುತ್ತಾರೆ. ಯುಪಿಎಸ್ ಸಿ ಪರೀಕ್ಷೆಯಲ್ಲಿಯೂ ಕನ್ನಡಕ್ಕೆ ಮಾನ್ಯತೆ ನೀಡಿಲ್ಲ. ಕನ್ನಡಿಗರಿಗೆ ಕೇಂದ್ರ ಮಾಡಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು. ಈ ಹೋರಾಟಕ್ಕೆ ತಮ್ಮ ಸಂಪೂರ್ಣ ಸಹಕಾರ ಇದೆ ಎಂದರು.

ಶಾಸಕ ಡಾ. ಶ್ರೀನಿವಾಸ್ ಮೂರ್ತಿ ಮಾತನಾಡಿ, ತಾವು ಯಾವುದೇ ಕಾರಣಕ್ಕೂ ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ. ಈ ಹಿಂದೆಯೂ ಸಹ ಇದೇ ರೀತಿ ವದಂತಿ ಹಬ್ಬಿಸಲಾಗಿತ್ತು. ತಮಗೆ ನಾಯಕರಾದ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಆಶೀರ್ವಾದವಿದೆ ಎಂದು ಸ್ಪಷ್ಟಪಡಿಸಿದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com