'130 ಕೋಟಿ ಭಾರತೀಯರೆಲ್ಲರೂ ಹಿಂದಿ ಕಲಿಯಲೇಬೇಕು ಎನ್ನುವುದು ಮೂರ್ಖತನದ ಪರಮಾವಧಿ'

ತಮ್ಮ ತಾತ ಎಚ್ ಡಿ ದೇವೇಗೌಡ ರೈತರ ಹಕ್ಕುಗಳ ಪರ ಹೋರಾಟ ನಡೆಸುತ್ತಿದ್ದರೇ ಮೊಮ್ಮಗ, ಪ್ರಜ್ವಲ್ ರೇವಣ್ಣ ಹಿಂದಿ ಹೇರಿಕೆ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ.
ಪ್ರಜ್ವಲ್ ರೇವಣ್ಣ
ಪ್ರಜ್ವಲ್ ರೇವಣ್ಣ

ಬೆಂಗಳೂರು: ತಮ್ಮ ತಾತ ಎಚ್ ಡಿ ದೇವೇಗೌಡ ರೈತರ ಹಕ್ಕುಗಳ ಪರ ಹೋರಾಟ ನಡೆಸುತ್ತಿದ್ದರೇ ಮೊಮ್ಮಗ, ಪ್ರಜ್ವಲ್ ರೇವಣ್ಣ ಹಿಂದಿ ಹೇರಿಕೆ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಂಸದ ಪ್ಪಜ್ವಲ್ ರೇವಣ್ಣ ತ್ರಿಭಾಷಾ ನೀತಿಯ ಮೂಲಕ ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ವಿರೋಧಿಸಿ ರಾಜ್ಯದಲ್ಲಿ ಹೋರಾಟಗಳು ಶುರುವಾಗಿವೆ. ಕೇಂದ್ರ ಸರ್ಕಾರದ ಈ ನಡೆಯ ವಿರುದ್ಧ  ನಡೆಯುವ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಹಿಂದಿ ಹೇರಿಕೆಯನ್ನು ವಿರೋಧಿಸಿರುವ ಪ್ರಜ್ವಲ್‌, ದ್ವಿಭಾಷಾ ನೀತಿಯ ಪರವಾದ ನಾಡಿನ ಯುವಕರ ಹೋರಾಟ ಒಂದು ತಾರ್ಕಿಕ ಅಂತ್ಯ ಕಾಣುವವರೆಗೂ ನಾನು ನಿಮ್ಮ ಜೊತೆ ಸದಾ ಇರುತ್ತೇನೆ. ಮುಂದಿನ ದಿನಗಳಲ್ಲಿ ಈ ವಿಷಯದ ಬಗ್ಗೆ ಲೋಕಸಭೆಯ ಒಳಗೂ, ಹಾಗೂ ಲೋಕಸಭೆಯ ಹೊರಗೂ ಹೋರಾಡುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯುವುದರೊಂದಿಗೆ ತ್ರಿಭಾಷಾ ನೀತಿಗೆ ಅಂತ್ಯ ಹಾಡಲು ಶ್ರಮಿಸೋಣ ಎಂದಿದ್ದಾರೆ.

ಹಿಂದಿ ಹೇರಿಕೆಯ ಕೂಗು ಪ್ರಬಲವಾಗುತ್ತಿರುವ ದಿನಗಳಲ್ಲಿ ದ್ವಿಭಾಷಾ ನೀತಿಯು ಜಾರಿಗೆ ಬರಬೇಕು ಎನ್ನುವ ಕನ್ನಡಿಗರ ಧ್ವನಿ ಇನ್ನಷ್ಟು ಗಟ್ಟಿಯಾಗಬೇಕಿದೆ. 130 ಕೋಟಿ ಭಾರತೀಯರೆಲ್ಲರೂ ಹಿಂದಿ ಕಲಿಯಲೇ ಬೇಕು ಎನ್ನುವುದು ಮೂರ್ಖತನದ ಪರಮಾವಧಿ ಅಲ್ಲದೇ ಮತ್ತೇನು..?? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಈಗಾಗಲೇ ಕಾರ್ಯ ನಿರ್ವಹಣೆ ಮಾಡುತ್ತಿರುವಾಗ ಹಿಂದಿಯನ್ನು ಕಡ್ಡಾಯವಾಗಿ ಕಲಿಯಬೇಕು ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ. ಹಿಂದಿಯ ಬದಲಾಗಿ ನಮ್ಮ ರಾಜ್ಯದ ಭಾಷೆಗಳಾದ ತುಳು, ಕೊಡವ ಭಾಷೆಗಳಿಗೆ ಮಾನ್ಯತೆ ಕೊಟ್ಟು ತೃತೀಯ ಭಾಷೆಗಳನ್ನಾಗಿ ಕಲಿಯೋಣ ಎಂದು ಸರಣಿ  ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com