ಸಚಿವ ಕೆ.ಎಸ್.ಈಶ್ವರಪ್ಪ ನಿವಾಸದ ಮುಂದೆ ತೃತೀಯಲಿಂಗಿಗಳ ಪ್ರತಿಭಟನೆ

ತಮ್ಮ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಶುಕ್ರವಾರ ಕೆಪಿಸಿಸಿ ಮಹಿಳಾ ಕಾಂಗ್ರೆಸ್  ಘಟಕದ ನೇತೃತ್ವದಲ್ಲಿ ತೃತೀಯ ಲಿಂಗಿಗಳು ಪ್ರತಿಭಟನೆ ನಡೆಸಿದರು.
ಕೆ.ಎಸ್ ಈಶ್ವರಪ್ಪ
ಕೆ.ಎಸ್ ಈಶ್ವರಪ್ಪ

ಬೆಂಗಳೂರು: ತಮ್ಮ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಶುಕ್ರವಾರ ಕೆಪಿಸಿಸಿ ಮಹಿಳಾ ಕಾಂಗ್ರೆಸ್  ಘಟಕದ ನೇತೃತ್ವದಲ್ಲಿ ತೃತೀಯ ಲಿಂಗಿಗಳು ಪ್ರತಿಭಟನೆ ನಡೆಸಿದರು.

ವಸಂತನಗರದಲ್ಲಿರುವ ಈಶ್ವರಪ್ಪ ಅವರ ನಿವಾಸದ ಮುಂದೆ ಧರಣಿ ನಡೆಸಿದ ಪ್ರತಿಭಟನಕಾರರು, ಸಚಿವರ ವಿರುದ್ಧ ಧಿಕ್ಕಾರ ಕೂಗಿದರು.

ಕಾಂಗ್ರೆಸ್ ಗೆ ಮತಹಾಕುವ ಮುಸಲ್ಮಾನರು ಹಿಜಡಾಗಳು ಎಂದು ಹೇಳಿಕೆ ನೀಡುವ ಮೂಲಕ ಈಶ್ವರಪ್ಪ ನಮ್ಮ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ತೃತೀಯ ಲಿಂಗಿಗಳು ಆಕ್ರೋಶ ವ್ಯಕ್ತಪಡಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಪ್ಸರಾ ರೆಡ್ಡಿ ಮಾತನಾಡಿ, ತೃತೀಯ ಲಿಂಗಿಗಳು ಕೆಳವರ್ಗದವರು. ನಮ್ಮ ಬಗ್ಗೆ ಸಚಿವರು ಬಹಳ ಹಗುರವಾಗಿ ಮಾತನಾಡಿದ್ದಾರೆ. ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಿದ್ದೇವೆ. ನಮ್ಮ ಬಗ್ಗೆ ಈ ರೀತಿ ಸಚಿವರಾದವರು ಹೇಳಿಕೆ ನೀಡುತ್ತಾರೆ ಎಂದರೆ ಅವರ ಮನಸ್ಥಿತಿ ಹೇಗಿದೆ ಎನ್ನುವುದನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ ಎಂದರು.

ಕೆ.ಎಸ್.ಈಶ್ವರಪ್ಪ ಕುಟುಂಬ ಮನೆ  ಮಕ್ಕಳನ್ನು ಹೊಂದಿರುವ ವ್ಯಕ್ತಿ. ಇಂತವರು ನಮ್ಮ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಸರಿಯಲ್ಲ. ಸಚಿವ ಸ್ಥಾನಕ್ಕೆ ಇವರು ಶೋಭೆತರುವಂತೆ ನಡೆದುಕೊಳ್ಳುವುದನ್ನು ಬಿಟ್ಟು ಕ್ಷುಲ್ಲಕ ಹೇಳಿಕೆಗಳನ್ನು ನೀಡುತ್ತಾ ತಮ್ಮ ಸ್ಥಾನಕ್ಕೂ ಸರ್ಕಾರಕ್ಕೂ ಅಗೌರವ  ತೋರುತ್ತಿದ್ದಾರೆ ಎಂದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್  ಮಾತನಾಡಿ, ರಾಜ್ಯದ ಬಿಜೆಪಿ ನಾಯಕರಾಗಿರುವ ಸಚಿವ ಕೆ.ಎಸ್. ಈಶ್ವರಪ್ಪ ಅವರ ಬಳಿ ತೃತೀಯ ಲಿಂಗಿಗಳ ಪರ ನ್ಯಾಯ  ಕೇಳಲು ಬಂದಿದ್ದೇವೆ. ತೃತೀಯ ಲಿಂಗಿಗಳು ನಮ್ಮಂತೆಯೇ ಬದುಕು ನಡೆಸುತ್ತಿದ್ದಾರೆ.  ಸಂವಿಧಾನಿಕವಾಗಿ ಅವರಿಗೂ ನಮ್ಮ ನಾಡಿನಲ್ಲಿ ಜೀವಿಸುವ ಅಧಿಕಾರ ಇದೆ. ಆದರೆ ಈಶ್ವರಪ್ಪ, ತೃತೀಯ ಲಿಂಗಿಗಳ ಬಗ್ಗೆ ಅವಮಾನಕರ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಬಾಯಿಗೆ ಬಂದಂತೆ  ಮಾತನಾಡುವ ಈಶ್ವರಪ್ಪ ಅವರ ಬಾಯಿಯಲ್ಲಿ ಇರುವುದು ಚಪ್ಪಲಿಯೇ ಅಥವಾ ನಾಲಿಗೆಯೇ ಎಂದು  ಕಿಡಿಕಾರಿದರು‌.

ರಾಜ್ಯದಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೂ ಕೇಂದ್ರ ಸರ್ಕಾರಕ್ಕೂ ಮನಸೇ ಇಲ್ಲ‌. ನಿರುದ್ಯೋಗ ಹೆಚ್ಚಾಗಿದ್ದು, ಅದರ ಬಗ್ಗೆ ಅವರಿಗೆ ಕಾಳಜಿ ಇಲ್ಲ‌. ಆದರೆ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಲು ಮಾತ್ರ ಇವರೆಲ್ಲ ನಿಸ್ಸೀಮರು. ತೃತೀಯ ಲಿಂಗಿಗಳ ಸಮುದಾಯದ ಬಳಿ ಈಶ್ವರಪ್ಪ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಫ್ರತಿಭಟನಾನಿರತ ಮಂಗಳಮುಖಿಯರು ಈಶ್ವರಪ್ಪ ನಿವಾಸಕ್ಕೆ ಮುತ್ತಿಗೆಹಾಕಲು ಯತ್ನಿಸಿದಾಗ ಪೊಲೀಸರು ಅದನ್ನು ತಡೆದು, ಕೆಲವರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com