ರಾಮನಗರದಿಂದ ಫಿಲಂ ಸಿಟಿ ಸ್ಥಳಾಂತರಕ್ಕೆ ಮುಂದಾದ ಸಿಎಂ ಯಡಿಯೂರಪ್ಪ: ಎಚ್‍ಡಿಕೆ ಕಿಡಿ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉದ್ದೇಶಿತ ಫಿಲಂ ಸಿಟಿಯನ್ನು ರಾಮನಗರದಿಂದ ಸ್ಥಳಾಂತರಿಸಿ ಜೀವವೈವಿಧ್ಯತೆಯ ತಾಣ ಬನ್ನೇರುಘಟ್ಟ ಸಮೀಪದ ದೇವಿಕಾರಾಣಿ-ರೋರಿಚ್ ಎಸ್ಟೇಟ್ ನಲ್ಲಿ ನಿರ್ಮಿಸುವ....
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉದ್ದೇಶಿತ ಫಿಲಂ ಸಿಟಿಯನ್ನು ರಾಮನಗರದಿಂದ ಸ್ಥಳಾಂತರಿಸಿ ಜೀವವೈವಿಧ್ಯತೆಯ ತಾಣ ಬನ್ನೇರುಘಟ್ಟ ಸಮೀಪದ ದೇವಿಕಾರಾಣಿ-ರೋರಿಚ್ ಎಸ್ಟೇಟ್ ನಲ್ಲಿ ನಿರ್ಮಿಸುವ ಯೋಜನೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರ ಯಡಿಯೂರಪ್ಪರ ದ್ವೇಷ-ನಾಶದ ರಾಜಕಾರಣದ ಪ್ರತೀಕವಾಗಿದೆ ಎಂದಿದ್ದಾರೆ.

ರಾಮನಗರದಲ್ಲಿ ಚಿತ್ರನಗರಿ ನಿರ್ಮಿಸಬೇಕೆಂದು ತಮ್ಮ ಸರ್ಕಾರದಲ್ಲಿ ತೀರ್ಮಾನಿಸಲಾಗಿತ್ತು. ಈ ಮೂಲಕ ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿಸುವುದು ಉದ್ದೇಶವಾಗಿತ್ತು. ಆದರೆ ರಾಮನಗರದಿಂದ ರೋರಿಚ್ ಗೆ ಚಿತ್ರನಗರಿಯನ್ನು ಸ್ಥಳಾಂತರಿಸುವ ನಿರ್ಧಾರದ ಮೂಲಕ ಯಡಿಯೂರಪ್ಪ ರಾಮನಗರ ವಿಚಾರದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಹೊರವಲಯದಲ್ಲಿ ಅತಿಕ್ರಮಣಕ್ಕೆ ತುತ್ತಾಗದೇ ಜೀವವೈವಿಧ್ಯ ಉಳಿಸಿಕೊಂಡಿರುವ ತಾಣ ರೋರಿಚ್ ಎಸ್ಟೇಟ್. ಈ ತಾಣ ಫಿಲಂಸಿಟಿ ನಿರ್ಮಾಣಕ್ಕೆ ಸೂಕ್ತವಲ್ಲ. ಇಲ್ಲಿ ಚಿತ್ರನಗರಿ ನಿರ್ಮಾಣ ಮಾಡಿದಲ್ಲಿ ಪರಿಸರ ನಾಶದ ಜತೆಗೆ ಮಾನವ ಹಾಗೂ ವನ್ಯಮೃಗಗಳ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ ಎಂದಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಿಸುವುದಾಗಿ ಬಜೆಟ್‍ನಲ್ಲಿ ಘೋಷಿಸಿತ್ತು. ಬಳಿಕ ಕಾಂಗ್ರೆಸ್‍-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಚಿತ್ರನಗರಿ ಮೈಸೂರಿನಿಂದ ರಾಮನಗರಕ್ಕೆ ಸ್ಥಳಾಂತರಿಸಲು ಬಜೆಟ್ ನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದರು. ಅಲ್ಲದೇ ರಾಮನಗರದಲ್ಲಿ ಚಲನಚಿತ್ರ ವಿಶ‍್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಹೇಳಿದ್ದರು.

ಇದೀಗ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಫಿಲಂಸಿಟಿಯನ್ನು ರಾಮನಗರದಿಂದ ರೋರಿಚ್ ಎಸ್ಟೇಟ್‍ಗೆ ಸ್ಥಳಾಂತರಿಸಲು ಮುಂದಾಗಿದೆ.

ಕೆಲವು ದಿನಗಳ ಹಿಂದೆ ಕಳೆದ ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿಗೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸರ್ಕಾರ ವರ್ಗಾಯಿಸುವ ಮೂಲಕ ಕಾಂಗ್ರೆಸ್‍ ಮುಖಂಡ ಡಿ.ಕೆ.ಶಿವಕುಮಾರ್ ಆಸೆಗೆ ತಣ್ಣೀರೆರಚಿತ್ತು. ಇದೀಗ ಹೆಚ್.ಡಿ.ಕುಮಾರಸ್ವಾಮಿ ಕನಸಿನ ರಾಮನಗರದಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಸರ್ಕಾರಕ್ಕೆ ತಣ್ಣೀರೆಚುವ ಪ್ರಯತ್ನ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com