ಫಿಲ್ಮಂ ಸಿಟಿ ಸ್ಥಳಾಂತರಕ್ಕೆ ಸಿದ್ದರಾಮಯ್ಯ ವಿರೋಧ: ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ

ಫಿಲ್ಮಂ ಸಿಟಿ ಯೋಜನೆಯನ್ನು ಸ್ಥಳಾಂತರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರನಗರಿ ಸ್ಥಳಾಂತರ ಮಾಡಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Published: 20th September 2019 09:27 PM  |   Last Updated: 20th September 2019 09:27 PM   |  A+A-


Siddaramaiah

ಸಿದ್ದರಾಮಯ್ಯ

Posted By : Vishwanath S
Source : UNI

ಬೆಂಗಳೂರು: ಫಿಲ್ಮಂ ಸಿಟಿ ಯೋಜನೆಯನ್ನು ಸ್ಥಳಾಂತರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರನಗರಿ ಸ್ಥಳಾಂತರ ಮಾಡಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಮನಗರದಿಂದ ಫಿಲ್ಮಂ ಸಿಟಿಯನ್ನು ಸ್ಥಳಾಂತರ ಮಾಡಿ ದೇವಿಕಾರಾಣಿ-ರೋರಿಚ್ ಎಸ್ಟೇಟ್ ನಲ್ಲಿ ಚಿತ್ರನಗರಿ ನಿರ್ಮಾಣ ಮಾಡುವುದಾಗಿ ಇತ್ತೀಚೆಗೆ ಕಾರ್ಯಕ್ರಮದಲ್ಲಿ ಪ್ರಕಟಿಸಿದ್ದರು.

ಮುಖ್ಯಮಂತ್ರಿ ಅವರ ಹೇಳಿಕೆ ಬಗ್ಗೆ ಯುಎನ್ಐ ಕನ್ನಡ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉದ್ದೇಶಿತ ಚಿತ್ರನಗರಿ (ಫಿಲ್ಮಂ ಸಿಟಿ)ಯನ್ನು ರಾಮನಗರದಿಂದ ಕನಕಪುರ ರಸ್ತೆಯ ದೇವಿಕಾರಾಣಿ-ರೋರಿಚ್ ಎಸ್ಟೇಟ್ ಗೆ ಸ್ಥಳಾಂತರ ಮಾಡಲು ಹೊರಟಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತೀರ್ಮಾನ ಸರಿಯಲ್ಲ. ಯಾವುದೇ ಕಾರಣಕ್ಕೂ ಚಿತ್ರನಗರಿಯನ್ನು ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಬಾರದು. ಮೈಸೂರು ನಗರಿಯಲ್ಲಿಯೇ ಫಿಲ್ಮಂ ಸಿಟಿ ನಿರ್ಮಾಣವಾಗಬೇಕು ಎನ್ನುವುದು ಬಹುತೇಕ ಕಲಾವಿದರ ಅಭಿಪ್ರಾಯವಾಗಿದೆ ಎಂದರು.

ಸಾಂಸ್ಕೃತಿಕ ಹಿನ್ನಲೆಯುಳ್ಳ ಮೈಸೂರಿನಿಂದಲೇ ಚಿತ್ರರಂಗಕ್ಕೆ ಬಹಳಷ್ಟು ಮೇರು ಕಲಾವಿದರು ಬಂದಿದ್ದಾರೆ. ಈ ಬಗ್ಗೆ ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿಯೇ ಕಾಂಗ್ರೆಸ್ ಸರ್ಕಾರದಲ್ಲಿ ಮೈಸೂರಿನಲ್ಲಿ ಫಿಲ್ಮಂ ಸಿಟಿ  ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ ಸುಮಾರು 110 ಎಕರೆ ಜಮೀನನ್ನು ಸಹ ಮಂಜೂರು ಮಾಡಿ 25 ಕೋಟಿ ರೂ ಅನುದಾನವನ್ನು ನೀಡಲಾಗಿತ್ತು.ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ಕಾಮಗಾರಿಗಳು ಕೆಲಸಗಳು ಆರಂಭವಾಗಿವೆ ಎಂದರು.

ಯಾವುದೇ ಕಾರಣಕ್ಕೂ ಮೈಸೂರಿನಿಂದ ಇದು ಸ್ಥಳಾಂತರವಾಗಬಾರದು. ಇದನ್ನು ಸ್ಥಳಾಂತರ ಮಾಡಲು ಬರುವುದಿಲ್ಲ.ಬೆಂಗಳೂರಿಗೆ ಚಿತ್ರನಗರಿ ಅವಶ್ಯಕತೆಯಿಲ್ಲ. ಇಲ್ಲಿ ಬೇಕಿದ್ದರೆ ಚಲನಚಿತ್ರ ವಿಶ್ವ ವಿದ್ಯಾಲಯ ನಿರ್ಮಿಸಲಿ. ಆದರೆ ಫಿಲ್ಮಂ ಸಿಟಿ ಬೇಡ. ಒಂದುವೇಳೆ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿದ್ದೇ ಆದಲ್ಲಿ ಅದನ್ನು ತೀವ್ರವಾಗಿ ಪ್ರತಿಭಟಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಖಡಕ್ ಆಗಿಯೇ ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮೈಸೂರಿನಲ್ಲಿ ಫಿಲ್ಮಂ ಸಿಟಿ ನಿರ್ಮಿಸಲು ಬಜೆಟ್ ನಲ್ಲಿ ಘೋಷಿಸಲಾಗಿತ್ತಾದರೂ ಸರ್ಕಾರ ಬದಲಾದಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಮನಗರಕ್ಕೆ ಸ್ಥಳಾಂತರಿಸಿ ಘೋಷಿಸಿದ್ದರು. ಚಿತ್ರನಗರಿಯ ಜೊತೆಗೆ ಚಲನಚಿತ್ರ ವಿಶ್ವವಿದ್ಯಾಲಯವನ್ನೂ ಮಾಡುವುದಾಗಿ ಘೋಷಿಸಿದ್ದರು.ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ, ಮೈಸೂರಿನಲ್ಲಿ ದಿವಂಗತ ನಟ ವಿಷ್ಮುವರ್ಧನ್, ಹಿರಿಯ ನಟ ದಿವಂಗತ ಅಂಬರೀಶ್ ಆಸೆಯಂತೆ ಮೈಸೂರಿನಲ್ಲಿಯೇ ಫಿಲ್ಮಂ ಸಿಟಿ ನಿರ್ಮಿಸಬೇಕೆಂಬ ಮಹದಾಸೆಯನ್ನು ನಮ್ಮ ಸರ್ಕಾರ ಕಾರ್ಯರೂಪಕ್ಕೆ ತಂದಿತ್ತು ಎಂದು ಹೇಳಿದ್ದರು.

ಇದೀಗ ಚಿತ್ರನಗರಿಯನ್ನು ದೇವಿಕಾರಾಣಿ ರೋರಿಚ್ ಎಸ್ಟೇಟ್ ಗೆ ಸ್ಥಳಾಂತರಕ್ಕೆ ಸರ್ಕಾರ ಯೋಜನೆ ರೂಪಿಸಿದ್ದು,ರಾಜ್ಯ ಸರ್ಕಾರದ ತೀರ್ಮಾನದ ವಿರುದ್ಧ ಬುದ್ದಿಜೀವಿಗಳು, ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮತ್ತಷ್ಟು ಕೆರಳಿಸಿದೆ.

Stay up to date on all the latest ರಾಜಕೀಯ news
Poll
HD Kumaraswamy

ಹಿಂದಿ ಗೊತ್ತಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಭಾರತದ ನಾಯಕರಿಗೆ ದಕ್ಷಿಣದವರಿಗಿಂತ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp