ಕೊರೋನಾ ಹೆಸರಿನಲ್ಲಿ ಭ್ರಷ್ಟಾಚಾರ; ರಾಜ್ಯದಲ್ಲಿರೋದು ಕರುಣೆ ಇಲ್ಲದ ಸರ್ಕಾರ: ಯುಟಿ ಖಾದರ್

ನಿತ್ಯ ಕೊರೋನಾ ಕೇಸ್‌ಗಳ ಸಂಖ್ಯೆ ಹೆಚ್ಚುತ್ತಿವೆ. ಸಾವಿನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅಂತ್ಯಸಂಸ್ಕಾರದಲ್ಲೂ ಸರ್ಕಾರ ಸಂಸ್ಕಾರ ಮರೆತು ವರ್ತಿಸುತ್ತಿದೆ. ಹಾಗಾಗಿ ರಾಜ್ಯದಲ್ಲಿರೋದು ಮಾನವೀಯತೆ, ಕರುಣೆ ಇಲ್ಲದ ಸರ್ಕಾರ ಎಂದು ಮಾಜಿ ಸಚಿವ, ಶಾಸಕ ಯುಟಿ ಖಾದರ್ ಬಿಜೆಪಿ ಸರಕಾರದ ವಿರುದ್ಧ ಹರಿಹಾಯ್ದರು.
ಯುಟಿ ಖಾದರ್
ಯುಟಿ ಖಾದರ್

ಕೊಪ್ಪಳ: ನಿತ್ಯ ಕೊರೋನಾ ಕೇಸ್‌ಗಳ ಸಂಖ್ಯೆ ಹೆಚ್ಚುತ್ತಿವೆ. ಸಾವಿನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅಂತ್ಯಸಂಸ್ಕಾರದಲ್ಲೂ ಸರ್ಕಾರ ಸಂಸ್ಕಾರ ಮರೆತು ವರ್ತಿಸುತ್ತಿದೆ. ಹಾಗಾಗಿ ರಾಜ್ಯದಲ್ಲಿರೋದು ಮಾನವೀಯತೆ, ಕರುಣೆ ಇಲ್ಲದ ಸರ್ಕಾರ ಎಂದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಬಿಜೆಪಿ ಸರಕಾರದ ವಿರುದ್ಧ ಹರಿಹಾಯ್ದರು.

ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿಯ ಕೊರೋನಾದಲ್ಲೂ ಭ್ರಷ್ಟಾಚಾರ, ಬಿಜೆಪಿ ಸರಕಾರದ ಸಂಸ್ಕಾರ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ರಾಜ್ಯದಲ್ಲಿರುವ ಬಿಜೆಪಿ ಸರಕಾರ ಕೊರೊನಾ ನಿಯಂತ್ರಣದಲ್ಲಿ ವಿಫಲವಾಗಿದೆ. ಸಂಶಯಾಸ್ಪದ ನಡೆಯಿಂದ ಹಗರಣ ಆಗಿರುವುದು ಬಹುತೇಕ ಸ್ಪಷ್ಟವಾಗಿದೆ. ಈ ಬಗ್ಗೆ ತನಿಖೆ ನಡೆಸಲು ಒಪ್ಪದ ರಾಜ್ಯ ಸರಕಾರದ ನಾಲ್ಕೈದು ಮಂತ್ರಿಗಳು ಡೈಲಾಗ್ ಹೊಡೆದದ್ದೇ ಸಾಧನೆ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ವಿಚಾರದಲ್ಲಿ ಸ್ವಚ್ಛ, ಪಾರದರ್ಶಕ ಸರಕಾರ ನಡೆಸಬೇಕಾದರೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಜನರಿಗೆ ಕೊರೊನಾ ನಿಯಂತ್ರಣ, ನಿರ್ವಹಣೆಯ ಲೆಕ್ಕಾಚಾರ ಜನರಿಗೆ ತಿಳಿಸಬೇಕು. ಕ್ವಾಲಿಟಿ ಇಲ್ಲದ ಪಿಪಿಇ ಕಿಟ್, ಮಾಸ್ಕ್‌ಗಳನ್ನು ಡಾಕ್ಟರ್, ವೈದ್ಯಕೀಯ ಸಿಬ್ಬಂದಿಗೆ ನೀಡಿದ ಸರಕಾರದ ವಿರುದ್ಧ ಡಾಕ್ಟರ್ಸ್, ನರ್ಸ್‌ಗಳು, ಆಶಾ‌ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ. ಆದರೂ ಸರಕಾರಕ್ಕೆ ಕಿಂಚಿತ್ತೂ ನಾಚಿಕೆ ಇಲ್ಲ ಎಂದು ದೂರಿದರು.

ಲಾಕ್‌ಡೌನ್ ವೇಳೆ ಸರಕಾರಕ್ಕೆ ಪ್ರತಿಪಕ್ಷದವರು ಸಹಕಾರ ನೀಡಿದ್ದೇವೆ. ರಾಜ್ಯದ ಜನರು ಬದುಕಬೇಕೆಂದರೆ ದೇವರೇ ಕಾಪಾಡಬೇಕು ಅಂತ ಆರೋಗ್ಯ ಮಂತ್ರಿಗಳೇ ಕೈ ಚೆಲ್ಲುತ್ತಾರೆ. ಮಾಡಿರುವ ಹಗರಣವನ್ನು ಸರಕಾರ ಒಪ್ಪಲೇಬೇಕು. ತನಿಖೆಗೂ ಸರಕಾರ ಒಪ್ಪಬೇಕು. ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದಾಗ ಆರೋಪ ಬಂದ ಪ್ರತಿ ಬಾರಿಯೂ ಪ್ರತಿಪಕ್ಷದ ಬೇಡಿಕೆಗೆ ಸ್ಪಂದಿಸುತ್ತಿತ್ತು. ಬಿಜೆಪಿ ಸರಕಾರ ನಿಮ್ಮ ಅವಧಿಯಲ್ಲಿ ಹೀಗಾಗರಲಿಲ್ಲವೇ? ಎಂದು ಹೇಳುವ ಮೂಲಕ ತಪ್ಪನ್ನು ಒಪ್ಪಿಕೊಂಡಂತಾಗಿದೆ. ಆದರೆ ಮಾಡಿರುವ ತಪ್ಪನ್ನು ಸರಿಪಡಿಸಲು ಒಪ್ಪಿಕೊಳ್ಳುತ್ತಿಲ್ಲ ಎಂದು ಕಿಡಿ ಕಾರಿದರು.

ಈ ಸರಕಾರ ಆರೋಪಗಳನ್ನು ಸಹಿಸುತ್ತಿಲ್ಲ, ಸಹಕಾರವನ್ನು ನೀಡುತ್ತಿಲ್ಲ. ಸರಿಯಾದ ಆಡಳಿತ ನಡೆಸಲು ಪ್ರತಿಪಕ್ಷದವರು ನೀಡುತ್ತಿರುವ ಇಂಜೆಕ್ಷನ್ ಇದು. ಅಂದಾಗ ಆರೋಗ್ಯಯುತ ಸರಕಾರ ಇರುತ್ತದೆ. ಕಾಯಿಲೆ‌ ಹೆಚ್ಚುತ್ತಿರುವುದಕ್ಕೆ, ಸಾವು ಹೆಚ್ಚುತ್ತಿರುವುದಕ್ಕೆ, ಅಮಾನವೀಯ ಶವಸಂಸ್ಕಾರಕ್ಕೆ ಸರಕಾರದ ನಿರ್ವಹಣೆ ಕೊರತೆ ಕಾರಣ.
ಮಂತ್ರಿಗಳ ನಡುವೆ ಇರುವ ಆಂತರಿಕ ರಾಜಕೀಯ ಗೊಂದಲದಿಂದ ಜನರು‌ ಯಾಕೆ ಶಿಕ್ಷೆ ಅನುಭವಿಸಬೇಕು? ಎಂದು ಅವರು ಪ್ರಶ್ನಿಸಿದರು.

ಕಳೆದ ಮೂರು ತಿಂಗಳಲ್ಲಿ ಕೊರೋನಾಗೆ ಸಂಬಂಧಿಸಿದಂತೆ ಎಷ್ಟು ಆದೇಶಗಳನ್ನು ಸರಕಾರ ಹೊರಡಿಸಿದೆ ಎಂಬುದನ್ನು ಸ್ಪಷ್ಟಪಡಿಸಲಿ. ಕಾಂಗ್ರೆಸ್ ಪಕ್ಷ, ರಾಜ್ಯ ಸರಕಾರದ ಈ ಧೋರಣೆಯನ್ನು ಖಂಡಿಸುತ್ತದೆ. ಜನರ ಕಷ್ಟ ಅರಿಯಲು ಪ್ರತಿ ಜಿಲ್ಲೆಯಲ್ಲೂ ಕೆಎಎಸ್ ಅಧಿಕಾರಿಗಳ ಸಮೇತ ಸಮಿತಿ‌ ಮಾಡಲಿ. ಐಎಎಸ್ ಅಧಿಕಾರಿ ಕಮಿಟಿಯ ನೇತೃತ್ವ ವಹಿಸಲಿ. ವೆಂಟಿಲೇಟರ್ ಸಂಜೀವಿನಿ ಅಲ್ಲ. ಸಾವು-ಬದುಕು ದೇವರ ಕೈಯಲ್ಲಿದೆ ಎಂದು ಖಾದರ್ ಪ್ರತಿಪಾದಿಸಿದರು.

ಆತ್ಮವೇ ಇಲ್ಲದ ನಿರ್ಜೀವ ಸರಕಾರ ಇದು:
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರಕಾರಕ್ಕೆ ಕಣ್ಣು, ಮೂಗು, ಕಿವಿಯಿಲ್ಲ. ಆತ್ಮ ನಿರ್ಭರ್ ಬಗ್ಗೆ ಮಾತನಾಡುವ ಈ ಸರಕಾರಕ್ಕೆ ಆತ್ಮವೇ ಇಲ್ಲ. ಇದೊಂದು ಅಮಾನವೀಯ ಸರಕಾರ ಎಂದು ಮಾಜಿ ಸಚಿವೆ ಉಮಾಶ್ರೀ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಈಶ್ವರಪ್ಪಗೆ ತಲೆನೇ ಇಲ್ಲ- ತಂಗಡಗಿ:
ಕೊಪ್ಪಳ: ಹಿರೆ ಅಕ್ಕನ ಚಾಳಿ ಮನಿ ಮಂದಿಗೆ ಎನ್ನುವಂತೆ ಬಿಜೆಪಿ ನಾಯಕರು ವರ್ತಿಸುತ್ತಿದ್ದಾರೆ. ಕೇಂದ್ರ-ರಾಜ್ಯಮಟ್ಟದಲ್ಲಿ ಭ್ರಷ್ಟಾಚಾರ ನಡೆಸುತ್ತಿರುವ ಬಿಜೆಪಿ ಸರಕಾರಕ್ಕೆ ಪ್ರತಿಪಕ್ಷದ ಸಲಹೆ ಸ್ವೀಕರಿಸುವ ಮನಸಿಲ್ಲ. ಜಿಲ್ಲಾಮಟ್ಟದಲ್ಲೂ‌ ಕೊರೋನಾದ ಈ ದಿನಗಳಲ್ಲಿ 4 ಕೋಟಿ ರೂಪಾಯಿ ಹಗರಣ ನಡೆಸಿದ ಬಿಜೆಪಿ ಶಾಸಕರ ಬಂಡವಾಳ‌ ಬಯಲು ಮಾಡಿದ ನಮ್ಮ ಆಸ್ತಿ ವಿವರವನ್ನೇ ಸಂಸದರು ಕೇಳುತ್ತಾರೆ. ಚುನಾವಣಾ ಸಮಯದಲ್ಲಿ ನಮ್ಮೆಲ್ಲ ಆಸ್ತಿ ವಿವರ ಕೊಟ್ಟಿರುತ್ತೇವೆ ಎನ್ನುವ ಪರಿಜ್ಞಾನವೂ ಇವರಿಗಿಲ್ಲ. ಸಚಿವ ಕೆ.ಎಸ್‌.ಈಶ್ವರಪ್ಪಗೆ ತಲೆನೇ ಇಲ್ಲ ಅಂತ ಬಹಳಷ್ಟು ಸಲ ಹೇಳಿದ್ದಾಗಿದೆ ಎಂದು ಕಾಂಗ್ರೆಸ್ ಕೊಪ್ಪಳ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.

ಕಾಂಗ್ರೆಸ್ ಪ್ರತಿಭಟನೆ:
ಕೊರೋನಾ ಹೆಸರಿನಲ್ಲಿ ರಾಜ್ಯ ಬಿಜೆಪಿ ಸರಕಾರ ನಡೆಸಿದೆ ಎನ್ನಲಾಗಿರುವ ಭ್ರಷ್ಟಾಚಾರ ವಿರೋಧಿಸಿ ಉತ್ತರಕೊಡಿ, ಲೆಕ್ಕ ಕೊಡಿ ಎಂಬ ಹೆಸರಿನಲ್ಲಿ ಕೊಪ್ಪಳದ ಅಶೋಕ‌ ವೃತ್ತದಲ್ಲಿ ಶನಿವಾರ ಮಾಜಿ ಸಚಿವರಾದ ಯು.ಟಿ.ಖಾದರ್, ಶಿವರಾಜ ತಂಗಡಗಿ ಹಾಗೂ ಮಾಜಿ ಸಚಿವೆ ಉಮಾಶ್ರೀ ನೇತೇತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕೊರೊನಾ ಮುಂದಿಟ್ಟುಕೊಂಡು ಸರಕಾರ ಹಗರಣ ಮಾಡ್ತಿದೆ. ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ಶ್ವೇತಪತ್ರ ಹೊರಡಿಸಬೇಕು. ಈಗ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದೇವೆ. ಲೆಕ್ಕ ಕೊಡದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿ ತಾಲೂಕು ಮಟ್ಟದಲ್ಲೂ ಪ್ರತಿಭಟನೆ ಮಾಡಲಿದ್ದೇವೆ ಎಂದು ಮಾಜಿ ಸಚಿವೆ ಉಮಾಶ್ರೀ ಎಚ್ಚರಿಸಿದರು.

ಲೆಕ್ಕ ಕೊಡಿ ಲೆಕ್ಕ ಕೊಡಿ ಎಂದು ಆಗ್ರಹಿಸಿದ ಕಾಂಗ್ರೆಸ್ ಕಾರ್ಯಕರ್ತರು ಭ್ರಷ್ಟ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ‌ ಕೂಗಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ರಾಜಶೇಖರ ಹಿಟ್ನಾಳ, ರಡ್ಡಿ ಶ್ರೀನಿವಾಸ, ಮಾಲತಿ ನಾಯಕ್, ಆಸೀಫ್ ಅಲಿ, ಹಸನಸಾಬ ದೋಟಿಹಾಳ, ಕಾಟನ್ ಪಾಷಾ, ರವಿ‌ ಕುರಗೋಡ, ಸೇರಿದಂತೆ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.

ವರದಿ: ಬಸವರಾಜ ಕರುಗಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com