ಬೆಂಗಳೂರು ಹಿಂಸಾಚಾರ: ಯಾವುದೇ ಧರ್ಮದ ಸಮುದಾಯ ಕಾನೂನಿಗೆ ಅತೀತರಲ್ಲ - ಎಚ್‌ಡಿ ಕುಮಾರಸ್ವಾಮಿ

ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಅಕ್ಷಮ್ಯ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಧರ್ಮದ ಹೆಸರಲ್ಲಿ ಯಾರೇ ಗೂಂಡಾಗಿರಿ, ಕಾನೂನು ಕೈಗೆತ್ತಿಕೊಂಡರೂ ಅಂತವರನ್ನು ಮುಲಾಜಿಲ್ಲದೆ ಮಟ್ಟಹಾಕಬೇಕು. ಯಾವುದೇ ಧರ್ಮದ ಸಮುದಾಯ ಕಾನೂನಿಗೆ ಅತೀತರಲ್ಲ. ನೆಲದ ಕಾನೂನನ್ನು ಗೌರವಿಸದ ಯಾರೊಬ್ಬರೂ ಶಿಕ್ಷೆಗೆ ಅರ್ಹರು.
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಅಕ್ಷಮ್ಯ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಧರ್ಮದ ಹೆಸರಲ್ಲಿ ಯಾರೇ ಗೂಂಡಾಗಿರಿ, ಕಾನೂನು ಕೈಗೆತ್ತಿಕೊಂಡರೂ ಅಂತವರನ್ನು ಮುಲಾಜಿಲ್ಲದೆ ಮಟ್ಟಹಾಕಬೇಕು. ಯಾವುದೇ ಧರ್ಮದ ಸಮುದಾಯ ಕಾನೂನಿಗೆ ಅತೀತರಲ್ಲ. ನೆಲದ ಕಾನೂನನ್ನು ಗೌರವಿಸದ ಯಾರೊಬ್ಬರೂ ಶಿಕ್ಷೆಗೆ ಅರ್ಹರು. ಸರ್ಕಾರ ಪುಂಡಾಟ ನಡೆಸಿದವರ ವಿರುದ್ಧ ಕಠಿಣ ಕ್ರಮ‌ಕೈಗೊಳ್ಳಬೇಕು. ಮುಂದೆಂದೂ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಇದೀಗ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿಯೊಬ್ಬ ಫೇಸ್ ಬುಕ್ ನಲ್ಲಿ ಮಹಮದ್ ಪೈಗಂಬರ್ ಬಗ್ಗೆ ಬರೆದಿದ್ದ ಅವಹೇಳನಕಾರಿ ಪೋಸ್ಟ್ ಒಂದು ಇಷ್ಟೆಲ್ಲ ದುರ್ಘಟನೆಗೆ ಕಾರಣವಾಗಿದೆ ಎಂದಿದ್ದಾರೆ.

ಅವಿವೇಕಿಯೊಬ್ಬ ಪೈಗಂಬರ್ ಅವರ ಬಗ್ಗೆ ಅವಹೇಳನ ಮಾಡಿದ ಆತನಿಗೆ ಶಿಕ್ಷೆಯಾಗಬೇಕು ನಿಜ, ಆದರೆ ಪೈಗಂಬರ್ ಅನುಯಾಯಿಗಳು ದಾಂಧಲೆಗಿಳಿಯುವ ಮೂಲಕ ಪ್ರವಾದಿಯ ಪವಿತ್ರ ಸಂದೇಶಗಳನ್ನು ಮಣ್ಣುಪಾಲು ಮಾಡುವುದು ಆ ಧರ್ಮಕ್ಕೆ ಮಾಡಿದ ಅಪಚಾರ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಈ ಘಟನೆ ಪೂರ್ವಯೋಜಿತ ಸಂಚು ಎಂಬ ಅನುಮಾನಕ್ಕೂ ಪುಷ್ಟಿ ನೀಡಿದೆ. ಸ್ಥಳೀಯ ಜನಪ್ರತಿನಿಧಿಗಳ, ಸ್ವಜನಪಕ್ಷಪಾತ, ಅಧಿಕಾರ ಲಾಲಸೆಗಳಿಂದಾಗಿ ಇಂಥದೊಂದು ಸಣ್ಣ ಕಿಡಿ ಬೆಂಕಿಯುಂಡೆ ಆಗುವ ಮೂಲಕ ಅಮಾಯಕ ಜನರ ಸಿಟ್ಟು-ಸೆಡವು ಸ್ಫೋಟಗೊಂಡಿದೆ. ನಿರುಪದ್ರವಿಗಳ ರಕ್ತ ಚೆಲ್ಲಾಡಿದೆ. ಕೌಟುಂಬಿಕ ದ್ವೇಷಾಸೂಯೆಗಳು ದುರ್ವರ್ತನೆಗೆ ವೇದಿಕೆಯಾಗಿರುವುದು ಸುಳ್ಳಲ್ಲ ಎಂದಿರುವ ಕುಮಾರಸ್ವಾಮಿ, ಧರ್ಮದ ಹೆಸರಿನಲ್ಲಿ ಪುಂಡಾಟಿಕೆ ನಡೆಸುವ ಮೂಲಕ ಸಂವಿಧಾನದ ಮೇಲೆ ಸವಾರಿ ಮಾಡುವ ಇಂತಹ ಘಟನೆಗಳಿಂದ ಸಾರ್ವತ್ರಿಕ ತಿರಸ್ಕಾರಕ್ಕೆ ಮತ್ತು ಅವಗಣನೆಗೆ ಸಮುದಾಯವೊಂದು ಪದೇಪದೇ ಗುರಿಯಾಗುತ್ತಿರುವುದು ಸ್ವಯಂಕೃತ ಅಪರಾಧವಲ್ಲದೆ ಬೇರೇನಿಲ್ಲ ಎಂದು ಕಿಡಿಕಾರಿ ಟ್ವೀಟ್ ಮಾಡಿದ್ದಾರೆ.

ಇನ್ನು ಮಾಜಿ ಪ್ರಧಾನಿ ರಾಜ್ಯಸಭಾ ಸದಸ್ಯ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ, ಗಲಭೆ ಪ್ರಕರಣವನ್ನು ಖಂಡಿಸಿದ್ದು, ಸಮಾಜದ ಸ್ವಾಸ್ಥ್ಯ ಕದಡುವುದರಿಂದ ಯಾರಿಗೂ ಉಪಯೋಗವಿಲ್ಲ. ಈ ರೀತಿಗೆ ಗಲಭೆಗೆ ಪ್ರಚೋದಿಸುವುದು ತಪ್ಪು. ಸಾರ್ವಜನಿಕರು, ಪೊಲೀಸರು,ಪತ್ರಕರ್ತರು ಹೀಗೆ ಎಲ್ಲರ ಮೇಲೆ ಹಲ್ಲೆ ಮಾಡಿ ಗಲಾಟೆ ಮಾಡುವುದು ತಪ್ಪು. ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com