ಸಾರಾ ಮಹೇಶ್ ಕೊಚ್ಚೆ ಗುಂಡಿ, ಕಲ್ಲೆಸೆದು ಹೊಲಸು ಮಾಡಿಕೊಳ್ಳಲ್ಲ; 'ಸುಪ್ರೀಂ'ಗೆ ಮೇಲ್ಮನವಿ ಸಲ್ಲಿಸಲು ಎಚ್. ವಿಶ್ವನಾಥ್ ನಿರ್ಧಾರ!

ಸಚಿವ ಸ್ಥಾನಕ್ಕೆ ವಿಶ್ವನಾಥ್ ಅನರ್ಹ ಎಂದು ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದ ವಿರುದ್ದ ಮೇಲ್ಮನವಿ ಸಲ್ಲಿಸಲು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ನಿರ್ಧರಿಸಿದ್ದಾರೆ.
ಎಚ್ ವಿಶ್ವನಾಥ್
ಎಚ್ ವಿಶ್ವನಾಥ್

ಬೆಂಗಳೂರು: ಸಚಿವ ಸ್ಥಾನಕ್ಕೆ ವಿಶ್ವನಾಥ್ ಅನರ್ಹ ಎಂದು ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದ ವಿರುದ್ದ ಮೇಲ್ಮನವಿ ಸಲ್ಲಿಸಲು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ನಿರ್ಧರಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಿಂದ ಸಹಾಯ ಪಡೆದುಕೊಂಡು ಸರ್ಕಾರ ರಚನೆ ಮಾಡಿ ಈಗ ಎಲ್ಲ ಅನುಭವಿಸುತ್ತಿರುವವರು ನಮ್ಮ ಕಷ್ಟ ಕಾಲದಲ್ಲಿ ಏಕೆ ಸಹಾಯಕ್ಕೆ ಬರಲಿಲ್ಲ‌. ತಮ್ಮ ಹೆಸರನ್ನು ಮಂತ್ರಿಸ್ಥಾನದ ಪಟ್ಟಿಯಿಂದ ಏಕೆ ತೆಗೆಸಿದರು ಎನ್ನುವುದು  ಗೊತ್ತಿಲ್ಲ. ಆದರೂ ತಾವು ಅದನೆಲ್ಲಾ ಎದುರಿಸಿ ನಿಲ್ಲುತ್ತೇನೆ ಎಂದು ಹೇಳಿದರು. 

ಅಂತೆಯೇ ಸಚಿವ ಸ್ಥಾನಕ್ಕೆ ವಿಶ್ವನಾಥ್ ಅನರ್ಹ ಎಂದು ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶಕ್ಕೆ ಬೇಸರಗೊಂಡಿರುವ ವಿಶ್ವನಾಥ್, ಹೈಕೋರ್ಟ್ ತೀರ್ಪು ಕೇವಲ ಸಚಿವ ಸ್ಥಾನಕ್ಕೆ ಸೀಮಿತವಾಗಿದೆ. ಆದರೆ ವಿಧಾನಪರಿಷತ್ ಸದಸ್ಯತ್ವ ಸ್ಥಾನ ಅಬಾಧಿತ ಎಂದು ನಗರದಲ್ಲಿ  ಸುದ್ದಿಗಾರರಿಗೆ ತಿಳಿಸಿದರು.

ಇದೇ ವೇಳೆ ಹೈ ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಅವರು, ತೀರ್ಪಿನ ಪ್ರತಿ ಕೈ ಸೇರಿದ ಮೇಲೆ ವಕೀಲರೊಂದಿಗೆ ಚರ್ಚಿ ಮುಂದಿನ ಕ್ರಮ ಕೂಗೊಳ್ಳುತ್ತೇವೆ. ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸುವ ಕುರಿತು ಸಹ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಸಾರಾ ಮಹೇಶ್ ಕೊಚ್ಚೆ ಗುಂಡಿ, ಕಲ್ಲೆಸೆದು ಹೊಲಸು ಮಾಡಿಕೊಳ್ಳಲ್ಲ
ಹೈ ಕೋರ್ಟ್ ತೀರ್ಪಿನ ಕುರಿತು ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಎಚ್.ವಿಶ್ವನಾಥ್ ವಿರುದ್ಧ ಕಿಡಿಕಾರಿ, ನ್ಯಾಯದೇವತೆ ಶಿಕ್ಷೆ ನೀಡಿದ್ದಾಳೆ ಎಂದು ಹೇಳಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಾರಾ ಮಹೇಶ್ ಕೊಚ್ಚೆ ಗುಂಡಿ, ಅವರ ಬಗ್ಗೆ ನಾನು ಮಾತಾಡಲ್ಲ. ಅವರ  ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ. ಪದೇ ಪದೇ ಕಲ್ಲೆಸೆದು ಶುಭ್ರ ಬಟ್ಟೆ ಕೊಳೆ ಮಾಡಿಕೊಳ್ಳುವುದಿಲ್ಲ. ಸಾರಾ ಮಹೇಶನ ಕೊಚ್ಚೆ ಗುಂಡಿಗೆ ಕಲ್ಲು ಎಸೆದು ಪದೇ ಪದೇ ಕೊಳೆ ಮಾಡಿಕೊಳ್ಳಲು ನಾನು ಇಷ್ಟಪಡುವುದಿಲ್ಲ. ಇದರಿಂದ ನನ್ನ ಶುಭ್ರ ವಸ್ತ್ರವನ್ನು ಕೊಳೆ ಮಾಡಿಕೊಳ್ಳಲು ನಾನು  ತಯಾರಿಲ್ಲ. ಯಾರ ಬಗ್ಗೆ ಏನು ಮಾತನಾಡಬೇಕು ಎಂಬ ಅರಿವಿಲ್ಲದೆ, ಬಾಯಿಗೆ ಬಂದಂತೆ ಮಾತನಾಡುವವರಿಗೆ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಅಸಾಂವಿಧಾನಿಕ ಎಂದಿದ್ದ ಹೈಕೋರ್ಟ್‌
ಇನ್ನು ನಿನ್ನೆ ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್ ಅವರು ಸಚಿವರಾಗುವುದು ಅಸಾಂವಿಧಾನಿಕ ಎಂದು ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿತ್ತು. ಅನರ್ಹ ಶಾಸಕರಾಗಿದ್ದ ಹಾಗೂ ಸದ್ಯ ವಿಧಾನ ಪರಿಷತ್‌ ಸದಸ್ಯರಾಗಿರುವ ಎಚ್ ವಿಶ್ವನಾಥ್, ಆರ್. ಶಂಕರ್ ಮತ್ತು ಎಂಟಿಬಿ  ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್‌ ವಿಭಾಗೀಯ ಪೀಠ ವಿಶ್ವನಾಥ್‌ ಅವರು ವಿಧಾನಪರಿಷತ್‌ಗೆ ನಾಮ ನಿರ್ದೇಶನಗೊಂಡು ಸದಸ್ಯರಾಗಿರುವುದರಿಂದ ಅವರು ಸಚಿವರಾಗಲು ಸಾಧ್ಯವಿಲ್ಲ‌‌. ಈ  ವಿಚಾರವನ್ನು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪನವರು ಪರಿಗಣಿಸಬೇಕು ಎಂದು ತಿಳಿಸಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com