ಅರಸು ಜನ್ಮ ದಿನ ಆಗಸ್ಟ್ 20 ರಂದು ಸರ್ಕಾರದ ವಿರುದ್ಧ 'ಜನಧ್ವನಿ' ಹೋರಾಟ: ಕೆಪಿಸಿಸಿ

ಆಗಸ್ಟ್ 20 ಮಾಜಿ ಮುಖ್ಯಮಂತ್ರಿ ಹಿಂದುಳಿದ ವರ್ಗಗಳ ನಾಯಕ ದಿ.ದೇವರಾಜ ಅರಸು ಅವರ ಜನ್ಮದಿನ. ಈ ಬಾರಿ ದೇವರಾಜ ಅರಸು ಜನ್ಮದಿನವನ್ನು ಬಿಜೆಪಿ ಸರ್ಕಾರದ ವಿರುದ್ಧದ ಹೋರಾಟದ ದಿನವನ್ನಾಗಿ ಆಚರಿಸಲು ಕಾಂಗ್ರೆಸ್ ನಿರ್ಧರಿಸಿದೆ. 
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್

ಬೆಂಗಳೂರು:  ಆಗಸ್ಟ್ 20 ಮಾಜಿ ಮುಖ್ಯಮಂತ್ರಿ ಹಿಂದುಳಿದ ವರ್ಗಗಳ ನಾಯಕ ದಿ.ದೇವರಾಜ ಅರಸು ಅವರ ಜನ್ಮದಿನ. ಈ ಬಾರಿ ದೇವರಾಜ ಅರಸು ಜನ್ಮದಿನವನ್ನು ಬಿಜೆಪಿ ಸರ್ಕಾರದ ವಿರುದ್ಧದ ಹೋರಾಟದ ದಿನವನ್ನಾಗಿ ಆಚರಿಸಲು ಕಾಂಗ್ರೆಸ್ ನಿರ್ಧರಿಸಿದೆ. 

ದೇವರಾಜ ಅರಸು ಜಾರಿಗೆ ತಂದಿದ್ದ ಕ್ರಾಂತಿಕಾರಕ ಉಳುವವನೇ ಭೂಮಿಯ ಹೊಲದೊಡೆಯ ಕಾನೂನಿಗೆ ವಿರುದ್ಧವಾಗಿ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಉಳ್ಳವನೇ ಭೂಮಿಯ ಒಡೆಯ ಎಂಬ ಕಾನೂನು ವಿರುದ್ಧದ ಹೋರಾಟಕ್ಕೆ ಈ ದಿನವನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಜತೆಗೆ ಎಪಿಎಂಸಿ ಕಾಯಿದೆ ತಿದ್ದುಪಡಿ , ಕೊರೋನಾ ಭ್ರಷ್ಟಾಚಾರ ಸೇರಿದಂತೆ ಜನ ವಿರೋಧಿ ನೀತಿಗಳ ವಿರುದ್ಧ ಆಗಸ್ಟ್ 20 ರಂದು 'ಜನಧ್ವನಿ' ಹೆಸರಿನಲ್ಲಿ ಕಾಂಗ್ರೆಸ್ ಹೋರಾಟಕ್ಕೆ ಕರೆ ನೀಡಿದೆ. 

ಸರ್ಕಾರದ ಇತ್ತೀಚಿನ ಜನವಿರೋಧಿ ನೀತಿಗಳು, ಜನ ಮತ್ತು ರೈತರ ವಿರುದ್ಧವಾದ ಕಾನೂನುಗಳ ಜಾರಿ, ನೆರೆ ಹಾನಿ ಅಧ್ಯಯನ ಪ್ರವಾಸ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರಾಜ ಅರಸು ಅವರು ಉಳುವವನೆ ಭೂಮಿಯ ಒಡೆಯ ಕಾಯ್ದೆಜಾರಿಗೆ ತಂದಿದ್ದರು. ಆದರೆ ಈಗ ಇದಕ್ಕೆ ತದ್ವಿರುದ್ಧವಾದ ಕಾಯ್ದೆಯನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಇದನ್ನು ವಿರೋಧಿಸಿ ಕಾಂಗ್ರೆಸ್ ಹೋರಾಟ ಮಾಡಲಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ಮತ್ತೊಂದು ರೈತ ವಿರೋಧಿ ಧೋರಣೆಯಾಗಿದೆ. ಜತೆಗೆ ಕೋವಿಡ್ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಿದ್ದು, ಆ.20 ರಂದು 'ಜನಧ್ವನಿ' ಹೆಸರಿನಲ್ಲಿ ರಾಜ್ಯದ ಎಲ್ಲಾ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಸಲಾಗುವುದು. ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಜಿಲ್ಲಾಧಿಕಾರಿಗಳು, ತಹಶೀಲ್ದಾರರಿಗೆ ಮನವಿ ಸಲ್ಲಿಸಲು ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದರು.

ಕೊಡಗು ಜಿಲ್ಲೆಯಲ್ಲಿ ತಾವು ಎರಡು ದಿನಗಳ ಕಾಲ ನೆರೆ ಅಧ್ಯಯನ ನಡೆಸಿದ್ದು, ನಾಡಿನ ಜೀವ ನದಿ ಕಾವೇರಿ ಉಗಮ ಸ್ಥಾನ ಕೊಡಗು ಪ್ರದೇಶಗಳಲ್ಲಿ ನೆರೆಯಿಂದಾಗಿರುವ ಹಾನಿಯನ್ನು ಕಂಡು ಬೇಸರಗೊಂಡಿರುವುದಾಗಿ ಹೇಳಿದರು.

ಸತತ ಎರಡು ವರ್ಷಗಳಿಂದ ರಾಜ್ಯಾದ್ಯಂತ ಪ್ರವಾಹದಿಂದ ಸಾಕಷ್ಟು ಜನರಿಗೆ ತೊಂದರೆಯಾಗುತ್ತಿದೆ. ಕೊಡಗಿನ ಜನರ ಸಂಕಷ್ಟಕ್ಕೆ ಸರ್ಕಾರ ಸರಿಯಾಗಿ ಸ್ಪಂದಿಸಿಲ್ಲ. ಜಿಲ್ಲೆಯಲ್ಲಿ ಸಾವಿರಾರು ಜನ ಮನೆಮಠ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಈ ಬಾರಿಯೂ ಕೂಡ ಪರಿಸ್ಥಿತಿ ಕಳೆದ ಬಾರಿಗಿಂತ ಏನೂ ಭಿನ್ನವಾಗಿಲ್ಲ. ಕಾವೇರಿ ನಮ್ಮ ರಾಜ್ಯದ ದೊಡ್ಡ ಆಸ್ತಿ. ಕಳೆದ ಬಾರಿ ಪ್ರವಾಹದಿಂದ ಮನೆ, ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಪರಿಹಾರ ಸಿಕ್ಕಿಲ್ಲ.ಸರ್ಕಾರ ಕೊಟ್ಟ ಮಾತಿನಂತೆ ಭರವಸೆ ಈಡೇರಿಸಿಲ್ಲ ಎಂದರು.

ಮನೆ ಕಳೆದುಕೊಂಡವರಿಗೆ ಹೊಸ ಮನೆ ನಿರ್ಮಿಸಿಕೊಡುವ ತನಕ ಐದು ಸಾವಿರ ರೂ ಬಾಡಿಗೆ ಕೊಡುತ್ತೇವೆ ಎಂದು ಸರ್ಕಾರ ಹೇಳಿತ್ತು. ಕೇವಲ ಮೂರುನಾಲ್ಕು ತಿಂಗಳು ಮಾತ್ರ ಬಾಡಿಗೆ ಕೊಟ್ಟು ಕೈತೊಳೆದುಕೊಂಡಿದೆ. ಈ ಎಲ್ಲದರ ಬಗ್ಗೆ ಪ್ರವಾಸದಲ್ಲಿ ಜನರು ತಮ್ಮ ಬಳಿ ಅಳಲು ತೋಡಿಕೊಂಡಿದ್ದಾರೆ. ಕಳೆದ ಬಾರಿ 35 ಸಾವಿರ ಕೋಟಿ ನಷ್ಟವಾಗಿದೆ. ಸಂಪೂರ್ಣ ಮನೆ ಕಳೆದುಕೊಂಡವರಿಗೆ ಮನೆ ಇಲ್ಲವಾಗಿದೆ. ಸರ್ಕಾರ ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಲಿ. ಈಗಲಾದರೂ ಸರ್ಕಾರ ಕೊಡಗಿನ ಜನರಿಗೆ ನೆರವಾಗಲಿ, ಇಲ್ಲಿನ ಜನರ ನಿರೀಕ್ಷೆಗೆ ಸರ್ಕಾರ ಸ್ಪಂದಿಸಲಿ. ಭರವಸೆಗಳನ್ನು ಕೊಡುವುದನ್ನು ಬಿಟ್ಟು ಸಮಸ್ಯೆ ಬಗೆಹರಿಸಲಿ ಎಂದರು.
ಕೆಪಿಸಿಸಿ ವತಿಯಿಂದ ನೆರೆ ಪ್ರದೇಶಗಳ ಅಧ್ಯಯನಕ್ಕೆ ಆರು ತಂಡ ರಚಿಸಲಾಗುತ್ತಿದ್ದು, ಸರ್ಕಾರ ನೆರೆ ಪ್ರದೇಶಗಳಲ್ಲಿ ಹೇಗೆ ಕೆಲಸ ಮಾಡುತ್ತಿದೆ. ಜನರ ಸಮಸ್ಯೆಗಳೇನು?ಎಂಬ ಬಗ್ಗೆ ತಮ್ಮ ತಂಡ ಅಧ್ಯಯನ ಮಾಡಿ ಕೆಪಿಸಿಸಿಗೆ ವರದಿ ನೀಡಲಿದೆ. ಬಳಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಕೇಂದ್ರ ಸರ್ಕಾರ ರಾಜ್ಯದ ನೆರೆ ಪರಿಹಾರಕ್ಕೆ 10 ಸಾವಿರ ಕೋಟಿ ರೂ ವಿಶೇಷ ಪ್ಯಾಕೇಜ್ ಘೋಷಿಸಲು ರಾಜ್ಯ ಸರ್ಕಾರ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದರು. 

ನೆರೆ ನೆರವಿನ ಬಗ್ಗೆ ದಾಖಲೆ ಸಮೇತ ಮಾತನಾಡೋಣ ಎಂಬ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಶಿವಕುಮಾರ್, 'ಪಾಪ ಅಶೋಕಣ್ಣನಿಗೆ ನನ್ನ ಹೆಸರು ಹೇಳದಿದ್ದರೆ ಸಮಾಧಾನವಿಲ್ಲ. ಹಿಂದೆ ತಮ್ಮ ಅವಧಿಯಲ್ಲಿ ರಾಜ್ಯದಲ್ಲಿ ಕೇಂದ್ರದಲ್ಲಿ ಬೇರೆಬೇರೆ ಸರ್ಕಾರಗಳಿದ್ದವು. ಈಗ ರಾಜ್ಯ ಮತ್ತು ಕೇಂದ್ರ ಎರಡು ಕಡೆ ಬಿಜೆಪಿಯೇ ಇದೆ. ಆದರೂ ಯಾರೂ ಮಾತನಾಡುತ್ತಿಲ್ಲ. ಸದನದಲ್ಲಿ ಈ ಬಗ್ಗೆ ಚರ್ಚಿಸೋಣ, ದಾಖಲೆ ಸಹಿತ ಮಾತನಾಡೋಣ. ಈಗ ರಾಜಕೀಯ ಮಾಡಲು ತಮಗೆ ಇಷ್ಟವಿಲ್ಲ' ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com