ಉಪಚುನಾವಣೆ ಸಮರ: ಮೂರೂ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದ ಒಳಜಗಳ, ಭಿನ್ನಮತ 

15 ಕ್ಷೇತ್ರಗಳ ಉಪಚುನಾವಣೆ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಮಹತ್ವದ್ದಾಗಿದ್ದು, ಉಪಚುನಾವಣೆ ಹತ್ತಿರ ಬರುತ್ತಿರುವಾಗಲೇ ಪಕ್ಷದಲ್ಲಿರುವ ಒಳಜಗಳ, ಭಿನ್ನಮತ ಇದೀಗ ಮೂರು ಪಕ್ಷಗಳಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 15 ಕ್ಷೇತ್ರಗಳ ಉಪಚುನಾವಣೆ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಮಹತ್ವದ್ದಾಗಿದ್ದು, ಉಪಚುನಾವಣೆ ಹತ್ತಿರ ಬರುತ್ತಿರುವಾಗಲೇ ಪಕ್ಷದಲ್ಲಿರುವ ಒಳಜಗಳ, ಭಿನ್ನಮತ ಇದೀಗ ಮೂರು ಪಕ್ಷಗಳಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 

ಹಿಂದೆ ತಮ್ಮ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಅಂದಿನ ರಾಜ್ಯಾಧ್ಯಕ್ಷರಾಗಿದ್ದ ಯಡಿಯೂರಪ್ಪ ಅವರು ಪಕ್ಷದ ಸ್ಥಾನದಿಂದ ವಜಾಗೊಳಿಸಿದ್ದ ಇಬ್ಬರು ಮುಖಂಡರಿಗೆ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮತ್ತೆ ಸ್ಥಾನ ದಯಪಾಲಿಸುವ ಮೂಲಕ ಟಾಂಗ್ ನೀಡಿದ್ದಾರೆ. 

ಮಾಜಿ ಶಾಸಕರಾದ ಎಂ.ಬಿ.ಭಾನುಪ್ರಕಾಶ್ ಮತ್ತು ನಿರ್ಲಮ್ ಕುಮಾರ್ ಸುರಾನಾ ಅವರನ್ನು ರಾಜ್ಯ ಉಪಾಧ್ಯ.ಕ್ಷರನ್ನಾಗಿ ನೇಮಿಸಿದ್ದಾರೆ. ಈ ಹಿನ್ನಲೆಯಲ್ಲಿ ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ನಳಿನ್ ಕುಮಾರ್ ಮತ್ತು ಯಡಿಯೂರಪ್ಪ ನಡುವೆ ಶೀತಲ ಸಮರ ತೀವ್ರಗೊಂಡಿದೆ. 

ಈ ನಡುವೆ ರಾಜ್ಯ ಬಿಜೆಪಿ ಭೀಮಾಶಂಕರ್ ಪಾಟೀಲ್ ಅವರು ನಳಿನ್ ಕುಮಾರ್ ಕಟೀಲ್ ಅವರಿಗೆ ಪತ್ರವೊಂದನ್ನು ಬರೆದಿದ್ದು, ಪತ್ರದಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಿದರೆ, ಮುಂದೆ ಪಕ್ಷಕ್ಕೆ ತೊಂದರೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದು ಬಿಜೆಪಿಯಲ್ಲಿ ಭಿನ್ನಮತವಿರುವುದನ್ನು ಬಹಿರಂಗಪಡಿಸಿದೆ. 

ಇದಲ್ಲದೆ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಯಡಿಯೂರಪ್ಪ ಅವರ ಕಾಲಿಗೆ ಬಿದ್ದಿದ್ದ ಈಶ್ವರಪ್ಪ ಅವರು ಯಡಿಯೂರಪ್ಪ ವಿರುದ್ಧವೇ ಬಹಿರಂಗವಾಗಿ ಹರಿಹಾಯ್ದಿದ್ದಾರೆ. 

ಯಡಿಯೂರಪ್ಪ ಅವರು ಪಕ್ಷದ ಕಡೆ ಗಮನ ಹರಿಸಿದೇ ಕೇವಲ ತಮ್ಮ ಬಗ್ಗೆಯಷ್ಟೇ ಗಮನ ಹರಿಸುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಪಕ್ಷ ಮೊದಲಾಗಬೇಕು. ಇಲ್ಲದಿದ್ದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಡಿದ ಹಾದಿಯನ್ನೇ ನೀವೂ ಹಿಡಿಯಬೇಕಾಗುತ್ತದೆ ಎಂದು ಎಛ್ಚರಿಸಿದ್ದಾರೆ. 

ಸಿದ್ದರಾಮಯ್ಯ ಅವರು ಸರ್ವಾಧಿಕಾರಿ ವರ್ತನೆ ತೋರಿದ್ದರು. ಇದರ ಬಳಿಕ ಅವರನ್ನು ಯಾರು ಬೆಂಬಲಿಸಲಿಲ್ಲ. ಹೀಗಾಗಿಯೇ 2018ರ ಚುನಾವಣೆ ವೇಳೆ ಸೋಲು ಕಂಡಿದ್ದರು. ಪಕ್ಷದಿಂದ ಹೊರಹೋಗಿ ನೂತನ ಪಕ್ಷ ಸ್ಥಾಪನೆ ಮಾಡಿದ ಬಳಿಕ ಯಡಿಯೂರಪ್ಪ ಅವರಿಗೆ ಸಿಕ್ಕ ಸ್ಥಾನಗಳೆಷ್ಟು? ಎಂದು ಟೀಕಿಸಿದ್ದಾರೆ. 

ಇನ್ನು ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಬಿಜೆಪಿ ನಾಯಕರ ವಿರುದ್ಧ ಯಡಿಯೂರಪ್ಪ ಅವರ ಪ್ರಮಾಣಿಕ ಬೆಂಬಲಿಗ ಭೀಮಶಂಕರ್ ಪಾಟೀಲ್ ಅವರು ಕಿಡಿಕಾರಿದ್ದಾರೆ.

ಇದರಂತೆ ಜೆಡಿಎಸ್ ಕೂಡ ಇದೇ ರೀತಿಯ ಭಿನ್ನಮತ ಸ್ಫೋಟಗೊಂಡಿದೆ. ಹಿರಿಯ ನಾಯಕ ಜಿಟಿ ದೇವೇಗೌಡ ಅವರು ತಮ್ಮ ಪಕ್ಷದ ನಾಯಕರನ್ನು ಬಿಟ್ಟು ಬೇರೇ ಪಕ್ಷದ ನಾಯಕರನ್ನು ಹೊಗಳಿರುವುದು ಪಕ್ಷದ ಮುಖಂಡರಲ್ಲಿ ಇರಿಸುಮುನಿಸು ಉಂಟಾಗುವಂತೆ ಮಾಡಿದೆ. ಜಿಟಿ ದೇವೇಗೌಡ ಅವರು ಈ ಹಿಂದೆ ಪ್ರಧಾನಿ ಮೋದಿಯವರನ್ನು ಕೊಂಡಾಡಿದ್ದರು. 

ಕಾಂಗ್ರೆಸ್ ಪಾಳಯದಲ್ಲೂ ಬಿಜೆಪಿಯಂತೆಯೇ ಒಳಜಗಳ ಸ್ಫೋಟಗೊಂಡಿದೆ. ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಇಬ್ಬರೂ ಒಂದೆಡೆಯಾದರೆ, ಪಕ್ಷದ ಇತರೆ ನಾಯಕರು ಮತ್ತೊಂದೆಡೆ ಮುಖ ಮಾಡಿ ನಿಂತಿದ್ದಾರೆ.  

ಕೇಂದ್ರ ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ ಹಾಗೂ ರಾಜ್ಯಸಭಾ ಸಂಸದ ಬಿಕೆ. ಹರಿಪ್ರಸಾದ್ ಅವರು ಈಗಾಗಲೇ ಬಹಿರಂಗವಾಗಿಯೇ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. 

ರಾಜ್ಯ ನಾಯಕತ್ವ ತನ್ನದೇ ಗುಂಪನ್ನು ರಚನೆ ಮಾಡುತ್ತಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿಯನ್ನು ತಂದೊಡ್ಡಿದೆ. ಸೋಲು ಪಕ್ಷಕ್ಕೆ ಸಾಕಷ್ಟು ಪಾಠವನ್ನು ಕಲಿಸಿದೆ. ವಿಧಾನಸಭೆ ಹಾಗೂ ಸಂಸತ್ ಚುನಾವಣೆಯಲ್ಲಿ ಸೋಲು ಕಂಡಿದ್ದರೂ, ಪಕ್ಷ ಗುಂಪು ಕಟ್ಟುವುದರಲ್ಲಿ ಕಾರ್ಯಮಗ್ನವಾಗಿದೆ. 2013ರಲ್ಲಿ ಬಿಜೆಪಿ ಮೂರು ಭಾಗವಾಗಿದ್ದರಿಂದ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದರು. ಯಡಿಯೂರಪ್ಪ, ಶ್ರೀರಾಮುಲು ಬೇರೇ ಬೇರೆ ಮಾರ್ಗ ಹಿಡಿದಿದ್ದರು. ಇದರಿಂದ ಕಾಂಗ್ರೆಸ್ ಅತ್ಯಂತ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸುವಂತಾಗಿತ್ತು. ಈ ಗೆಲುವಿನ ಲಾಭವನ್ನು ಸಿದ್ದರಾಮಯ್ಯ ಒಬ್ಬರೇ ಪಡೆಯುವಂತಿಲ್ಲ ಎಂದು ಹರಿಪ್ರಸಾದ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com