ಉಪ ಚುನಾವಣೆಗೆ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸುವುದಿಲ್ಲ: ಕುಮಾರಸ್ವಾಮಿ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರೇ ಕಾರಣವೇ ಹೊರತು ಜೆಡಿಎಸ್ ಮೈತ್ರಿ ಅಲ್ಲ. ಎಲ್ಲವೂ ಸಿದ್ದರಾಮಯ್ಯ ಅವರ ಸ್ವಯಂಕೃತ ಅಪರಾಧ ಎಂದು ಮಾಜಿ...
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರೇ ಕಾರಣವೇ ಹೊರತು ಜೆಡಿಎಸ್ ಮೈತ್ರಿ ಅಲ್ಲ. ಎಲ್ಲವೂ ಸಿದ್ದರಾಮಯ್ಯ ಅವರ ಸ್ವಯಂಕೃತ ಅಪರಾಧ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಇಂದು ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಕಾಂಗ್ರೆಸ್ ಸೋಲು ಸಿದ್ದರಾಮಯ್ಯ ಅವರ ಸ್ವಯಂಕೃತ ಅಪರಾಧ. ಮಂಡ್ಯದಲ್ಲಿ ಬಿಜೆಪಿ ನಾಯಕರ ಜೊತೆ ಸೇರಿ ಸಿದ್ದರಾಮಯ್ಯ ಏನೇನು ಮಾಡಿದ್ದಾರೆ? ಮಾಡುತ್ತಿದ್ದಾರೆ ಎಂಬುದೆಲ್ಲವೂ ತಮಗೆ ಗೊತ್ತಿದೆ. ಮಂಡ್ಯದಲ್ಲಿ ಕಬ್ಬು ಬೆಳೆಗಾರರು ಸಾಯುತ್ತಿದ್ದಾರೆ. ರೈತರ ರಕ್ಷಣೆಗೆ ಬಾರದ ಸಿದ್ದರಾಮಯ್ಯ ಅವರ ಸ್ವಾಭಿಮಾನ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ಇದು ಆಪರೇಷನ್ ಕಮಲದ ಎರಡನೇ ಆವೃತ್ತಿ ಇದಾಗಿದ್ದು 2008ರಲ್ಲಿ ಒಮ್ಮೆ ಈ ರೀತಿ ನಡೆದಿತ್ತು. ಈಗ 2019ರಲ್ಲಿ ಮತ್ತೆ ನಡೆದಿದೆ. ಅಧಿಕಾರಕ್ಕಾಗಿ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ 15  ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಪಕ್ಷ ಚುನಾವಣೆ ಎದುರಿಸಲು ಎಲ್ಲಾ ರೀತಿಯಲ್ಲಿ ಸಜ್ಜಾಗಿದೆ. ಎಲ್ಲಾ ಜಿಲ್ಲೆಗಳ ಮುಖಂಡರ ಸಭೆಯನ್ನು ಈಗಾಗಲೇ ಜೆಡಿಎಸ್ ವರಿಷ್ಠರು ನಡೆಸಿದ್ದಾರೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಗುರುತಿಸಿ ಇನ್ನು ಎರಡು ದಿನಗಳಲ್ಲಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗುವುದು‌. ದೇವೇಗೌಡರ ಕುಟುಂಬ ಈತನಕ ಅನುಭವಿಸಿರುವ ನೋವು ಸಾಕಾಗಿದೆ. ಉಪ ಕದನವಾಗಲಿ, ಬೃಹತ್ ಕದನ ನಡೆಯಲಿ ಕುಟುಂಬದಿಂದ ಇನ್ಯಾರು ಸ್ಪರ್ಧಿಸುವುದಿಲ್ಲ ಎಂದು  ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಬಿಜೆಪಿ ಆಡಳಿತದಿಂದ ಜನರು ಈಗಾಗಲೇ ಬೇಸತ್ತಿದ್ದಾರೆ. ನೆರೆ ವಿಷಯದಲ್ಲಿ ಬಿಜೆಪಿ ನಡೆ ಜನರಲ್ಲಿ ಆಕ್ರೋಶ ಮೂಡಿಸಿದೆ. ಕಾಂಗ್ರೆಸ್ ನಾಯಕರ ಕಿತ್ತಾಟದಿಂದಲೂ ಜನರು ಬೇಸತ್ತಿದ್ದಾರೆ. ಹೀಗಾಗಿ ಪಕ್ಷದ ಪರ ಜನರಿಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಲಾಗುವುದು ಎಂದರು.

ಉಪಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ‌ ಜೆಡಿಎಸ್ ಹೆಚ್ಚು ಸ್ಥಾನದಲ್ಲಿ  ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈತ್ರಿ ಸರ್ಕಾರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದ್ದು. ಸಾಲಮನ್ನಾ, ಋಣಮುಕ್ತ, ಬಡವರ ಬಂಧು ಕಾಯಿದೆಯನ್ನು ಬಿಜೆಪಿ ಸರ್ಕಾರ ಸರಿಯಾಗಿ ಜಾರಿಗೊಳಿಸುತ್ತಿಲ್ಲ. ಬಡವರ ವಿರೋಧಿಯಾಗಿರುವ ಬಿಜೆಪಿ ಬಡ್ಡಿ ತೆಗೆದುಕೊಳ್ಳುವವರಿಗೆ ಅನುಕೂಲ ‌ಮಾಡಿಕೊಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ವೈಫಲ್ಯ ಹಾಗೂ ಪಕ್ಷದ ಅಭಿವೃದ್ಧಿ ಯೋಜನೆಗಳನ್ನು ಜನರ ಮುಂದಿಟ್ಟು ಚುನಾವಣೆ ಎದುರಿಸಲಾಗುವುದು. ಕಳೆದ ಲೋಕಸಭೆ ಚುನಾವಣೆಯಲ್ಲಿ ಶಕ್ತಿ ಮೀರಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ನೆರವು ನೀಡಿ ಹೃದಯ ವೈಶಾಲ್ಯ ಮೆರೆದರೂ ಕಾಂಗ್ರೆಸ್ ನಾಯಕರಿಂದ ಅಗತ್ಯ ಸಹಕಾರ ದೊರೆಯಲಿಲ್ಲ. ಹೀಗಾಗಿ ಯಾರ ಸಹವಾಸವೂ ಬೇಡ ಎಂದು ನಿರ್ಧರಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ತುಮಕೂರಿನಲ್ಲಿ ದೇವೇಗೌಡರ ಸೋಲು, ಮಂಡ್ಯದಲ್ಲಿ ಪುತ್ರ ನಿಖಿಲ್ ಸೋಲಿಗೆ ನಾವೇ ಹೊಣೆ ಎನ್ನುವುದಾದರೆ ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ಅವರ ಸೋಲಿಗೆ ಕಾರಣ ಯಾರು? ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಸಿದ್ದರಾಮಯ್ಯ ಅವರೇ ಎಲ್ಲಾ ಸೋಲಿಗೂ ಕಾರಣ ಎಂದರು.

ಸಿದ್ದರಾಮಯ್ಯ ಅವರನ್ನು ಸಾಕಿದ ಗಿಣಿಗಳೇ‌ ಕುಕ್ಕಿವೆ ಎಂದು ಹೇಳುವವರು ಕೋಲಾರದಲ್ಲಿ ಮುನಿಯಪ್ಪ ಅವರನ್ನು ಕುಕ್ಕಿದ್ದು ಯಾರು ಎಂದು ಹೇಳಲಿ ಎಂದು ಕುಮಾರಸ್ವಾಮಿ ಪರೋಕ್ಷವಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com