ನಾನು ರಾಷ್ಟ್ರೀಯವಾದಿ, ಪ್ರಧಾನಿ ಮೋದಿಯವರ ಕಾರ್ಯವೈಖರಿ, ದೂರದೃಷ್ಟಿ ಕಂಡು ಬಿಜೆಪಿ ಸೇರಿದ್ದೇನೆ:ಕೆ ಅಣ್ಣಾಮಲೈ

ಭಾರತೀಯ ಪೊಲೀಸ್ ಸೇವೆಗೆ ಸ್ವಯಂ ನಿವೃತ್ತಿ ಘೋಷಿಸಿ ಒಂದು ವರ್ಷವಾದ ನಂತರ ಕೆ ಅಣ್ಣಾಮಲೈ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇನ್ನು ಕೆಲ ತಿಂಗಳಲ್ಲಿ ತಮಿಳು ನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು ಈ ಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ, ಅದು ರಾಜಕೀಯದಲ್ಲಿ.
ಕೆ ಅಣ್ಣಾಮಲೈ
ಕೆ ಅಣ್ಣಾಮಲೈ

ಬೆಂಗಳೂರು: ಭಾರತೀಯ ಪೊಲೀಸ್ ಸೇವೆಗೆ ಸ್ವಯಂ ನಿವೃತ್ತಿ ಘೋಷಿಸಿ ಒಂದು ವರ್ಷವಾದ ನಂತರ ಕೆ ಅಣ್ಣಾಮಲೈ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇನ್ನು ಕೆಲ ತಿಂಗಳಲ್ಲಿ ತಮಿಳು ನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು ಈ ಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ, ಅದು ರಾಜಕೀಯದಲ್ಲಿ.

ಉಡುಪಿ-ಚಿಕ್ಕಮಗಳೂರಿನ ಮಾಜಿ ಎಸ್ಪಿಯಾಗಿದ್ದ ಮತ್ತು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದ ಅಣ್ಣಾಮಲೈಯವರು ತಮಿಳು ನಾಡಿನಲ್ಲಿ ಬಿಜೆಪಿಯ ಮೂಲಕ ತಳಮಟ್ಟದಿಂದ ಕೆಲಸ ಮಾಡಿ ಪಕ್ಷವನ್ನು ಮುನ್ನಡೆಸುವ ಮನಸ್ಸು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ್ದಾರೆ:
ರಾಜಕೀಯ ಪ್ರವೇಶಿಸುವ ಮೂಲಕ ತಮಿಳು ನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಈಗಿನಿಂದಲೇ ತಯಾರಿ ನಡೆಸುತ್ತೀರೇ?
ಇಲ್ಲ, ತಮಿಳು ನಾಡಿನಲ್ಲಿ ಸಾಮಾಜಿಕ ಬದಲಾವಣೆ ತರಲು, ಜನರಿಗೆ ನಿಜವಾದ ಸ್ವಾತಂತ್ರ್ಯ ಸಿಗಲು ರಾಜಕೀಯಕ್ಕೆ ಸೇರಿ ಏನಾದರೊಂದು ಬದಲಾವಣೆಗೆ ಪ್ರಯತ್ನ ಮಾಡಬೇಕು ಎಂದು ನನಗೆ ಅನಿಸಿತು. ನಾವು ಏನೇ ಮಾಡಿದರೂ ಕೊನೆಗೆ ನಮ್ಮ ಕೆಲಸಗಳಿಗೆ ರಾಜಕೀಯದವರನ್ನು ಭೇಟಿ ಮಾಡಲೇಬೇಕು. ನಾನು ಸರಿಯಾಗಿ ಯೋಚಿಸಿ ಮಾಡಿಕೊಂಡ ತೀರ್ಮಾನವಿದು. ಇನ್ನು ಕೆಲ ವರ್ಷಗಳವರೆಗೆ ರಾಜಕೀಯಕ್ಕೆ ಸೇರಬೇಕೆಂದು ಆರಂಭದಲ್ಲಿ ಯೋಚಿಸಿರಲಿಲ್ಲ, ಆದರೆ ಈಗ ಅಧಿಕೃತವಾಗಿ ಬಿಜೆಪಿಗೆ ಸೇರಿದ್ದೇನೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಿಲ್ಲುವುದಿಲ್ಲ. ರಾಜ್ಯದ ಜನತೆ ಪರವಾಗಿ ಕೆಲಸ ಮಾಡಲು ನನಗೆ ಸಿಕ್ಕಿರುವ ಒಳ್ಳೆಯ ಅವಕಾಶವಿದು. ಇದು ನನಗೊಂದು ಸ್ಪೂರ್ತಿಯ ವೇದಿಕೆ.

ಬಿಜೆಪಿಯನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ?
-ನಾನು ಯಾವತ್ತಿಗೂ ರಾಷ್ಟ್ರೀಯವಾದಿ.ನರೇಂದ್ರ ಮೋದಿಯವರ ಕಾರ್ಯವೈಖರಿ, ಅವರ ದೂರದೃಷ್ಟಿ ನನಗೆ ತುಂಬಾ ಇಷ್ಟ. ತಮಿಳು ನಾಡಿನಲ್ಲಿ ದ್ರಾವಿಡಿಯನ್ ಪಕ್ಷ ಬಿಜೆಪಿ ಬಗ್ಗೆ ಋಣಾತ್ಮಕ ಗ್ರಹಿಕೆಯನ್ನೇ ಇಟ್ಟುಕೊಂಡಿದೆ. ನನಗೆ ಅದರ ಬಗ್ಗೆ ಆತಂಕವಿಲ್ಲ. ನನ್ನ ಹೃದಯ, ತಿಳುವಳಿಕೆ ಏನು ಹೇಳುತ್ತದೆ ಅದರ ಪ್ರಕಾರವೇ ನಡೆದುಕೊಳ್ಳುತ್ತಿದ್ದೇನೆ, ಭಾರತ ಮತ್ತು ತಮಿಳು ನಾಡಿನ ಅಭಿವೃದ್ಧಿಗೆ ಬಿಜೆಪಿ ಸರಿಯಾದ ಪಕ್ಷ ಎಂದು ನನಗೆ ಅನಿಸುತ್ತಿದೆ.

ನೀವು ವೃತ್ತಿ ಬಿಡಲು ಕಾರಣ?
-2018ರಲ್ಲಿ ಮೂರು ತಿಂಗಳು ಕೈಲಾಸ ಪ್ರವಾಸ ಹೋಗಿದ್ದೆ.ಆಗ ನನ್ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎನಿಸಿತು. ಸಮಾಜ ಸೇವೆಗೆ ಇಳಿದು ಜನತೆ ಪರವಾಗಿ ಕೆಲಸ ಮಾಡಬೇಕೆಂದು ತೀರ್ಮಾನಿಸಿದೆ. ರಾಜಕೀಯಕ್ಕೆ ಸೇರಬೇಕೆಂಬ ಉದ್ದೇಶ, ಆಲೋಚನೆ ಇರಲಿಲ್ಲ, ಜೀವನ ಬಂದ ಹಾಗೆ ಸಾಗಿದ್ದೇನೆ.

ಕರ್ನಾಟಕದಲ್ಲಿ ನೀವು ಜನಪ್ರಿಯ ಪೊಲೀಸ್ ಅಧಿಕಾರಿಯಾಗಿದ್ದಿರಿ. ಈಗ ರಾಜಕೀಯಕ್ಕೆ ತಮಿಳು ನಾಡನ್ನು ಆಯ್ಕೆ ಮಾಡಿಕೊಂಡಿದ್ದೀರಲ್ಲ?
-ಬಿಜೆಪಿ ರಾಷ್ಟ್ರೀಯ ಪಕ್ಷ. ತಮಿಳು ನಾಡಿನ ರಾಜಕೀಯದಲ್ಲಿ ಹೊಸ ದಿಕ್ಕು ಮತ್ತು ಹಾದಿ ಕಾಣಬೇಕು. ಬಿಜೆಪಿ ನಾಯಕರು ನನಗೆ ದೇಶದ ಯಾವ ಭಾಗದಲ್ಲಾದರೂ ಕೆಲಸ ಮಾಡಲು ಹೇಳಬಹುದು. ರಾಷ್ಟ್ರ ಪಕ್ಷದ ಒಂದು ಉತ್ತಮ ಅಂಶ ಅದು. ನನಗೆ ಏನೇ ಜವಾಬ್ದಾರಿ ಕೊಟ್ಟರೂ ಚೆನ್ನಾಗಿ ನಿಭಾಯಿಸಿಕೊಂಡು ಹೋಗಲು ನೋಡುತ್ತೇನೆ.

ತಮಿಳು ನಾಡಿನಲ್ಲಿ ಪಕ್ಷಕ್ಕೆ ಏನು ಸವಾಲಿದೆ ಎಂದು ನಿಮಗೆ ಅನಿಸುತ್ತದೆ?
ಬಿಜೆಪಿ ಈಗಿರುವ ಸ್ಥಾನದಿಂದ ಅದನ್ನು ಮುಂದಕ್ಕೆ ಕೊಂಡೊಯ್ಯುವುದು ತಮಿಳು ನಾಡಿನಲ್ಲಿರುವ ದೊಡ್ಡ ಸವಾಲು. ಹಿಂದಿ ಭಾಷೆ ಮತ್ತು ಇತರ ನೀತಿಗಳ ಕುರಿತು ರಾಜ್ಯದಲ್ಲಿ ಬಿಜೆಪಿ ಬಗ್ಗೆ ಸಾಕಷ್ಟು ತಪ್ಪು ಗ್ರಹಿಕೆ ಇದೆ. ತಮಿಳು ನಾಡಿನಲ್ಲಿ ಅನೇಕ ದ್ರಾವಿಡ ಪಕ್ಷಗಳ ನಾಯಕರು ಸುದ್ದಿ ಚಾನೆಲ್ ಗಳನ್ನು ನಡೆಸುತ್ತಿದ್ದಾರೆ, ಹೀಗಾಗಿ ಅವರ ಅಧೀನದಲ್ಲಿ ಹಲವು ಸುಳ್ಳು ಸುದ್ದಿಗಳು ಹಬ್ಬುತ್ತಿವೆ. ಅದು ನಿಜಕ್ಕೂ ಬಿಜೆಪಿಗಿರುವ ಸವಾಲು. ರಾಜ್ಯದ ಯುವಕರು ಬಿಜೆಪಿಯ ನಿಲುವೇನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಇಂದಿನ ಯುವಜನತೆ ರಾಜಕೀಯಕ್ಕೆ ಬರಬೇಕು ಎನಿಸಿದರೆ ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತದಿಂದ ದೂರವಿರುವ ಏಕೈಕ ಪಕ್ಷವೆಂದರೆ ಅದು ಬಿಜೆಪಿ ಮಾತ್ರ.ಇನ್ನು ದಿನಗಳು, ವರ್ಷಗಳು ಕಳೆದಂತೆ ಜನ ಬಿಜೆಪಿಯತ್ತ ವಾಲುತ್ತಾರೆ.

ಈಗಿಲ್ಲದಿದ್ದರೆ ಮುಂದೆಯಾದರೂ ಚುನಾವಣೆಗೆ ಸ್ಪರ್ಧಿಸುವುದಾದರೆ ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ?
-ಚುನಾವಣಾ ರಾಜಕೀಯ ಬಗ್ಗೆ ನನಗೆ ಸದ್ಯಕ್ಕೆ ಯೋಚನೆಯೇ ಇಲ್ಲ. ಈಗ ನನಗೆ ಕೆಲಸ ಮಾಡಲು ಸಿಕ್ಕಿರುವ ಅವಕಾಶ ಎಂದು ಮಾತ್ರ ಯೋಚಿಸುತ್ತೇನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com