ಯಡಿಯೂರಪ್ಪ- ನಳಿನ್ ಕುಮಾರ್ ಕಟೀಲ್ ನಡುವೆ ಶೀತಲ ಸಮರ: ಮೇಯರ್ ಚುನಾವಣೆ ಮತ್ತೆ ಮುಂದೂಡಿಕೆ?

ಮೇಯರ್ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ವಿಫಲವಾಗಿರುವ ಬಿಜೆಪಿ ಸರ್ಕಾರ ಚುನಾವಣೆಯನ್ನೇ ಮುಂದೂಡಲು ಮುಂದಾಗಿದೆ.  
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮೇಯರ್ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ವಿಫಲವಾಗಿರುವ ಬಿಜೆಪಿ ಸರ್ಕಾರ ಚುನಾವಣೆಯನ್ನೇ ಮುಂದೂಡಲು ಮುಂದಾಗಿದೆ.   
  
ಈ ಸಂಬಂಧ ಸರ್ಕಾರ ಪ್ರಾದೇಶಿಕ ಆಯುಕ್ತ ಹಾಗೂ ಮೇಯರ್, ಉಪಮೇಯರ್ ಚುನಾವಣಾ ಉಸ್ತುವಾರಿ ಹರ್ಷಗುಪ್ತ ಅವರಿಗೆ ಪತ್ರ ಬರೆದಿದ್ದು, ಅ. 1ರಂದು ನಿಗದಿಯಾಗಿರುವ ಚುನಾವಣೆಯನ್ನು 45 ದಿನಗಳ ಕಾಲ   ಮುಂದೂಡುವಂತೆ ಸೂಚಿಸಿದೆ. ಆದರೆ, ಈ ಸಂಬಂಧ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ.   

ಈ ಕುರಿತು ಪ್ರತಿಕ್ರಿಯಿಸಿರುವ ಹರ್ಷಗುಪ್ತ, ಸರ್ಕಾರದಿಂದ ಪತ್ರ ಬಂದಿರುವುದು ನಿಜ. ಅದನ್ನು ಪರಿಶೀಲಿಸಲಾಗುತ್ತಿದೆ. ಇಂದು ಸಂಜೆಯ ವೇಳೆ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.  
  
 ಶನಿವಾರ ಬಿಜಪಿ ಪಾಲಿಕೆ ಸದಸ್ಯರು ಚುನಾವಣೆ ಮುಂದೂಡುವಂತೆ ಹರ್ಷಗುಪ್ತ ಅವರಿಗೆ ಮನವಿ ಸಲ್ಲಿಸಿದ್ದರು. ಆದರೆ, ಅದನ್ನು ಹರ್ಷಗುಪ್ತ ನಿರಾಕರಿಸಿದ್ದರು. ಮೇಯರ್ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಡುವೆ ನಡೆಯುತ್ತಿರುವ ಶೀತಲ ಸಮರದಿಂದ ಮೇಯರ್ ಆಕಾಂಕ್ಷಿಗಳು ಕಂಗಾಲಾಗುವಂತಾಗಿದೆ. ಸದ್ಯ ಬಿಜೆಪಿಯಲ್ಲಿ ಏಳು ಆಕಾಂಕ್ಷಿಗಳಿದ್ದಾರೆ.  ಆದ್ದರಿಂದ ಸೂಕ್ತ ಅಭ್ಯರ್ಥಿಯ ಆಯ್ಕೆಗೆ ಯಡಿಯೂರಪ್ಪ ಐವರು ಸದಸ್ಯರ ಸಮಿತಿ ರಚಿಸಿದ್ದರು. ಆದರೆ, ಈ ಸಮಿತಿ ರಚನೆಯ ವರದಿಯನ್ನೇ ನಳಿನ್ ಕುಮಾರ್ ತಳ್ಳಿ ಹಾಕಿದ್ದರು. 
  
 ಈ ಹಿಂದೆ ಸೆ. 27ರಂದು ಮೇಯರ್ ಚುನಾವಣೆ ನಿಗದಿಯಾಗಿತ್ತಾದರೂ, ವಿಧಾನಸಭಾ ಉಪ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಅದನ್ನು ಅ.1ಕ್ಕೆ ಮುಂದೂಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com