ಮುಳುವಾಯ್ತು ಸಿದ್ದು ಮೇಲಿನ ಮುನಿಸು: ಕೆ.ಎಚ್ ಮುನಿಯಪ್ಪ ವಿರುದ್ಧ ಸತ್ಯ ಶೋಧನಾ ಸಮಿತಿಗೆ ದೂರು!

ಲೋಕಸಭಾ ಚುನಾವಣೆಯಲ್ಲಿ ಸೋಲಿನ ಪರಾಮರ್ಶೆ ಹಾಗೂ ಕಾರಣಗಳ ಪತ್ತೆಗೆ ಕೆಪಿಸಿಸಿ ರಚಿಸಲಾಗಿರುವ ಸತ್ಯಶೋಧನಾ ಸಮಿತಿಗೆ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ದೂರು ಸಲ್ಲಿಸಿದ್ದಾರೆ.
ಮುನಿಯಪ್ಪ ವಿರುದ್ಧ ದೂರು ದಾಖಲು
ಮುನಿಯಪ್ಪ ವಿರುದ್ಧ ದೂರು ದಾಖಲು

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸೋಲಿನ ಪರಾಮರ್ಶೆ ಹಾಗೂ ಕಾರಣಗಳ ಪತ್ತೆಗೆ ಕೆಪಿಸಿಸಿ ರಚಿಸಲಾಗಿರುವ ಸತ್ಯಶೋಧನಾ ಸಮಿತಿಗೆ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ದೂರು ಸಲ್ಲಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಮುನಿಯಪ್ಪ ಸೋಲಿಗೆ ಸ್ವಯಂಕೃತ ಅಪರಾಧಗಳು, ಪಕ್ಷ ವಿರೋಧಿ ಚಟುವಟಿಕೆಗಳು ಕಾರಣವೇ ಹೊರತು ಬೇರಾರೂ ಅಲ್ಲ ಎಂದು ದೂರಿನಲ್ಲಿ ಸ್ಪಷ್ಟಪಡಿಸಲಾಗಿದೆ.

2008ರ ವಿಧಾನಸಭಾ ಚುನಾವಣೆಗಳಲ್ಲಿ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೆ.ಶ್ರೀನಿವಾಸಗೌಡ ವಿರುದ್ಧ ಕೆಲಸ ಮಾಡಿ ಪಕ್ಷೇತರ ಅಭ್ಯರ್ಥಿ ಆರ್.ವರ್ತೂರು ಪ್ರಕಾಶ್ ಅವರನ್ನು ಗೆಲ್ಲಿಸಿರುತ್ತಾರೆ. ಕೆಜಿಎಫ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೈ.ಸಂಪಂಗಿ ಪರ ಕೆಲಸ ನಿರ್ವಹಿಸಿ ಎನ್.ಎಸ್.ಯು.ಐ ಮುಖಂಡ ಶ್ರೀನಿವಾಸ್ ಸೋಲಿಗೆ ಮುನಿಯಪ್ಪ ಪ್ರಮುಖ ಪಾತ್ರವಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೋಲಾರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯ ದರ್ಶಿ ಅಬ್ದುಲ್‌ ಖಯ್ಯೂಂ, ವಕ್ತಾರ ಸೈಯದ್‌ ಅಪ್ಸರ್‌, ಜಿಪಂ ಸದಸ್ಯ ಶಾಹೀದ್‌ ಷಹಜಾದ್‌ ದೂರು ಸಲ್ಲಿಸಿದ್ದು, ಮುನಿಯಪ್ಪ ಮಾಡಿರುವ ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಮೂವತ್ತು ವರ್ಷಗಳಿಂದ ಪಕ್ಷ ವಿರೋಧಿ ಚಟುವಟಿಕೆ ಮಾಡಿಕೊಂಡು ಬಂದಿರುವುದರಿಂದ ಅವರ ಸ್ವಯಂಕೃತ ಅಪರಾಧದಿಂದಾಗಿ ಚುನಾವಣೆ ಯಲ್ಲಿ ಸೋಲು ಕಂಡಿದ್ದಾರೆಂದು ಸತ್ಯ ಶೋಧನಾ ಸಮಿತಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.

ತಮ್ಮ ಸೋಲಿಗೆ ಮಾಜಿ ಸ್ಪೀಕರ್‌ ಸೇರಿ ಜಿಲ್ಲೆಯ ಮೂವರು ಶಾಸಕರು ಕಾರಣರಾಗಿದ್ದು ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಕೆಪಿಸಿಸಿ ವತಿಯಿಂದ ನೇಮಿಸಲಾಗಿರುವ ಸತ್ಯಶೋಧನಾ ಸಮಿತಿಗೆ ಕೆ.ಎಚ್‌.ಮುನಿಯಪ್ಪ ದೂರು ಕೂಡ ನೀಡಿದ್ದರು. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ದೂರು ನೀಡಿದ್ದರೂ, ಕ್ರಮ ಕೈಗೊಳ್ಳದೇ ಅವರನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಕೆಪಿಸಿಸಿ ಕಚೇರಿಯಲ್ಲಿ ಬಹಿರಂಗವಾಗಿಯೇ ಆಕ್ರೋಶ ಹೊರ ಹಾಕಿದ ಬೆನ್ನಲ್ಲೇ ಸತ್ಯಶೋಧನಾ ಸಮಿತಿಗೆ ಸಲ್ಲಿಸಿದ್ದ ದೂರಿನ ಪ್ರತಿ ಬಹಿರಂಗಗೊಂಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com