ಬಿಜೆಪಿಗೆ ಕಗ್ಗಂಟಾದ ಹೊಸಕೋಟೆ: ಶರತ್ ಬಚ್ಚೇಗೌಡ ಬಂಡಾಯದ ಸೂಚನೆ

ರಾಜ್ಯದಲ್ಲಿ ವಿಧಾನಸಭಾ ಉಪಚುನಾವಣಾ ಅಖಾಡ ಸಜ್ಜುಗೊಂಡಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್​ ಪಕ್ಷಗಳು ಸಿದ್ಧತೆ ಮಾಡಿಕೊಳ್ಳಲಾರಂಭಿಸಿವೆ. ನಾಮಪತ್ರ ಸಲ್ಲಿಸಲು ಕೇವಲ 6 ದಿನ ಬಾಕಿ ಇರುವುದರಿಂದ ಟಿಕೆಟ್​ ಆಕಾಂಕ್ಷಿಗಳು,
ಶರತ್ ಬಚ್ಚೇಗೌಡ
ಶರತ್ ಬಚ್ಚೇಗೌಡ

ಬೆಂಗಳೂರು: ಉಪಚುನಾವಣಾ ಸಮರಕ್ಕೆ ಸಜ್ಜಾಗಿರುವ ಬೆನ್ನಲ್ಲೆ ಬಂಡಾಯದ ಬಿಸಿಯೂ ಬಿಜೆಪಿಗೆ ತಟ್ಟಿದೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ ಬಿ.ಫಾರಂ? ನೀಡಬೇಕು ಎಂಬ ಕಗ್ಗಂಟು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಎದುರಾಗಿದ್ದು, ಬಿಜೆಪಿ ಆಕಾಂಕ್ಷಿ ಶರತ್ ಬಚ್ಚೇಗೌಡ ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸೆ 30 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಇನ್ನು ಮೂರು ದಿನಗಳೊಳಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸಬೇಕಾಗಿದೆ. ಆದರೆ ಯಾರನ್ನು ಅಂತಿಮಗೊಳಿಸಬೇಕೆಂಬ ಜಿಜ್ಞಾಸೆ ಕಮಲ ಪಾಳಯದಲ್ಲಿ ಎದ್ದುಕಾಣುತ್ತಿದೆ.

ಕಾಂಗ್ರೆಸ್ ಅನರ್ಹ ಶಾಸಕ ಎಂಟಿಬಿ ನಾಗರಾಜ್ ರಾಜೀನಾಮೆಯಿಂದ ತೆರವಾಗಿರುವ ಹೊಸಕೋಟೆ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಚುನಾವಣಾ ರಾಜಕೀಯದಿಂದ‌ ನಿವೃತ್ತಿ ಘೋಷಿಸಿರುವ ಎಂಟಿಬಿ,  ಪುತ್ರ ನಿತಿನ್‌ ರಾಜಕೀಯ ಭವಿಷ್ಯಕ್ಕಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಸರ್ಕಾರ ರಚನೆಗೆ ಸಹಕರಿಸಿದಕ್ಕಾಗಿ ನೀಡಿದ ಭರವಸೆಯಿಂದ ಪುತ್ರ ನಿತಿನ್ ಗೆ ಹೊಸಕೋಟೆಯಿಂದ ಬಿಜೆಪಿ ಚಿಹ್ನೆಯಡಿ ಕಣಕ್ಕಿಳಿಸುವಂತೆ ಎಂಟಿಬಿ ಪಟ್ಟು ಹಿಡಿದಿದ್ದಾರೆ.

ಇತ್ತ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿರುವ ಶರತ್ ಬಚ್ಚೇಗೌಡ ಸಹ ಟಿಕೆಟ್ ನೀಡುವಂತೆ ಯಡಿಯೂರಪ್ಪ ಮೇಲೆ ಒತ್ತಡ ಹೇರಿದ್ದಾರೆ. ವಲಸೆ ಬಂದವರಿಗೆ ಆದ್ಯತೆ ನೀಡಬಾರದು‌ ಎಂದು ಮನವಿ ಮಾಡಿದ್ದಾರೆ.

ಮಂಗಳವಾರ ಬೆಳಿಗ್ಗೆ ಎಂಟಿಬಿ ಹಾಗೂ ಶರತ್‌ಬಚ್ಚೇಗೌಡ ಪ್ರತ್ಯೇಕವಾಗಿ ಯಡಿಯೂರಪ್ಪ ಅವರನ್ನು ಧವಳಗಿರಿ ನಿವಾಸದಲ್ಲಿ ಬೆಂಬಲಿಗರೊಂದಿಗೆ ಭೇಟಿ ನಡೆಸಿ, ಟಿಕೆಟ್ ನೀಡುವಂತೆ ಒತ್ತಡ ಹೇರಿದರು.

ಹೊಸಕೋಟೆಯಿಂದ ಶರತ್ ಬಚ್ಚೇಗೌಡಗೆ ಟಿಕೇಟ್ ನೀಡುವಂತೆ ಒತ್ತಾಯಿಸಿದ ಬೆಂಬಲಿಗರು ಯಡಿಯೂರಪ್ಪ ವಿರುದ್ಧ ಧಿಕ್ಕಾರ ಕೂಗುತ್ತಾ ಅವರ ನಿವಾಸಕ್ಕೆ  ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು.

ಆಗ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಐವರಿಗೆ ಮಾತ್ರ ಮನೆಯೊಳಗೆ ಹೋಗಲು ಪೊಲೀಸರು ಅವಕಾಶ ಮಾಡಿಕೊಟ್ಟರು.ಸಂಸದ ಬಚ್ಚೇಗೌಡರ ಸಹೋದರ ಗೋಪಾಲ ಗೌಡ, ಹೋಸಕೋಟೆ ಬಿಜೆಪಿ ಅಧ್ಯಕ್ಷ, ಹೊಸಕೋಟೆ ಗ್ರಾಮಾಂತರ ಅಧ್ಯಕ್ಷ  ಉಲ್ಲೂರು ಸಿ ಮಂಜುನಾಥ್ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ನಡೆಸಿತು.

ಭೇಟಿ ಸಂದರ್ಭದಲ್ಲಿ ಯಡಿಯೂರಪ್ಪ,ಶರತ್ ಬಚ್ಚೇಗೌಡ ಬೆಂಬಲಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಎಂಟಿಬಿ ನಾಗರಾಜ್ ಗೆ ಸಹಕರಿಸುವಂತೆ ತಾಕೀತು ಮಾಡಿದರು. ಅನರ್ಹರ ಬೆಂಬಲದಿಂದ ಸರ್ಕಾರ‌ ರಚನೆಯಾಗಿದ್ದು, ಅವರ ಕೈಹಿಡಿಯಲು ಪಕ್ಷ ನಿರ್ಧರಿಸಿದೆ. ಹೊಸಕೋಟೆಯಿಂದ ಎಂಟಿಬಿ ಪುತ್ರನಿಗೆ ಟಿಕೆಟ್ ಕೊಡಲು ನಿರ್ಧರಿಸಿದ್ದೇವೆ. ಎಲ್ಲರೂ ಒಗ್ಗೂಡಿ ಪಕ್ಷವನ್ನು ಗೆಲ್ಲಿಸಬೇಕು.ವಿನಾಕಾರಣ ಗಲಾಟೆ ಗೊಂದಲಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.

ತಮ್ಮ ಮನವಿಗೆ ಸ್ಪಂದಿಸದ ಕಾರಣ ಶರತ್ ಬಚ್ಚೇಗೌಡ ಬೆಂಬಲಿಗರು ಬೇಸರಗೊಂಡು ಹೊರಬಂದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೋಪಾಲಗೌಡ, ಎಂಟಿಬಿ‌ ನಾಗರಾಜ್ ಗಾಗಿ ನಮ್ಮ ಪಕ್ಷದ ನಾಯಕರು ತಮ್ಮ ಮಗನಿಗೆ ಮೋಸ ಮಾಡುತ್ತಿದ್ದಾರೆ. ಕಳೆದ ಚುನಾವಣೆ ವೇಳೆ ಶರತ್ ಬಚ್ಚೇಗೌಡ ಕಡಿಮೆ ಅಂತರದಿಂದ ಸೋತಿದ್ದರು. ಆದರೆ ಉಪಚುನಾವಣೆಯಲ್ಲಿ ಎಂಟಿಬಿ ವಿರುದ್ಧ ಶರತ್ ಬಚ್ಚೇಗೌಡ ಗೆದ್ದೇ ಗೆಲ್ಲುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಂಟಿಬಿ ‌ನಾಗರಾಜ್ ಅವರ ನಡವಳಿಕೆ ಸರಿಯಿಲ್ಲ. ಕ್ಷೇತ್ರದಲ್ಲಿ ಬಿಜೆಪಿ ಮುಖಂಡರ ವಿರುದ್ಧ ಅನಾವಶ್ಯಕ ಸುಳ್ಳು ದೂರು ಪ್ರಕರಣ ದಾಖಲಿಸಿದ್ದಾರೆ. ಹಣ ಬಲದ ಆಧಾರದ ಮೇಲೆ ಎಂಟಿಬಿ ‌ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಆದರೆ ಈ ಬಾರಿ ಅವರ ಸೋಲು ನಿಶ್ಚಿತ ಎಂದು ಭವಿಷ್ಯ ನುಡಿದರು.

ಶರತ್ ಬಚ್ಚೇಗೌಡ ಉಪಚುನಾವಣೆಗೆ ಸ್ಪರ್ಧೆಯಿಂದ ಹಿಂದೇಟು ಹಾಕುವುದಿಲ್ಲ. ಪಕ್ಷ ಬಿ.ಫಾರಂ ನೀಡದೇ ಹೋದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಹೊಸಕೋಟೆಯಲ್ಲಿ ಬಿಜೆಪಿ ಸೋಲು ಖಚಿತ ಎಂದು ಗೋಪಾಲಗೌಡ ಸೆಡ್ಡು ಹೊಡೆದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com