ಡಿ ಕೆ ಶಿವಕುಮಾರ್ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ, ಈ ಬಗ್ಗೆ ತನಿಖೆ ನಡೆಸಿ:ಡಿ ಕೆ ಸುರೇಶ್ ಒತ್ತಾಯ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಫೋನ್ ಕರೆಗಳನ್ನು ಕದ್ದಾಲಿಸಲಾಗುತ್ತಿದೆ, ಈ ಬಗ್ಗೆ ಸರಿಯಾದ ತನಿಖೆ ನಡೆಯಬೇಕು ಎಂದು ಸಂಸದ ಹಾಗೂ ಅವರ ಸೋದರ ಡಿ ಕೆ ಸುರೇಶ್ ಒತ್ತಾಯಿಸಿದ್ದಾರೆ.
ಡಿ ಕೆ ಸುರೇಶ್ ಮತ್ತು ಡಿ ಕೆ ಶಿವಕುಮಾರ್
ಡಿ ಕೆ ಸುರೇಶ್ ಮತ್ತು ಡಿ ಕೆ ಶಿವಕುಮಾರ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಫೋನ್ ಕರೆಗಳನ್ನು ಕದ್ದಾಲಿಸಲಾಗುತ್ತಿದೆ, ಈ ಬಗ್ಗೆ ಸರಿಯಾದ ತನಿಖೆ ನಡೆಯಬೇಕು ಎಂದು ಸಂಸದ ಹಾಗೂ ಅವರ ಸೋದರ ಡಿ ಕೆ ಸುರೇಶ್ ಒತ್ತಾಯಿಸಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ಜನರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ತಡೆಯೊಡ್ಡುತ್ತದೆ ಎಂದು ಆರೋಪಿಸಿರುವ ಅವರು, ಟೆಲಿಫೋನ್ ಕದ್ದಾಲಿಕೆ ವಿಷಯವನ್ನು ನಾವು ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದೇವೆ. ಕಳೆದ 10-15 ದಿನಗಳಿಂದ ಫೋನ್ ಕರೆಗಳು ಮಾಡುವ ಸಂದರ್ಭದಲ್ಲಿ ಸಾಕಷ್ಟು ಅಡೆತಡೆಗಳು ಉಂಟಾಗುತ್ತಿವೆ ಎಂದರು.

ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಡಿ ಕೆ ಶಿವಕುಮಾರ್ ಅವರು ಜನ ಧ್ವನಿ ಕಾರ್ಯಕ್ರಮ ಆರಂಭಿಸಿದ ಮೇಲೆ ಅವರ ಫೋನ್ ನ್ನು ಕದ್ದಾಲಿಕೆ ಮಾಡಲಾಗುತ್ತಿದೆ. ಅವರು ಮೊಬೈಲ್, ಫೋನ್ ನಲ್ಲಿ ಮಾತನಾಡುವಾಗ ಸಾಕಷ್ಟು ಅಡೆತಡೆಗಳು, ಧ್ವನಿಗಳು ಬರುತ್ತಿರುತ್ತದೆ. ಬಿಜೆಪಿಯವರು ಫೋನ್ ಕದ್ದಾಲಿಕೆ ಮಾಡುವುದಲ್ಲಿ ಎಕ್ಸ್ ಪರ್ಟ್. ನಮ್ಮ ಸರ್ಕಾರ ಇರುವಾಗ ಏನು ಮಾಡಿದ್ದೇವೆ, ಏನಾಗಿದೆ ಎಂದು ಮಾತನಾಡುತ್ತಾ ಕೂರುವ ಬದಲು ನೀವು ಈಗ ಏನು ಮಾಡುತ್ತಿದ್ದೀರಿ ಎಂದು ಯೋಚಿಸಿ, ನಮ್ಮ ಆರೋಪದ ಬಗ್ಗೆ ತನಿಖೆ ಮಾಡುವುದು ಸರ್ಕಾರದ ಕರ್ತವ್ಯ ಎಂದು ಡಿ ಕೆ ಸುರೇಶ್ ಹೇಳಿದ್ದಾರೆ.

ಕಳೆದ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ತಮ್ಮ ಪೋನ್ ಕರೆಗಳನ್ನು ಕದ್ದಾಲಿಸಲಾಗುತ್ತಿದೆ ಎಂದು ಶಿವಕುಮಾರ್ ಸಂಶಯ ವ್ಯಕ್ತಪಡಿಸಿದ್ದರು. ಆಗ ಐಟಿ ಇಲಾಖೆ ದಾಳಿ ಹಿನ್ನೆಲೆಯಲ್ಲಿ ಜೈಲಿಗೆ ಹೋಗಿ ಬಂದ ಶಿವಕುಮಾರ್ ಅವರು ಫೋನ್ ಟ್ಯಾಪಿಂಗ್ ಬಗ್ಗೆ ಮಾತನಾಡಬಾರದು ಎಂದು ಸಚಿವರಾದ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಶಿವಕುಮಾರ್ ಗೆ ಟಾಂಗ್ ಕೊಟ್ಟಿದ್ದರು. ಗೃಹ ಸಚಿವ ಬಸವರಾಜ ಬೊಮ್ಮಾಯಿಯವರೇ ಶಿವಕುಮಾರ್ ಆರೋಪವನ್ನು ತಳ್ಳಿ ಹಾಕಿದ್ದರು.

ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಶಿವಕುಮಾರ್ ಅವರು ಪಕ್ಷಕ್ಕೆ ನಿಷ್ಠಾವಂತರಾಗಿ ಗುಜರಾತ್ ನ ಕಾಂಗ್ರೆಸ್ ಶಾಸಕರು ಬಿಜೆಪಿಯ ಕುದುರೆ ವ್ಯಾಪಾರದ ಆಮಿಷಕ್ಕೆ ಬಲಿಯಾಗಬಾರದು ಎಂದು ಬೆಂಗಳೂರಿನ ರೆಸಾರ್ಟ್ ನಲ್ಲಿರಿಸಿದ್ದಕ್ಕೆ ಬಿಜೆಪಿ ಅವರ ಮೇಲೆ ಐಟಿ ಇಲಾಖೆ ದಾಳಿ ನಡೆಸಿ ಜೈಲಿಗೆ ಕಳುಹಿಸುವಂತೆ ಮಾಡಿತು ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಕಳೆದ ಬಾರಿಯ ಸರ್ಕಾರದ ವೇಳೆ ಟೆಲಿಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಕಳೆದ ವರ್ಷ ಆಗಸ್ಟ್ ನಲ್ಲಿ ಬಿಜೆಪಿ ಸರ್ಕಾರ ತನಿಖೆಗೆ ಆದೇಶಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com