ಡಿಕೆಶಿ ನಡೆದುಬಂದ ಹಾದಿ: ಸಾಕಷ್ಟು ಜನರಿಗೆ ನೆರವು!

ನೋಟು ರದ್ದತಿ ವೇಳೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು ಆಗಿದ್ದು, ದೆಹಲಿಯ ಆರ್ ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ನೋಟು ರದ್ದತಿ ವೇಳೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು ಆಗಿದ್ದು, ದೆಹಲಿಯ ಆರ್ ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯ ಕಾಂಗ್ರೆಸಿನ ಪ್ರಭಾವಿ ಮುಖಂಡರಾಗಿರುವ ಡಿಕೆ ಶಿವಕುಮಾರ್, ತನ್ನದೇ ಆದ ವರ್ಚಸ್ಸಿನಿಂದ ರಾಜ್ಯದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವಂತೆ ಹೈಕಮಾಂಡ್ ಮಟ್ಟದಲ್ಲೂ ನಿಷ್ಠಾವಂತ ಎನಿಸಿಕೊಂಡಿದ್ದಾರೆ. ಟ್ರಬಲ್ ಶೂಟರ್ ಖ್ಯಾತಿಯ ಡಿಕೆ ಶಿವಕುಮಾರ್  ಕೆಲವು ದಿನಗಳಿಂದ ಇಡಿ ವಶದಲ್ಲಿದ್ದು, ಅವರ ಕಪಿಮುಷ್ಠಿಯಿಂದ ಹೊರಗೆ ಬರಲು ಕಾನೂನು ಹೋರಾಟ ನಡೆಸುತ್ತಿದ್ದಾರೆ.

ಒಂದು ಕಾಲದಲ್ಲಿ ಕಾಂಗ್ರೆಸ್ ಪಾಲಿನ ಅಪತ್ಬಾಂದವ, ಟ್ರಬಲ್ ಶೂಟರ್ ಎಂದೆಲ್ಲಾ ಖ್ಯಾತಿಯಾಗಿದ್ದ ಡಿಕೆ ಶಿವಕುಮಾರ್ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ. 

ರಾಮನಗರ, ಚೆನ್ನಪಟ್ಟಣಗಳಿಗೆ ಹೊಂದಿಕೊಂಡಂತೆ ಇರುವ ಕನಕಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಡಿಕೆ ಶಿವಕುಮಾರ್ , 2018 ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ  730 ಕೋಟಿ ರೂ. ಮೊತ್ತದ ಆಸ್ತಿಪಾಸ್ತಿಯನ್ನು ಘೋಷಿಸಿಕೊಂಡಿದ್ದರು. ತಮ್ಮದ್ದು ಸಮಾಜ ಸೇವಕ ವೃತ್ತಿ ಎಂದು ತೋರಿಸಿಕೊಂಡಿದ್ದರು.

ಪ್ರಭಾವಿ ಒಕ್ಕಲಿಗ ಸಮುದಾಯದಲ್ಲಿ ಜನಿಸಿದ ಡಿಕೆ ಶಿವಕುಮಾರ್, ಕಾಲೇಜು ದಿನಗಳಿಂದಲೂ ಕಾಂಗ್ರೆಸ್ ನಲ್ಲಿಯೇ ಇದ್ದಾರೆ. 1983 ಹಾಗೂ 1985ರ ನಡುವೆ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. 1987ರಲ್ಲಿ ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರು.

1985ರಲ್ಲಿ 25 ವಯಸ್ಸಿನಲ್ಲಿ ದೇವೇಗೌಡರ ವಿರುದ್ಧ ಕಣಕ್ಕಿಳಿದಿದ್ದ ಡಿಕೆಶಿ, ಕಡಿಮೆ ಅಂತರದಿಂದ ಸೋಲನ್ನುಭವಿಸಿದ್ದರು.  ಆದರೆ, ಎರಡು ಕಡೆ ಗೆದ್ದಿದ್ದ ದೇವೇಗೌಡರು ಸಾತನೂರು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಉಪ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಗೆದ್ದು, ದೇವೇಗೌಡ ಕುಟುಂಬದ ವಿರುದ್ಧ ತೊಡೆ ತಟ್ಟಲು ಆರಂಭಿಸಿದರು. ನಂತರ 1989ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ದೇವೇಗೌಡರ ವಿರುದ್ಧ ನಿಂತು ಸೋತರು. ಆದರೂ, ಬೆಂಗಳೂರಿಗೆ ಹೊಂದಿಕೊಂಡಂತೆ ಇರುವ ಗ್ರಾಮಾಂತರ ಪ್ರದೇಶಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುವಲ್ಲಿ ಡಿಕೆಶಿ ಯಶಸ್ವಿಯಾದರು. 

ಈ ಸಂದರ್ಭದಲ್ಲಿ ಭೂಮಿ ಮೇಲೆ ಏರಿಕೆಯಿಂದಾಗಿ ಡಿಕೆಶಿ ಮೈನಿಂಗ್ ಜೊತೆಗೆ ಇನ್ನಿತರ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಶುರು ಮಾಡಿದರು. ನಂತರ 1989ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಗೆಲುವು ಸಾಧಿಸಿದರು. ಇದಾದ ಎರಡು ವರ್ಷಗಳಲ್ಲಿಯೇ  ಎಸ್ ಬಂಗಾರಪ್ಪ ಅವರ ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದರು.

ನಂತರ ಎಸ್ ಎಂಕೃಷ್ಣ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಡಿಕೆಶಿ, ಇತ್ತೀಚಿಗೆ ಮೃತಪಟ್ಟ ಎಸ್ ಎಂಕೃಷ್ಣ ಅಳಿಯ ಸಿದ್ದಾರ್ಥ್ ಅವರ ಕೆಫೆ ಕಾಫಿ ಡೇ ನಲ್ಲಿ ಹೂಡಿಕೆ ಮಾಡಿದ್ದರು. ನಂತರ ಈವರೆಗೂ ಏಳು ಬಾರಿ ನಿರಂತರವಾಗಿ ಡಿಕೆಶಿ ಗೆಲ್ಲುತ್ತಾ ಬಂದಿದ್ದಾರೆ. ವ್ಯವಹಾರದ ಜೊತೆಗೆ ಶಿವಕುಮಾರ್ ರಾಜಕೀಯವಾಗಿ ಪಕ್ಷಕ್ಕೆ ನಿಷ್ಠೆ ವ್ಯಕ್ತಪಡಿಸುತ್ತಾ ಬಂದಿದ್ದಾರೆ. 

2002ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ದಿವಂಗತ ವಿಲಾಸ್ ರಾವ್ ದೇಶ್ ಮುಖ್ ಸರ್ಕಾರ ಅವಿಶ್ವಾಸ ನಿರ್ಣಯ ಎದುರಿಸುವ ಸಂದರ್ಭ ಬಂದಾಗ ಡಿಕೆಶಿ ಅಲ್ಲಿನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ ಗೆ ತರೆತಂದಿದ್ದರು.ಗುಜರಾತ್ ನಿಂದ ರಾಜ್ಯಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಅಲ್ಲಿನ 44 ಶಾಸಕರನ್ನು ಬೆಂಗಳೂರಿಗೆ ಕರೆತಂದು ಅಹ್ಮದ್ ಪಟೇಲ್ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

2018ರ ರಾಜ್ಯವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿ ಡಿಕೆಶಿವಕುಮಾರ್ ಮಹತ್ವದ ಪಾತ್ರ ವಹಿಸಿದ್ದರು. ಈ ಕಾರ್ಯಾಚರಣೆಯಲ್ಲಿ ಡಿಕೆ ಶಿವಕುಮಾರ್  ಅಮಿತ್ ಶಾ ಅವರನ್ನೇ ಸೋಲಿಸಿದ್ದರು. 

ಇಂತಹ ಹಿನ್ನೆಲೆಯನ್ನು ಹೊಂದಿರುವ ಡಿಕೆ ಶಿವಕುಮಾರ್ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಆದರೂ, ಸಾಕಷ್ಟು ಜನರಿಗೆ ಉಪಯೋಗವಾಗಿದ್ದಾರೆ. ಒಟ್ಟಾರೇ, ಡಿಕೆ ಶಿವಕುಮಾರ್  ಫಿನಿಕ್ಸ್ ನಂತೆ ಮತ್ತೆ ಕಾನೂನು ಹೋರಾಟದಲ್ಲಿ ಗೆದ್ದು ಬರುತ್ತಾರಾ?ಅಥವಾ ರಾಜಕೀಯ ಭವಿಷ್ಯ ಮಂಕಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com