ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಅನುದಾನ ಕಡಿತ: ತಾರತಮ್ಯ ವಿರೋಧಿಸಿ ನಾಳೆ ಪ್ರತಿಭಟನೆ-ರಾಮಲಿಂಗಾ ರೆಡ್ಡಿ

ಬಿಜೆಪಿ ಸರ್ಕಾರದಿಂದ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತ ಹಾಗೂ ಬಿಬಿಎಂಪಿ ಅನುದಾನ ಬಿಡುಗಡೆಯಲ್ಲಾಗಿರುವ ತಾರತಮ್ಯ ಖಂಡಿಸಿ ಬಿಟಿಎಂ ಕಾಂಗ್ರೆಸ್‌ ಶಾಸಕ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ

ಬೆಂಗಳೂರು: ಬಿಜೆಪಿ ಸರ್ಕಾರದಿಂದ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತ ಹಾಗೂ ಬಿಬಿಎಂಪಿ ಅನುದಾನ ಬಿಡುಗಡೆಯಲ್ಲಾಗಿರುವ ತಾರತಮ್ಯ ಖಂಡಿಸಿ ಬಿಟಿಎಂ ಕಾಂಗ್ರೆಸ್‌ ಶಾಸಕ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ನಾಳೆ ಬೆಳಿಗ್ಗೆ 11ಕ್ಕೆ ಬಿಬಿಎಂಪಿ ಕಚೇರಿ ಎದುರು ರಾಮಲಿಂಗಾರೆಡ್ಡಿ ಪಕ್ಷದ ಕಾರ್ಯಕರ್ತರು ಹಾಗೂ ಬಿಬಿಎಂಪಿ ಕಾಂಗ್ರೆಸ್‌ ಸದಸ್ಯರೊಂದಿಗೆ ಪ್ರತಿಭಟನೆ ನಡೆಸಲಿದ್ದಾರೆ.

ಮೈತ್ರಿ ಸರ್ಕಾರದಲ್ಲಿ 2018 ಫೆಬ್ರವರಿ 1 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಟಿಎಂ ಲೇಔಟ್‌ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ರಸ್ತೆ, ಮೇಲುಸೇತುವೆ, ಉದ್ಯಾನವನ, ಆಟದ ಮೈದಾನ, ಕೆರೆ ಅಭಿವೃದ್ಧಿ, ಒಳಚರಂಡಿ ವ್ಯವಸ್ಥೆ, ಬೃಹತ್‌ ಮಳೆ ನೀರುಗಾಲುವೆ, ಬಡವರಿಗೆ ಮನೆ ನಿರ್ಮಾಣ ಹಾಗೂ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳಿಗೆ 387 ಕೋಟಿ ರೂ.ಗಳ ಅನುದಾನ ಅನುಮೋದನೆಯಾಗಿರುತ್ತದೆ. ಆದರೆ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 153.41 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆಗೊಳಿಸಿ 253.59 ಕೋಟಿ ರೂ. ಅನುದಾನ ಕಡಿತಗೊಳಿಸಿರುತ್ತಾರೆ. ಅಲ್ಲದೇ ಬಿಬಿಎಂಪಿ 2019-20 ನೇ ಸಾಲಿನ ಆಯವ್ಯಯದಲ್ಲಿ ಕ್ಷೇತ್ರ ವ್ಯಾಪ್ತಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ಶೇ.50ಕ್ಕೂ ಹೆಚ್ಚು ಅನುದಾನ ಕಡಿತಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇನ್ನು ಕಡಿತವಾಗಿರುವ ಅನುದಾನದ ಮೊತ್ತವನ್ನು ಇನ್ನೂ ಅಭಿವೃದ್ದಿಯಾಗದ ಕ್ಷೇತ್ರಗಳಿಗೆ ಹಂಚಿಕೆ ಮಾಡಿದ್ದರೆ ಯಾವುದೇ ಸಮಸ್ಯೆ ಇರಲಿಲ್ಲ, ಆದರೆ ಕಡಿತವಾಗಿರುವ ಅನುದಾನವನ್ನು ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ನೀಡಲಾಗುತ್ತಿದೆ. ಕೆಲವೆಡೆ ಇದಾಗಲೇ ಅಭಿವೃದ್ದಿಯಾಗಿರುವ ಕೆರೆ, ಉದ್ಯಾನ, ರಸ್ತೆ ಕಾಮಗಾರಿಗಳಿಗೆ ಈ ಹಣ ಹಂಚಿಕೆಯಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಇನ್ನು ಅನರ್ಹ ಶಾಸಕರ ಪೈಕಿ ಮಹಾಲಕ್ಷ್ಮಿ ಲೇಔಟ್ ಹೊರತು ಉಳಿದ ಕ್ಷೇತ್ರಗಳಿಗೆ ಭರ್ಜರಿ ಅನುದಾನ ನೀಡಲಾಗಿದೆ.ಕೆಆರ್ ಪುರ, ಆರ್.ಆರ್.ನಗರ, ಶಿವಾಜಿನಗರ ಹಾಗೂ ಯಶವಂತಪುರಗಳಿಗೆ ಹೆಚ್ಚುವರಿ ಅನುದಾನ ಲಭಿಸಿದೆ. ಆದರೆ ಮಹಾಲಕ್ಷ್ಮಿ ಲೇಔಟ್ ಗೆ ಮಾತ್ರ ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಅನುದಾನದಲ್ಲಿಯೂ 70 ಕೋಟಿ ರು. ಕಡಿತವಾಗಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com