ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಜೋಡೆತ್ತುಗಳು ಬಂದು ಹೋರಾಟ ಮಾಡಲಿ: ನಟ ದರ್ಶನ್, ಯಶ್ ಗೆ ಶಿವರಾಮೇಗೌಡ ಸವಾಲು

ಕಬ್ಬು ಕಟಾವಾಗದೇ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರೈತರ ಕಣ್ಣೀರು ಒರೆಸಲು ಜೋಡೆತ್ತು ಬಂದು ಹೋರಾಟ ಮಾಡಲಿ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವ್ಯಂಗ್ಯವಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಡ್ಯ: ಕಬ್ಬು ಕಟಾವಾಗದೇ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರೈತರ ಕಣ್ಣೀರು ಒರೆಸಲು ಜೋಡೆತ್ತು ಬಂದು ಹೋರಾಟ ಮಾಡಲಿ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವ್ಯಂಗ್ಯವಾಡಿದ್ದಾರೆ.
 
ಜಿಲ್ಲೆಯ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಮೇಗೌಡ, ಲೋಕಸಭೆ ಚುನಾವಣೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಕೈ ಬಿಡಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದೆವು. ಒಂದು ವರ್ಗದ ಜನ ಸ್ವಾಭಿಮಾನಕ್ಕೆ ಮತ ನೀಡಿ ಎಂದು ಸುಮಲತಾರನ್ನ ಗೆಲ್ಲಿಸಿದರು.ಈಗ ಜಿಲ್ಲೆಯ ರೈತರ ಕಬ್ಬು ಕಟಾವಾಗದೇ ಬೆಂಕಿ ಹಂಚುವ ಸ್ಥಿತಿಗೆ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಉದ್ದಗಲಕ್ಕೆ ಜೋಡೆತ್ತುಗಳು ಪ್ರಚಾರ ನಡೆಸಿದ್ದರು. ಮಂಡ್ಯ ಜನರಿಗೆ ನಾವಿದ್ದೀವಿ, ನಿಮ್ಮನ್ನ ರಕ್ಷಣೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಈಗ ಸಂಸದರನ್ನ ಕರೆದುಕೊಂಡು ಬಂದು ರೈತರ ಸಮಸ್ಯೆ ಪರಿಹಾರಕ್ಕಾಗಿ ಜೋಡೆತ್ತುಗಳ ಹೋರಾಟಕ್ಕಿಳಿಯಲಿ ಎಂದು ದರ್ಶನ್ ಮತ್ತು ಯಶ್‌ಗೆ ಸವಾಲು ಹಾಕಿದ್ದಾರೆ.
 
ಜನರು ಸ್ವಾಭಿಮಾನಕ್ಕಾಗಿ ಮತ ಚಲಾವಣೆ ಕೊಡುತ್ತಾರೆ ಎಂದಿದ್ದರು. ಈಗ ಸಮಸ್ಯೆ ಪರಿಹಾರಕ್ಕೆ ನಿತ್ಯ ಸುಮಲತಾ ಮಂಡ್ಯದಲ್ಲಿ ಇರುತ್ತಾರೆ ಅಂದು ಕೊಂಡಿದ್ದೆವು. ರೈತರು ಆತ್ಮಹತ್ಯೆ ಮಾಡಿಕೊಂಡರೂ, ಬಾಯಿ ಬಡೆದುಕೊಂಡರೂ ಸಂಸದರು ಜಿಲ್ಲೆ ಕಡೆಗೆ ತಲೆ ಹಾಕುತ್ತಿಲ್ಲ.ಜೋಡೆತ್ತು, ಸಂಸದರನ್ನ ಹುಡುಕ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲು ಸುಮಲತಾ ಅವರು ರಾಜಕೀಯ ಸಾಕು, ಜಿಲ್ಲೆಯ ಸಮಸ್ಯೆ ಬಗೆ ಹರಿಸೋಣ ,ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ ಎಂದು ಕರೆ ನೀಡಿದ್ದರು. ಈಗ ಬನ್ನಿ, ರೈತರ ಸಮಸ್ಯೆ ಬಗೆ ಹರಿಸೋಣ ಎಂದು ಶಿವರಾಮೇಗೌಡ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಆಹ್ವಾನ ನೀಡಿದ್ದಾರೆ.
 
ನೀವು ಮುಂದೆ ನಡೆಯಿರಿ ನಾವು ಹಿಂದೆ ಬರುತ್ತೇವೆ ಜೋಡೆತ್ತುಗಳಾದ ದರ್ಶನ್ ಮತ್ತು ಹೇಳಿದ್ದರು.ಆದರೀಗ ಈರ್ವರು ನಾಯಕ ನಟರ ವಿಳಾಸ ಪತ್ತೆಯಿಲ್ಲ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಕುಳಿತು ರೈತರ ಸಮಸ್ಯೆಗೆ ಬಗೆಹರಿಸಲಿ. ರೈತನಾಯಕ ಪುಟ್ಟಣ್ಣಯ್ಯಗೆ ಒಳ್ಳೆಯ ಹೆಸರಿತ್ತು.ಆದರೆ ಸುನಿತಾ ಪುಟ್ಟಣ್ಣಯ್ಯ ಚುನಾವಣೆಯಲ್ಲಿ ಹೋರಾಟ ಮಾಡಿದ್ದರು. ಈಗ ರೈತರ ಸಮಸ್ಯೆ ನಿವಾರಣೆಗೆ ಹೋರಾಟಕ್ಕೆ ಅವರೂ ಕರೆ ನೀಡಲಿ. ನಾವು ಹೋರಾಟಕ್ಕೆ ಬರುತ್ತೇವೆ. ಚುನಾವಣೆಯಲ್ಲಿ ಸುಮಲತಾ ಬೆಂಬಲಿಸಿದವರು ಈಗ ರೈತರ ಸಮಸ್ಯೆಗಾಗಿ ಹೋರಾಡಲು ಮುಂದೆ ಬನ್ನಿ ಎಂದು ಶಿವರಾಮೇಗೌಡ ಕರೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com