'ಡಿ.ಕೆ. ಶಿವಕುಮಾರ್ ಜೈಲಿಗೆ ಹೋಗಲು ದೇವೇಗೌಡರು ಕಾರಣ'

ಶಿವಕುಮಾರ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲೀ ಅಥವಾ ಬಿಜೆಪಿ ನಾಯಕರ ಪಾತ್ರವಿಲ್ಲ. ಸಮುದಾಯದ ನಾಯಕನಾಗಿ ಡಿಕೆಶಿ ಬೆಳೆಯಬಾರದು ಎಂದು ಸಮುದಾಯದವರೇ ಜೈಲಿಗೆ ಕಳುಹಿಸಿದ್ದಾರೆ-ಅನರ್ಹ ಶಾಸಕ ನಾರಾಯಣ ಗೌಡ ಸ್ಪೋಟಕ ಹೇಳಿಕೆ 
'ಡಿ.ಕೆ. ಶಿವಕುಮಾರ್ ಜೈಲಿಗೆ ಹೋಗಲು ದೇವೇಗೌಡರು ಕಾರಣ'
'ಡಿ.ಕೆ. ಶಿವಕುಮಾರ್ ಜೈಲಿಗೆ ಹೋಗಲು ದೇವೇಗೌಡರು ಕಾರಣ'

ಮಂಡ್ಯ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಲು ಯಾರು ಕಾರಣ ಎಂಬುದು ಅತಿ ಶೀಘ್ರದಲ್ಲಿ ರಾಜ್ಯದ ಜನತೆಗೆ ತಿಳಿಯಲಿದೆ. ಶಿವಕುಮಾರ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲೀ ಅಥವಾ ಬಿಜೆಪಿ ನಾಯಕರ ಪಾತ್ರವಿಲ್ಲ. ಸಮುದಾಯದ ನಾಯಕನಾಗಿ ಡಿಕೆಶಿ ಬೆಳೆಯಬಾರದು ಎಂದು ಸಮುದಾಯದವರೇ ಜೈಲಿಗೆ ಕಳುಹಿಸಿದ್ದಾರೆ. ಹಾಗಿದ್ದರೆ ಡಿಕೆ ಶಿವಕುಮಾರ್ ಪರ ಗೌಡರ ಕುಟುಂಬ ಯಾಕೆ ನಿಲ್ಲುತ್ತಿಲ್ಲ ಎಂದು ಅನರ್ಹ ಶಾಸಕ ನಾರಾಯಣ ಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ. 

ಕೆ.ಆರ್.ಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರು ಒಕ್ಕಲಿಗನಾಗಿ ಹುಟ್ಟಬಾರದಿತ್ತು. ಆದರೆ ಅವರನ್ನು ಮುಖ್ಯಮಂತ್ರಿ, ಪ್ರಧಾನ ಮಂತ್ರಿಯನ್ನಾಗಿ ಮಾಡಿದ್ದು ಒಕ್ಕಲಿಗರೇ. ದೇವೇಗೌಡರು ಮೊದಲು ದೇಶ ಪ್ರೇಮಿಯಾಗಬೇಕು. ಅದನ್ನು ಬಿಟ್ಟು ಕುಟುಂಬದ ಪ್ರೇಮಿಯಾಗುವುದು ಬೇಡ ಎಂದು ಕಿವಿ ಮಾತು ಹೇಳಿದ್ದಾರೆ. 

ತಮ್ಮ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೆಂಡಮಂಡಲವಾದ ನಾರಾಯಣ ಗೌಡ, "ದೇವೇಗೌಡರೇ ನನ್ನನ್ನು ಕೆಣಕಬೇಡಿ" ಎಂದು ಎಚ್ಚರಿಸಿದರು. ಕೆ.ಆರ್.ಪೇಟೆಯಲ್ಲಿ ನಡೆದ ಜೆಡಿಎಸ್ ಕಾರ್ಯಕ್ರಮದಲ್ಲಿ ಪಕ್ಷದ ಕೆಲ ನಾಯಕರುಗಳು ತಮ್ಮ ವಿರುದ್ಧ ತುಂಬಾ ಹೀನಾಯವಾಗಿ ಮಾತನಾಡಿದ್ದಾರೆ. ಕಳೆದ ಐದು ವರ್ಷದಿಂದ ಇವರ ಕುಟುಂಬ ಹಾಗೂ ದೇವೇಗೌಡರ ಪುತ್ರಿಯರು ತಮಗೆ ಮಾನಸಿಕ ಕಿರುಕುಳ ಕೊಟ್ಟಿದ್ದಾರೆ. ಇದು ಇಡೀ ರಾಜ್ಯಕ್ಕೆ ತಿಳಿದಿದೆ. ಗೌಡರ ಕುಡಿಗಳಾದ ಅಣ್ಣ- ತಮ್ಮಂದಿರು ದೇಶಕ್ಕೆ ಏನೂ ಕೊಡುಗೆ ಕೊಟ್ಟಿಲ್ಲ. ಕುಟುಂಬಕ್ಕಷ್ಟೇ ಇವರು ಸೀಮಿತ ಎಂದು ಕುಮಾರಸ್ವಾಮಿ ಮತ್ತು ರೇವಣ್ಣ ವಿರುದ್ಧ ನಾರಾಯಣಗೌಡ ವಾಗ್ದಾಳಿ ನಡೆಸಿದರು. 

ನಾರಾಯಣಗೌಡ ಚಂಗಲು ಎಂದು ಮಾಜಿ ಸಚಿವ ರೇವಣ್ಣ ಹೇಳಿದ್ದಾರೆ. ರೇವಣ್ಣನಿಗೆ ನಾಚಿಕೆ ಆಗಬೇಕು. ಅವರು ಹೋಟೆಲ್ ಉದ್ಯಮ ಮಾಡಿಲ್ಲವೇ ? ನನಗೆ ಟಿಕೆಟ್ ಕೊಟ್ಟಿದ್ದಾದರೂ ಏಕೆ? ಮಾಜಿ ಸ್ಪೀಕರ್ ಕೃಷ್ಣ ಅವನ್ನು ಕೆ.ಆರ್.ಪೇಟೆಯಿಂದ ರಾಜಕೀಯವಾಗಿ ಮುಗಿಸಲು ತಮಗೆ ಟಿಕೆಟ್ ನೀಡಿದರು. ರೇವಣ್ಣ ಬಗ್ಗೆ ಇಡೀ ಕರ್ನಾಟಕದ ಜನರಿಗೆ ತಿಳಿದಿದೆ. ರಾಜ್ಯದ ಎಲ್ಲಾ ಗುತ್ತಿಗೆದಾರರುಗಳಿಗೆ ರೇವಣ್ಣ ಬಗ್ಗೆ ಮಾಹಿತಿ ಇದೆ. ನನಗೆ ಕೊಡುವುದು, ತೆಗೆದುಕೊಳ್ಳುವುದನ್ನು ಹೇಳಿ ಕೊಟ್ಟಿದ್ದೇ ರೇವಣ್ಣ ಎಂದು ಹೇಳುವ ಮೂಲಕ ಪರ್ಸೆಂಟೇಜ್ ಪಿತಾಮಹಾ ರೇವಣ್ಣ ಎಂದು ದೂರಿದರು. 

ದೋಸ್ತಿ ಸರ್ಕಾರದಲ್ಲಿ ರೇವಣ್ಣ ಶಾಸಕರಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದರು. ಲೋಕೋಪಯೋಗಿ ಇಲಾಖೆಯ ಅನುದಾನಕ್ಕಾಗಿ ಅವರ ಕಚೇರಿಗೆ ತೆರಳಿದರೆ ದನದ ರೀತಿ ನಮ್ಮನ್ನು ಹೆದರಿಸಿ-ಬೆದರಿಸಿ ಕಳುಹಿಸುತ್ತಿದ್ದರು. ರೇವಣ್ಣ ಸತ್ಯಹರಿಶ್ಚಂದ್ರನೇನಲ್ಲ, ದೋಸ್ತಿ ಸರ್ಕಾರ ಪತನವಾಗಲು ರೇವಣ್ಣನೇ ಕಾರಣ ಎಂದು ನಾರಾಯಣಗೌಡ ಗಂಭೀರ ಆರೋಪ ಮಾಡಿದರು. 

ಬಿಜೆಪಿಯಿಂದ ಅನರ್ಹ ಶಾಸಕರ ನಿರ್ಲಕ್ಷ್ಯ ಆರೋಪ: ಸುಪ್ರೀಂ ಕೋರ್ಟ್ ನಮ್ಮನ್ನು ಹಾಕಿಕೊಂಡು ರುಬ್ಬುತ್ತಿದೆ. ನಾವು ದುಡಿದ ದುಡ್ಡನ್ನೇ ಸುಪ್ರೀಂ ಕೋರ್ಟ್‌ ನಲ್ಲಿ ವಿಚಾರಣೆಗಾಗಿ ಖರ್ಚು ಮಾಡುತ್ತಿದ್ದೇವೆ. ಬಿಜೆಪಿ ಅವರು ನಮ್ಮ ಕಾನೂನು ಹೋರಾಟದ ಖರ್ಚಿಗೆ ಹಣ ನೀಡುತ್ತಿಲ್ಲ ಎಂದು ಹೇಳುವ ಮೂಲಕ ಆಪರೇಷನ್ ಕಮಲದ ವೇಳೆ ಹಾಕಿದ ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ನಾರಾಯಣ ಗೌಡ ಬಿಜೆಪಿ ವಿರುದ್ಧವೂ ವಾಕ್ಪ್ರಾಹಾರ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com